ಸಾಹಿತ್ಯ ಲೋಕದಲ್ಲಿ ಅನುವಾದ ಕೃತಿಗೆ ಅದರದ್ದೇ ಆದ ಮಹತ್ವವಿದೆ:, ಲೇಖಕಿ ಐಚಂಡ ರಶ್ಮಿ ಮೇದಪ್ಪ

ಸಾಹಿತ್ಯ ಲೋಕದಲ್ಲಿ ಅನುವಾದ ಕೃತಿಗೆ ಅದರದ್ದೇ ಆದ ಮಹತ್ವವಿದೆ:, ಲೇಖಕಿ ಐಚಂಡ ರಶ್ಮಿ ಮೇದಪ್ಪ

ಮಡಿಕೇರಿ: ಸಾಹಿತ್ಯ ಲೋಕದಲ್ಲಿ ಅನುವಾದ ಕೃತಿಗೆ ಅದರದ್ದೇ ಆದ ಮಹತ್ವವಿದೆ. ಅನುವಾದ ಕೃತಿ ಎರಡು ಕಾಲಘಟ್ಟ, ಸಂಸ್ಕೃತಿ ಮತ್ತು ಎರಡು ಭಾಷೆಗಳ ನಡುವೆ ಸಂಪರ್ಕ ಸೇತುವೆಯ ರಾಯಭಾರಿಯಾಗಿ ಕೆಲಸ ಮಾಡುತ್ತದೆ ಎಂದು ಲೇಖಕಿ ಐಚಂಡ ರಶ್ಮಿ ಮೇದಪ್ಪ ಅಭಿಪ್ರಾಯಪಟ್ಟಿದ್ದಾರೆ.

 ಕೊಡವ ಮಕ್ಕಡ ಕೂಟದ ವತಿಯಿಂದ ಶನಿವಾರ ನಗರದ ಪತ್ರಿಕಾ ಭವನದಲ್ಲಿ ತಾವು ರಚಿಸಿರುವ ಕೊಡಗ್ ಸಂಸ್ಥಾನ v/s ಬ್ರಿಟಿಷ್ ಸಾಮ್ರಾಜ್ಯ ಕೊಡವ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೂಲ ಕೃತಿಯ ಲೇಖಕರು ಹಾಗೂ ಅನುವಾದಕರಿಗೂ ಮಹತ್ವ ಇದೆ ಎಂಬುವುದನ್ನು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ದೀಪಭಾಸ್ತಿಯವರು ತೋರಿಸಿಕೊಟ್ಟಿದ್ದಾರೆ.

 ಅನುವಾದ ಎಂದರೆ ಮರುಸೃಷ್ಟಿ ಎಂದರ್ಥ, ಮೂಲ ಕೃತಿಯ ತಿರುಳನ್ನು ನಾವು ಬೇರೆ ಬೇರೆ ಭಾಷೆಗಳಲ್ಲಿ ಹೊರತಂದಾಗ ಅದು ಹೆಚ್ಚು ಹೆಚ್ಚು ಜನರನ್ನು ತಲುಪುತ್ತದೆ ಮತ್ತು ಕೃತಿಗೂ ಉತ್ತಮವಾದ ಸ್ಪಂದನೆ ದೊರೆಯುತ್ತದೆ. ಆದರೆ ಅನುವಾದ ಮಾಡುವವರಿಗೆ ಎರಡೂ ಭಾಷೆಗಳ ಮೇಲೆ ಹಿಡಿತವಿರಬೇಕು ಮತ್ತು ಮೂಲಕೃತಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಅನುವಾದ ಕೃತಿಗೆ ಪ್ರತಿಯೊಂದು ಕಾಲಘಟ್ಟದಲ್ಲೂ ಮಹತ್ವವಿದೆ. ಕೊಡವ ಭಾಷೆಯಲ್ಲಿ ಅನುವಾದ ಕೃತಿ ಬೆರಳೆಣಿಕೆಯಷ್ಟಿದ್ದರೂ ಕೊಡಗಿನ ಸಾಕಷ್ಟು ಮಂದಿ ಅನುವಾದ ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೊಡವ ಸಾಹಿತ್ಯ ಲೋಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದ ಸಾಹಿತ್ಯಗಳು ಬರುವಂತಾಗಬೇಕು ಎಂದರು.

