ಸಮಾಜದ ಶಬ್ದವಿಲ್ಲದ ಧ್ವನಿ ಛಾಯಾಗ್ರಹಣ

(ವಿಶೇಷ ಲೇಖನ: ವಸಂತ್ ಎಸ್. ಆರ್ ಸೋಮವಾರಪೇಟೆ)
ಛಾಯೆಗಳಲ್ಲಿ ಬದುಕಿನ ಬೆಳಕು —ಏನು ಈ ಬದುಕು? ಕ್ಷಣಗಳು, ನೆನಪುಗಳು, ನಗೆಯ ಮಿಡಿತಗಳು, ಮೌನದ ಮಾತುಗಳು. ಇವೆಲ್ಲವೂ ಸಾಗುವ ಹೊಳೆಯಂತೆ ನಿಂತು ನೋಡಬೇಕಾದರೇನು? ಅವುಗಳನ್ನು ಹಿಡಿದಿಡುವ ಕಲೆಯೇ ಛಾಯಾಗ್ರಹಣ. ವಿಶ್ವ ಛಾಯಾಗ್ರಾಹಕರ ದಿನಾಚರಣೆ ಎಂದರೆ, ಕಣ್ಣುಗಳಿಂದ ಮಾತ್ರವಲ್ಲ, ಹೃದಯದಿಂದ ನೋಡುವವರಿಗೆ ನಮಸ್ಕಾರ ಮಾಡುವ ದಿನ. ಇದು ಕ್ಯಾಮೆರಾ ಹಿಡಿದು ಪ್ರಪಂಚದ ರೂಪವನ್ನೇ ಬದಲಾಯಿಸುವ ಕಲಾವಿದರು, ಕ್ಷಣವನ್ನು ಶಾಶ್ವತಗೊಳಿಸುವ ಮಾಂತ್ರಿಕರಿಗೆ ನಮನ ಸಲ್ಲಿಸುವ ವಿಶೇಷ ಕ್ಷಣ. ಇಂದಿನ ದಿನವನ್ನು ವಿಶ್ವದಾದ್ಯಂತ ವಿಶ್ವ ಛಾಯಾಗ್ರಹಣ ದಿನವಾಗಿ ಆಚರಿಸಲಾಯಿತು. , ಈ ವರ್ಷ ತನ್ನ 186ನೇ ವರ್ಷಾಚರಣೆಗೆ ತಲುಪಿದೆ. ಫೋಟೋಗ್ರಫಿಯ ಆವಿಷ್ಕಾರಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ಸಮಾಜ, ಸಂಸ್ಕೃತಿ, ಪ್ರಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಚಿತ್ರಗಳ ಮೂಲಕ ದಾಖಲಿಸುವ ಮಹತ್ವವನ್ನು ನೆನಪಿಸುವ ದಿನವೆಂದೂ ಇದನ್ನು ಪರಿಗಣಿಸಲಾಗಿದೆ. “ಒಂದು ಫೋಟೋ ಸಾವಿರ ಮಾತು” ಎಂಬ ಮಾತು ಇಂದಿಗೂ ಅಪ್ರತಿಮ ಸತ್ಯ. ಫೋಟೋ ಕೇವಲ ನೆನಪುಗಳ ಸಂಗ್ರಹವಲ್ಲ, ಅದು ಸಮಾಜದ ಬದುಕಿನ ದಾಖಲೆ. ಪತ್ರಿಕೋದ್ಯಮದಿಂದ ಹಿಡಿದು ವಿಜ್ಞಾನ ಸಂಶೋಧನೆ, ಕಲಾ ಲೋಕದಿಂದ ಹಿಡಿದು ಪರಿಸರ ಚಳವಳಿವರೆಗೂ ಫೋಟೋಗ್ರಫಿ ಅಪ್ರತಿಮ ಕೊಡುಗೆ ನೀಡುತ್ತಿದೆ. ಛಾಯಾಗ್ರಾಹಕನು ಕೇವಲ ಬಿಂಬವನ್ನು ಸೆರೆಹಿಡಿಯುವುದಿಲ್ಲ. ಅವನು ನೋವಿನ ನೋಟವನ್ನೂ ಹಿಡಿಯುತ್ತಾನೆ, ನಗೆಯ ಸ್ಪಂದನವನ್ನೂ. ತಾನು ನೋಡುವ ಪ್ರತಿಯೊಂದು ದೃಶ್ಯವನ್ನು ಕಥೆಯಾಗಿ ರೂಪಿಸುತ್ತಾನೆ. ಕೇವಲ ಒಂದು ಫೋಟೋ ಆದರೆ ಅದರಲ್ಲಿ ಇಡೀ ಬದುಕು ಬಿಟ್ಟಂತೆ! ಅವನ ದೃಷ್ಟಿ ಸಾಮಾನ್ಯವಲ್ಲ. ಒಂದೇ ಸೂರ್ಯಾಸ್ತವನ್ನೂ ಸಾವಿರ ಬಗೆಯಾಗಿ ನೋಡುವ ಮಿಡಿತ ಅವನದು.
