ಹಕ್ಕುಪತ್ರ ಪಡೆದುಕೊಂಡವರು ಜಾಗವನ್ನು ಮಾರಾಟ ಮಾಡದೆ ಕಾಪಾಡಿಕೊಳ್ಳಿ: ಶಾಸಕ ಡಾ.ಮಂತರ್ ಗೌಡ

ಹಕ್ಕುಪತ್ರ ಪಡೆದುಕೊಂಡವರು ಜಾಗವನ್ನು ಮಾರಾಟ ಮಾಡದೆ ಕಾಪಾಡಿಕೊಳ್ಳಿ:  ಶಾಸಕ ಡಾ.ಮಂತರ್ ಗೌಡ

ಸೋಮವಾರಪೇಟೆ:ಹಕ್ಕುಪತ್ರ ಪಡೆದುಕೊಂಡವರು ಜಾಗವನ್ನು ಮಾರಾಟ ಮಾಡದೆ ಕಾಪಾಡಿಕೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಕಂದಾಯ ಇಲಾಖೆಯ ವತಿಯಿಂದ ಶಾಸಕರ ಕಚೇರಿ ಎದುರು ನಡೆದ ಹಕ್ಕಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಬುಧವಾರ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.

 ತಿರಸ್ಕೃತಗೊಂಡಿರುವ ಹಕ್ಕುಪತ್ರ ಅರ್ಜಿಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಾಕಿಯಿರುವ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿಂದೆ ಕಂದಾಯ ಇಲಾಖೆ ಮಾಡಿದ ತಪ್ಪುಗಳಿಂದ ಈಗ ಬಡವರು ಹಕ್ಕಪತ್ರಗಳಿಂದ ವಂಚಿತರಾಗಬೇಕಾದ ಸಂಕಷ್ಟ ಬಂದಿದೆ. ಪ್ರಸಕ್ತ ಕಂದಾಯ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ವಾಹನಗಳಲ್ಲಿ ತೆರಳುವ ಸೌಲಭ್ಯವಿದೆ. ಕಂದಾಯ ಇಲಾಖೆಗೆ ಸೇರಬೇಕಾದ ಜಾಗವನ್ನು ಇನ್ನಾದರೂ ಕಾಪಾಡಿಕೊಳ್ಳಬೇಕು. ಬಡವರಿಗೆ ಹಕ್ಕುಪತ್ರ ನೀಡುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹಕ್ಕುಪತ್ರ ನೀಡಬೇಕು ಎಂದು ಹೇಳಿದರು. ಕಂದಾಯ ಇಲಾಖೆಗೆ ಸಲ್ಲಿಕೆಯಾಗಿರುವ, ಸದ್ಯದ ನಿಯಮದಂತೆ ಹಕ್ಕುಪತ್ರಗಳನ್ನು ನೀಡಲು ಸಾಧ್ಯವಾಗದ ಯಾವುದೇ ಅರ್ಜಿಗಳನ್ನು ತಹಸೀಲ್ದಾರ್ ಅವರು ವಜಾ ಮಾಡಬಾರದು. ಪೂರಕವಾದ ನಿಯಮಗಳನ್ನು ಸರ್ಕಾರ ತಂದಾಗ ಕಾನೂನಿನ ಚೌಕಟ್ಟಿನಲ್ಲಿ ಉಳಿಕೆ ಅರ್ಜಿಗಳನ್ನು ವಿಲೇವಾರಿ ಮಾಡಬಹುದು ಎಂದು ಹೇಳಿದರು. ವಡಯನಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿರುವ ಜಾಗದ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮುಂದುವರಿದಿದೆ. ಬಡವರಿಗೆ ಹಕ್ಕುಪತ್ರ ಕೊಡಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು. ಸೋಮವಾರ ಸಂತೆ ದಿನ ತಾಲ್ಲೂಕು ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗಬೇಕು. ಫೀಲ್ಡ್ಗೆ ಹೋಗಿದ್ದಾರೆ ಎಂಬ ಉತ್ತರವನ್ನು ಇನ್ನು ಮುಂದೆ ಕೊಡಬಾರದು. ಈ ಬಗ್ಗೆ ತಹಸೀಲ್ದಾರ್ ಅವರು ಸಿಬ್ಬಂದಿಗಳಿಗೆ ಸೂಚನೆ ನೀಡಬೇಕು ಎಂದು ಹೇಳಿದರು. ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಕಾನೂನಿನ ಪರಿಮಿತಿಯಲ್ಲಿ ಇರದ ಹಕ್ಕುಪತ್ರಗಳ ಉಳಿಕೆ ಅರ್ಜಿಗಳನ್ನು ತಿರಸ್ಕಾರ ಮಾಡಿಲ್ಲ. ಶಾಸಕರ ಸಲಹೆಯಂತೆ ಪ್ರತಿ ಹಂತದಲ್ಲೂ ಪುನರ್ ಪರಿಶೀಲನೆ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಅರ್ಜಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಬಿ.ಬಿ.ಸತೀಶ್, ಜನಾರ್ಧನ್, ಚಂದ್ರಿಕಾ ಕುಮಾರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕಾಂತರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಇಒ ಪರಮೇಶ ಕುಮಾರ್ ಇದ್ದರು.