 ಹರಿದಾಸ ಅಪ್ಪಚ್ಚ ಕವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೊಡವ ಭಾಷೆಗೆ ತರ್ಜುಮೆ ಎಂಬ ವಿಷಯದ ಕುರಿತು ಮಾತನಾಡಲು ಅವಕಾಶ ದೊರೆತಾಗ ತಾನು ಕೃತಿಯನ್ನು ಕೊಡವ ಭಾಷೆಗೆ ತರ್ಜುಮೆ ಮಾಡುವ ಬಗ್ಗೆ ಚಿಂತನೆ ಹುಟ್ಟಿ ಅದರ ಪರಿಣಾಮವೇ ಪುಸ್ತಕವನ್ನು ಹೊರತರಲು ಸಾಧ್ಯವಾಗಿದೆ. ಕೊಡವ ಭಾಷೆಯಲ್ಲಿ ಕೆಲವು ಪದಗಳ ಕೊರತೆ ಇದ್ದು, ಅವುಗಳಿಗೆ ಕನ್ನಡ ಪದಗಳನ್ನೇ ಬಳಕೆ ಮಾಡಲಾಗಿದೆ ಮತ್ತು ಒಂದು ತಿಂಗಳಿನಲ್ಲಿ ಪುಸ್ತಕಗಳನ್ನು ಹೊರತರಲಾಗಿದೆ ಎಂದು ತಿಳಿಸಿದರು.

ಕೊಡಗ್ ಸಂಸ್ಥಾನ v/s ಬ್ರಿಟಿಷ್ ಸಾಮ್ರಾಜ್ಯ ಪುಸ್ತಕವು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಮೂಕೊಂಡ ನಿತಿನ್ ಕುಶಾಲಪ್ಪ ಅವರು ಬರೆದ Kodagu Principality v/s British Empire ಇಂಗ್ಲೀಷ್ ಪುಸ್ತಕವನ್ನು ಕೊಡವ ಭಾಷೆಗೆ ತರ್ಜುಮೆ ಮಾಡಿದ್ದು, ಇದು ನನ್ನ ೫ನೇ ಪುಸ್ತಕ ಎಂದು ತಿಳಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಮುಂದಿನ ವರ್ಷ ಫೆ.೧೩ ರಂದು ಕೊಡವ ಮಕ್ಕಡ ಕೂಟದ ೧೩ನೇ ವರ್ಷಾಚರಣೆಯ ಪ್ರಯುಕ್ತ ಎರಡು ಪುಸ್ತಕಗಳನ್ನು ಹೊರ ತರಲು ನಿರ್ಧರಿಸಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿವೆ. ಕೂಟದ ವತಿಯಿಂದ ದಾಖಲೀಕರಣ ಪುಸ್ತಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಆಸಕ್ತರಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಈವರೆಗೆ ಜಿಲ್ಲೆಯ ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮಹಾತ್ವಾಕಾಂಕ್ಷೆಯ ೧೨೧ ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಲಾಗಿದೆ ಎಂದು ತಿಳಿಸಿದರು.

Kodagu Principality v/s British Empire ಇಂಗ್ಲೀಷ್ ಪುಸ್ತಕದ ಮೂಲ ಲೇಖಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಮೂಕೊಂಡ ನಿತಿನ್ ಕುಶಾಲಪ್ಪ ಮಾತನಾಡಿ, ಅನುವಾದ ಎಂಬುವುದು ಸುಲಭದ ಮಾತಲ್ಲ. ಆದರೂ ಪುಸ್ತಕದ ಮೂಲ ಕೃತಿಗೆ ಚ್ಯುತಿ ಬಾರದ ರೀತಿಯಲ್ಲಿ ಪುಸ್ತವನ್ನು ಕೊಡವ ಭಾಷೆಗೆ ತರ್ಜಮೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೃತಿಗಳು ಹೊರಬರುವಂತಾಗಲಿ ಎಂದು ಶುಭ ಹಾರೈಸಿದರು.

 ನಿವೃತ್ತ ಸೇನಾಧಿಕಾರಿ ಕರ್ನಲ್ ಕೊಡಂದೇರ ಉತ್ತಯ್ಯ ಅವರು ಕೊಡಗ್ ಸಂಸ್ಥಾನ v/s ಬ್ರಿಟಿಷ್ ಸಾಮ್ರಾಜ್ಯ ಕೊಡವ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಬರಹಗಾರರಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಮೂಕೊಂಡ ಪುಷ್ಪ ದಮಯಂತಿ ಪೂಣಚ್ಚ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಉಪಸ್ಥಿತರಿದ್ದರು.