ಪಾಠವಿಲ್ಲದೆ ಕಲಿತ ಶಿಲ್ಪಿ, ತಂತ್ರಜ್ಞನಾದಂತೆ ನಿಖರ, ಕವಿಯಂತೆ ಸೂಕ್ಷ್ಮ. ಈ ದಿನ, ನಾವು ಮಾತ್ರವಲ್ಲ, ನಮ್ಮ ಭಾವನೆಗಳು, ನಮ್ಮ ಸಂಸ್ಕೃತಿ, ನಮ್ಮ ಚಲನೆಗಳು, ಅವನ ದೃಷ್ಟಿಯಿಂದ ಬದುಕುತ್ತಿವೆ. ಅವನಿಗೆ ಬೆಳಕು ಮುಖ್ಯ, ಆದರೆ ಅವನು ಛಾಯೆಯನ್ನೂ ಗೌರವಿಸುತ್ತಾನೆ. ಏಕೆಂದರೆ ಛಾಯೆಯಿಲ್ಲದೆ ಚಿತ್ರಕ್ಕೇ ಬಣ್ಣವಿಲ್ಲ. ಈ ದಿನಾಚರಣೆಯು ಸ್ಮರಣೆ, ಸ್ಮಿತ ಮತ್ತು ಕೃತಜ್ಞತೆಯ ಕ್ಷಣವಾಗಲಿ. “ಛಾಯಾಗ್ರಹಣವು ಕೇವಲ ಕಲೆಯಲ್ಲ, ಸಮಾಜದ ಕನ್ನಡಿ” ಎಂಬ ಅರ್ಥದಲ್ಲಿ, ವಿಶ್ವ ಛಾಯಾಗ್ರಹಣ ದಿನವು ಪ್ರತಿ ಫೋಟೋಗ್ರಾಫರ್‌ಗೂ ತನ್ನ ಕೃತಿಗಳ ಮೂಲಕ ಸಮಾಜಕ್ಕೆ ಸಂದೇಶ ತಲುಪಿಸುವ ಜವಾಬ್ದಾರಿಯನ್ನು ನೆನಪಿಸುತ್ತದೆ. ವೀಕ್ಷಣೆ ಎಂಬುದು ಮಾನವ ಮನಸ್ಸಿನ ಸಹಜವೈಶಿಷ್ಟ್ಯ. ಆದರೆ, ಅದನ್ನೇ ಶಾಶ್ವತಗೊಳಿಸಲು ಸಾಧ್ಯವಾಗಿದ್ದು, ಫೋಟೋಗ್ರಫಿಯ ಮೂಲಕವೇ. ಕೇವಲ ದೃಶ್ಯವನ್ನಲ್ಲ, ಭಾವನೆ, ಕಥೆ ಮತ್ತು ಕಾಲದ ಚಿಹ್ನೆಗಳನ್ನು ಹಿಡಿದಿಡುವ ಮಹದ್ಭಾರತವನ್ನೆಂದರೆ ಫೋಟೋಗ್ರಫಿ.
