ದಿ-ತಾಜ್ ರೆಸಾರ್ಟ್ ಸಿಬ್ಬಂದಿ ಕೊಲೆ ಪ್ರಕರಣ:ಆರೋಪಿಯ ಬಂಧನ
ಮಡಿಕೇರಿ:ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ದಿ ತಾಜ್ ರೆಸಾರ್ಟ್‌ನಲ್ಲಿ ಐಡಿಯಲ್ ಸೊಲ್ಯೂಷನ್ಸ್, ಬೆಂಗಳೂರು ಕಂಪನಿಯ ವತಿಯಿಂದ ಹೊರಗುತ್ತಿಗೆ ಆಧಾರದ ಮೇರೆಗೆ ಗಾರ್ಡನಿಂಗ್ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ 1 ನೇ ಮೊಣ್ಣಂಗೇರಿ ಗ್ರಾಮದಲ್ಲಿರುವ ಕೋರಮಂಡಲ ಬೀಚ್ ಪ್ರಾಪರ್ಟಿಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಸೇರಿದ ವಸತಿ ಗೃಹದಲ್ಲಿ ವಸತಿ ವ್ಯವಸ್ಥೆ ಇದ್ದು, ದಿನಾಂಕ: 07-11-2025 ರಂದು ಸಮಯ ಸುಮಾರು 08:30 ಪಿ.ಎಂ ಗೆ ಸದರಿ ವಸತಿ ಗೃಹದಲ್ಲಿ ವಾಸವಿದ್ದ ಅಸ್ಸಾಂನ ಮೂಲದ ದೀಲೀಪ್ ಶರ್ಮಾ, 36 ವರ್ಷ, ಮತ್ತು ಆತನೊಂದಿಗೆ ಪಕ್ಕದ ರೂಮ್ ನಲ್ಲಿ ವಾಸವಿದ್ದ ದಯಾನಂದ ಪ್ರಸಾದ್, 41 ವರ್ಷ ಕುಡಿದು ಗಲಾಟೆ ಮಾಡಿ ಬಾಟಲಿಯನ್ನು ಮನೆಯ ಮೆಟ್ಟಿಲಿನ ಬಳಿ ಇರುವ ಕಟ್ಟೆಗೆ ಒಡೆದು ಹಾಕಿದ ಸ್ಥಳದ ವಿಡಿಯೋವನ್ನು ದಿಲೀಪ್ ಶರ್ಮಾನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ಅವರ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗೆ ಕಳುಹಿಸಿಕೊಡುತ್ತೇನೆಂದು ವಿಡಿಯೋ ಮಾಡಿದ್ದು, ದಯಾನಂದ ಪ್ರಸಾದನು ಕೋಪಗೊಂಡು ದಿಲೀಪ್ ಶರ್ಮಾನೊಂದಿಗೆ ಜಗಳಮಾಡಿ,
ಕೆನ್ನೆಯ ಭಾಗ, ಎದೆಯಭಾಗ ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದು, ಇದರಿಂದ ಗಂಭೀರ ಗಾಯಗೊಂಡ ದಿಲೀಪ್ ಶರ್ಮಾನನ್ನು ಚಿಕಿತ್ಸೆಗೆಂದು ಮಡಿಕೇರಿಯ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ದಾಖಲಿಸುವ ಸಂದರ್ಭ ಘಟನೆ ಸಮಯದಲ್ಲಿ ಜೊತೆಗಿದ್ದ ಪ್ರತ್ಯಕ್ಷ ಸಾಕ್ಷಿದಾರರಾದ ಸಂತೋಷ್ ಕುಮಾರ್ ಎಂಬಾತನು ದಿಲೀಪ್ ಶರ್ಮಾನು ಮನೆಯ ಸ್ಟೇರ್ ಕೇಸ್ ನಿಂದ ಬಿದ್ದು ಗಾಯಗೊಂಡರುವುದಾಗಿ ಹೇಳಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ.
ಗಾಯಗೊಂಡಿದ್ದ ದಿಲೀಪ್ ಶರ್ಮನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿಯೂ ಸ್ವಂತ ಭಾವನಾಗಿರುವ (ಹೆಂಡತಿ ತಮ್ಮ) ಆರೋಪಿ ದಯಾನಂದ ಪ್ರಸಾದ್ ಗೆ ಯಾವುದೇ ತೊಂದರೆ ಆಗಬಾರದೆಂದು ಸ್ಟೇರ್ ಕೇಸ್‌ನಿಂದ ಬಿದ್ದು ಗಾಯವಾಗಿರುವುದಾಗಿ ವೈದ್ಯರಿಗೆ ಸುಳ್ಳು ಮಾಹಿತಿ ನೀಡಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ.
ದಿನಾಂಕ: 08-11-2025 ರಂದು ಚಿಕಿತ್ಸೆ ಫಲಕಾರಿಯಾಗದೆ ದಿಲೀಪ್ ಶರ್ಮಾ ಕೆ.ಆರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಸದರಿ ಪ್ರಕರಣದ ವಿಚಾರಣೆ ಸಲುವಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ತೆರಳಿ ವಿಚಾರಣೆಯನ್ನು ಮಾಡಿದಾಗ ಮೃತ ದಿಲೀಪ್ ಶರ್ಮಾನಿಗೆ ದಯಾನಂದ ಪ್ರಸಾದ ಎಂಬಾತ ಚಾಕುವಿನಿಂದ ಇರಿದ ಪರಿಣಾಮ ಮೃತಪಟ್ಟಿರುವುದು ಕಂಡು ಬಂದಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ:103(1) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿ ದಯಾನಂದ ಪ್ರಸಾದನ ಭಾಮೈದ ಸಂತೋಷ್ ಕುಮಾರ್ ಎಂಬಾತ ತನ್ನ ಭಾವ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ದಿಲೀಪ್ ಶರ್ಮಾನು ಮೃತ ಪಟ್ಟಿದ್ದಾನೆ ಎಂಬ ವಿಷಯ ಗೊತ್ತಿದ್ದರು ಸಹ ಸತ್ಯ ಮಾಹಿತಿಯನ್ನು ತಿಳಿಸದೆ ವೈದ್ಯರಿಗೆ ಸ್ಟೇರ್‌ಕೇಸ್ ನಿಂದ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ ಮೇರೆಗೆ ಸಂತೋಷ್ ಬಿನ್‌ನ ಮೇಲೆಯೂ ಸಹ ಕಲಂ: 239, 240 ಬಿಎನ್‌ಸ್ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿ ಪತ್ತೆಗಾಗಿ ಶ್ರೀ ಸೂರಜ್.ಪಿ.ಎ, ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ಶ್ರೀ ಚಂದ್ರಶೇಖರ್.ಹೆಚ್.ವಿ, ಪಿಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂಗಳು ಒಳಗೊಂಡಂತೆ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ
ದಿನಾಂಕ: 10-11-2025 ರಂದು ಅಸ್ಸಾಂ ರಾಜ್ಯ ಮೂಲದ 1ನೇ ಮೊಣ್ಣಂಗೇರಿ ಗ್ರಾಮದ ಆರೋಪಿ ದಯಾನಂದ ಪ್ರಸಾದ್, 41 ವರ್ಷ ಎಂಬಾತನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.