ಫೋಟೋಗ್ರಫಿಯ ಆದಿ ರೂಪಗಳು 19ನೇ ಶತಮಾನದಲ್ಲಿ ಯುರೋಪಿನ ವಿಜ್ಞಾನಿಗಳು ಹಾಗೂ ಕಲಾವಿದರು ಕಲ್ಪನೆಗೂ ಮೀರಿದ ಹೊಸದೊಂದು ಪ್ರಯೋಗಕ್ಕೆ ಮುಂದಾದರು — ಬೆಳಕಿನಿಂದ ಚಿತ್ರ ಸೆರೆಹಿಡಿಯುವ ಪ್ರಯತ್ನ. ಜೋಸೆಫ್ ನೈಸ್‌ಫೋರ್ ನೀಪ್ಸ್ 1826 ರಲ್ಲಿ ತೆಗೆದ ವಿಂಡೋ ವ್ಯೂ ಎಂಬ ಮೊದಲ ಛಾಯಾಚಿತ್ರ, ಇಂದು ಈ ಕಲೆಯ ಹುಟ್ಟುಗಾರಿಕೆಗೆ ನಿದರ್ಶನವಾಗಿದೆ. ಅವನ ನಂತರ ದಾಗುಯೆರ್, ಟಾಲ್ಬಾಟ್ ಮುಂತಾದವರು ಹೊಸ ತಂತ್ರಗಳನ್ನು ತರುವ ಮೂಲಕ ಫೋಟೋಗ್ರಫಿಯನ್ನು ಸಾಮಾನ್ಯ ಜನತೆಯ ಬಳಿಯವರೆಗೆ ತಲುಪಿಸಿದರು. ಸ್ಟುಡಿಯೋಗಳಲ್ಲಿ ಬಂಗಾರದ ಫ್ರೇಮ್‌ಗಳು, ಬಿಳಿ-ಕಪ್ಪು ಛಾಯಾಚಿತ್ರಗಳು — ಇವೆಲ್ಲವೂ ಒಂದು ಕಾಲಘಟ್ಟದ ಪ್ರತಿಬಿಂಬಗಳಾಗಿದವು.
ಛಾಯಾಗ್ರಹಣ — ಸಮಾಜದ ಕನ್ನಡಿ, ಇತಿಹಾಸದ ಸಾಕ್ಷಿ ಆಗಸ್ಟ್ 19 — ವಿಶ್ವ ಛಾಯಾಗ್ರಹಣ ದಿನ. ಇಂದಿನ ದಿನವು ಕೇವಲ ಒಂದು ಸಾಂಪ್ರದಾಯಿಕ ಆಚರಣೆಯಲ್ಲ; ಇದು ಮಾನವ ಜೀವನದ ಕಣ್ಣಿಗೆ, ಹೃದಯಕ್ಕೆ ಮತ್ತು ಇತಿಹಾಸಕ್ಕೆ ಬೆಳಕು ನೀಡಿದ ಮಹತ್ವದ ಕ್ಷಣವನ್ನು ಸ್ಮರಿಸುವ ದಿನ. 1839ರಲ್ಲಿ ಫ್ರಾನ್ಸ್ ಜಗತ್ತಿಗೆ ಪರಿಚಯಿಸಿದ ಡಾಗ್ಯೂರಿಯೋಟೈಪ್ ಎಂಬ ಫೋಟೋಗ್ರಫಿ ವಿಧಾನವೇ ಇಂದಿನ ಆಧುನಿಕ ದೃಶ್ಯ ಮಾಧ್ಯಮ ಲೋಕಕ್ಕೆ ಬುನಾದಿಯಾಯಿತು. ಇಂದು, ಫೋಟೋ ಕೇವಲ ಒಂದು ಚಿತ್ರವಲ್ಲ. ಅದು ಸಮಾಜದ ಮೌನ ಚರಿತ್ರೆ, ಮನುಷ್ಯನ ಆನಂದ-ದುಃಖಗಳ ಪ್ರತಿಬಿಂಬ, ಪ್ರಕೃತಿಯ ಅಳಿಯದ ನೆನಪು. ಪತ್ರಿಕೋದ್ಯಮದಿಂದ ಹಿಡಿದು ವಿಜ್ಞಾನ, ಕಲಾ ಲೋಕದಿಂದ ಹಿಡಿದು ಪರಿಸರ ಚಳವಳಿವರೆಗೂ, ಛಾಯಾಗ್ರಹಣವು ಸತ್ಯವನ್ನು ತಲುಪಿಸುವ ಶಕ್ತಿಯುತ ಮಾಧ್ಯಮವಾಗಿದೆ.
ಒಂದು ಫೋಟೋ ಸಾವಿರ ಮಾತುಗಳಿಗಿಂತ ಹೆಚ್ಚು ಮಾತನಾಡುತ್ತದೆ ಎಂಬ ನುಡಿ, ಇಂದಿಗೂ ಅಪ್ರತಿಮ ಸತ್ಯ. ಆದರೆ, ಡಿಜಿಟಲ್ ಯುಗದಲ್ಲಿ ಫೋಟೋಗ್ರಫಿ ಸುಲಭವಾಗಿದೆ. ಪ್ರತಿಯೊಬ್ಬರ ಕೈಯಲ್ಲೂ ಕ್ಯಾಮೆರಾ, ಪ್ರತಿಕ್ಷಣವೂ ಕ್ಲಿಕ್ಕಿನ ಸಂಗ್ರಹ. ಆದರೆ, ಪ್ರಶ್ನೆ ಏನೆಂದರೆ — ಇವುಗಳಲ್ಲಿ ಎಷ್ಟು ಚಿತ್ರಗಳು ಸಮಾಜದ ಹಿತದೃಷ್ಟಿಯಿಂದ ಉಳಿಯುತ್ತವೆ? ಎಷ್ಟು ಚಿತ್ರಗಳು ನಾಳೆಯ ಇತಿಹಾಸವನ್ನು ಬರೆಯುತ್ತವೆ? ವೃತ್ತಿಪರ ಛಾಯಾಗ್ರಾಹಕರ ಜವಾಬ್ದಾರಿ ಇಂದು ಹೆಚ್ಚಾಗಿದೆ. ಅವರ ಕೈಯಲ್ಲಿರುವ ಕ್ಯಾಮೆರಾ ಕೇವಲ ಕಲೆಯ ಸಾಧನವಲ್ಲ, ಅದು ಸಮಾಜದ ಬದಲಾವಣೆಗೆ ಶಕ್ತಿಯುತ ಶಸ್ತ್ರ. ಪರಿಸರ ಹಾಳಾಗುತ್ತಿರುವ ದೃಶ್ಯ, ಅನ್ಯಾಯಕ್ಕೊಳಗಾದ ಮನುಷ್ಯನ ಕಣ್ಣೀರಿನ ಚಿತ್ರ, ವಿಜ್ಞಾನ-ತಂತ್ರಜ್ಞಾನಗಳ ಸಾಧನೆಯ ಕ್ಷಣ _ ಇವೆಲ್ಲವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪವಿತ್ರ ಕರ್ತವ್ಯ ಅವರದು. ವಿಶ್ವ ಛಾಯಾಗ್ರಹಣ ದಿನವು ನಮಗೆ ನೆನಪಿಸುವುದೇನೆಂದರೆ: ಫೋಟೋ ಕೇವಲ ನೆನಪಿಗಾಗಿ ಕ್ಲಿಕ್ಕಿಸಬೇಕಾದ ಕ್ಷಣವಲ್ಲ, ಅದು ಒಂದು ಸಂದೇಶ.
ಛಾಯಾಗ್ರಹಣವು ಕೇವಲ ಹವ್ಯಾಸವಲ್ಲ, ಅದು ಮಾನವೀಯ ಮೌಲ್ಯಗಳ ಸಂರಕ್ಷಕ. ಪ್ರತಿಯೊಬ್ಬ ಛಾಯಾಗ್ರಾಹಕರೂ ಸಮಾಜದ ನಿಜವಾದ ಇತಿಹಾಸಕಾರ. ಛಾಯಾಗ್ರಹಣ ಕೇವಲ ಚಿತ್ರವಲ್ಲ — ಅದು ಬದುಕಿನ ನಿಜವಾದ ದಾಖಲೆ. ಬದಲಾಗುವ ಯುಗದ ಬಣ್ಣಗಳು ಅನಂತರ ಬಣ್ಣದ ಛಾಯಾಚಿತ್ರಗಳು ಬಂದವು. ಪೀಳಿಗೆಯೊಂದು ತನ್ನ ಶುದ್ಧ ನೆನಪುಗಳನ್ನು ಚಿತ್ರರೇಖೆಗಳ ರೂಪದಲ್ಲಿ ಬಿಚ್ಚಿಟ್ಟಿತು. ತಂದೆಯ ಮದುವೆಯ ಫೋಟೋ, ತಾಯಿಯ ಮಕ್ಕಳೊಂದಿಗೆ ತೆಗೆದ ಕಚಗುಳಿಯ ಚಿತ್ರ — ಇವೆಲ್ಲವೂ ಅಷ್ಟೆ ಅದೃಷ್ಟದ ಆಲ್ಬಂಗಳು ಹಳೆಯ ಬ್ಲಾಕ್ ಆಂಡ್ ವೈಟ್ ಆಲ್ಬಮ್ಗಳು ಇಂದಿಗೂ ಕಾಣಸಿಗುತ್ತವೆ, ಅಂದಿನ ಛಾಯಗ್ರಾಹಕನ ಕಣ್ಣಿಗೆ ಸೆರೆಯಾದ ಛಾಯಚಿತ್ರವನ್ನು ನೋಡುವುದೇ ಒಂದು ಖುಷಿ. ಫೋಟೋಗ್ರಫಿ ವೃತ್ತಿಪರತೆಯತ್ತ ಸಾಗಿದಂತೆ, ಪತ್ರಿಕೋದ್ಯಮ, ಸಾಹಸಯಾತ್ರೆ, ಯುದ್ಧ, ಪರಿಸರ ಸಂರಕ್ಷಣೆ, ವಾಣಿಜ್ಯ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಛಾಯಾಚಿತ್ರಗಳು ಪ್ರಮುಖ ಪಾತ್ರವಹಿಸಿದವು. ಆಧುನಿಕ ಯುಗದ ಡಿಜಿಟಲ್ ಕ್ರಾಂತಿ ಇAದಿನ ಯುಗವು ಫೋಟೋಗ್ರಫಿಯೇ ತಾನಾಗಿಬಿಟ್ಟಿದೆ ಡಿಜಿಟಲ್ ಕ್ಯಾಮೆರಾಗಳ ಜಾತ್ರೆ, ಸ್ಮಾರ್ಟ್ಫೋನ್‌ನ ಬಹುಮಟ್ಟದ ಕ್ಯಾಮೆರಾ ಸಾಧನಗಳು, ಸಾಮಾಜಿಕ ಜಾಲತಾಣಗಳ ಸೆಳೆತ — ಇವು ಇಂದು ಪ್ರತಿಯೊಬ್ಬನನ್ನೂ ಛಾಯಾಗ್ರಾಹಕನನ್ನಾಗಿಸಿದೆ. ಏನು ಬೇಕಾದರೂ ತೆಗೆದು ತಕ್ಷಣ ಪೋಸ್ಟ್ ಮಾಡಬಹುದು. ಚಿತ್ರಗಳು ಬಣ್ಣಗಳ ಹಬ್ಬವಂತಿವೆ, ಆದರೆ ಕೆಲವು ವೇಳೆ ಭಾವನೆಗಳ ಕೊರತೆಯೂ ಕಾಣಸಿಗುತ್ತದೆ.
ಫಿಲ್ಟರ್ ಗಳೊಳಗಿನ ಪ್ರಪಂಚ ಸುಂದರವಾದರೂ, ನೈಸರ್ಗಿಕ ದೃಶ್ಯಗಳ ಔದಾರ್ಯವನ್ನು ತಲುಪಲಾರದು. ಈಗ ಛಾಯಾಗ್ರಹಣ ತಂತ್ರಜ್ಞಾನವು ಹೊಸ ಹೆಜ್ಜೆ ಇಡುತ್ತಿದೆ — ಎಐ ಆಧಾರಿತ ಇಮೇಜ್ ಎಡಿಟಿಂಗ್, ಡ್ರೋನ್ ಫೋಟೋಗ್ರಫಿ, ವೃತ್ತಿಪರ 360ಲಿ ಕ್ಯಾಮೆರಾಗಳು — ಇವು ಕಲೆಯ ವಿಸ್ತಾರವನ್ನೂ ಪ್ರಭಾವವನ್ನೂ ಹೆಚ್ಚಿಸುತ್ತಿವೆ. ಆದರೆ, ಈ ಎಲ್ಲ ತಂತ್ರಜ್ಞಾನಕ್ಕೂ ಮಿಗಿಲಾದದ್ದು, ವಿಶ್ವ ಛಾಯಾಗ್ರಹಣ ದಿನದ 186ನೇ ವರ್ಷಾಚರಣೆ ನಮಗೆ ನೆನಪಿಸುವುದೆರೆ: ಛಾಯಾಚಿತ್ರ ಕೇವಲ ಚಿತವರವಲ್ಲ, ಅದು ಬದುಕಿನ ನಿಜವಾದ ಸಾಕ್ಷಿ. ಛಾಯಾಗ್ರಹಕನ ದೃಷ್ಟಿ ಮತ್ತು ಹೃದಯದಿಂದ ಕಂಡ ಕ್ಷಣವೊಂದು. ಫೋಟೋಗ್ರಫಿ ಕೇವಲ ಹವ್ಯಾಸವಲ್ಲ, ಅದು ವೃತ್ತಿ, ಕಲೆ, ದಾಖಲೆ, ಮತ್ತು ಸಮಾಜವನ್ನು ಆಳವಾಗಿ ತಲುಪುವ ಮಾಧ್ಯಮ. ಇಂದಿನ ಯುವಕರಿಗೆ, ವಿದ್ಯಾರ್ಥಿಗಳಿಗೆ ಇದು ಉಜ್ವಲ ಭವಿಷ್ಯವಿರುವ ಕ್ಷೇತ್ರವಾಗಿದೆ — ತಂತ್ರಜ್ಞಾನ ಮತ್ತು ಸೃಜನಶೀಲತೆಯ ಸಂಗಮ. ಪ್ರತಿ ಛಾಯಾಚಿತ್ರವೂ ಒಂದು ಕಥೆ. ಅದು ಮಾತಾಡುತ್ತದೆ, ಚುರುಕುಪಡುತ್ತದೆ, ಸೆಂಟಿಮೆಂಟ್ ಹುಟ್ಟಿಸುತ್ತದೆ. ಫೋಟೋಗ್ರಫಿಯು ಬದುಕನ್ನು ಮರಳಿಸದು. ಆದರೆ, ಅದು ಬದುಕಿನ ಒಂದು ಮುತ್ತನ್ನು ಶಾಶ್ವತಗೊಳಿಸುತ್ತದೆ. ಅದರ ಬೆನ್ನು ಹಿಂದೆಯಿರುವ ಛಾಯಾಗ್ರಾಹಕರ ದೃಷ್ಟಿಗೆ, ಧೈರ್ಯಕ್ಕೆ, ಕಲಾತ್ಮಕತೆಗೆ ನಾವು ಎಲ್ಲರೂ ನೆರೆದು ಮೆರೆಯಬೇಕಾದ ದಿನ — ವಿಶ್ವ ಛಾಯಾಗ್ರಾಹಕರ ದಿನ.