ಬಸವನಹಳ್ಳಿ ಪ್ರೌಢಶಾಲೆಯಲ್ಲಿ ನಿವೃತ್ತಿಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್ ಅವರಿಗೆ ಬೀಳ್ಕೊಡುಗೆ

ಬಸವನಹಳ್ಳಿ ಪ್ರೌಢಶಾಲೆಯಲ್ಲಿ ನಿವೃತ್ತಿಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್ ಅವರಿಗೆ  ಬೀಳ್ಕೊಡುಗೆ

ಕುಶಾಲನಗರ: ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿಗೊಂಡ ಎ.ಎ.ಲಕ್ಷ್ಮಣ್ ಅವರಿಗೆ ಶಾಲೆಯ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷೆ ಲಿಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತಿಗೊಂಡ ಶಿಕ್ಷಕ ಲಕ್ಷ್ಮಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಕೆ.ಎಂ.ಅಯ್ಯಚ್ಚು, ಶಿಕ್ಷಕರಾದ ಲಕ್ಷ್ಮಣ್ ಅವರು ಶಾಲಾ ಮಕ್ಕಳಲ್ಲಿ ಎನ್ನೆಸ್ಸೆಸ್ ಮೂಲಕ ಉತ್ತಮ ನಾಯಕತ್ವ ಗುಣ ಮತ್ತು ಸೇವಾ ಮನೋಭಾವದೊಂದಿಗೆ ಅವರಲ್ಲಿ ಕ್ರೀಡಾ ಚಟುವಟಿಕೆಗಳ ಅಭಿರುಚಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶ್ಲಾಘಿಸಿದರು. ಶಾಲೆಯ ಅಭಿವೃದ್ಧಿ ಮತ್ತು ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ಸೇವೆ ಸಲ್ಲಿಸಿರುವುದನ್ನು ಪ್ರಶಂಸಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ‌ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಶಿಕ್ಷಕ ಲಕ್ಷ್ಮಣ್ ಅವರು ಶಾಲೆಯ ಅಭಿವೃದ್ಧಿ ಮತ್ತು ಶಾಲಾ ಮಕ್ಕಳ ಕ್ರೀಡಾ ಚಟುವಟಿಕೆಗಳ ಜತೆಗೆ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ವಿವಿಧ ಹಂತದ ಕ್ರೀಡಾಕೂಟಗಳ ಸಂಘಟನೆಯಲ್ಲಿ ಮುಂಚೂಣಿ ವಹಿಸುವುದರೊಂದಿಗೆ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಿ ಆ ಕ್ರೀಡಾಳುಗಳು ಉತ್ತಮ ಸಾಧನೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಿರುವುದು ಶ್ಲಾಘನೀಯವಾದುದು ಎಂದರು.

ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಬಿ.ಪಿ.ಗುರುಬಸಪ್ಪ ಮಾತನಾಡಿ, ಶಿಕ್ಷಕ ಲಕ್ಷ್ಮಣ್ ರವರು ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ವೃಂದಕ್ಕೆ ಆದರ್ಶ ಪ್ರಾಯವಾಗಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಲಕ್ಷ್ಮಣ್, ಶಿಕ್ಷಣ ಇಲಾಖೆಯ ಸೂಕ್ತ ಮಾರ್ಗದರ್ಶನ ಹಾಗೂ ಶಿಕ್ಷಕರ ಸಹಕಾರದಿಂದ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಗಾಯಿತ್ರಿ, ತಾಲ್ಲೂಕು ದೈಹಿಕ ಅಧೀಕ್ಷಕಿ ಎಂ.ಎಲ್.ಸುಕುಮಾರಿ, , ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಧನಪಾಲ್, ‌ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರತ್ನಕುಮಾರ್, ಕಾರ್ಯದರ್ಶಿ ಟಿ.ವಿ.ಶೈಲಾ, ನಿರ್ದೇಶಕ ಎಂ.ಎಸ್.ಮಹೇಂದ್ರ, ಮಾಜಿ ಕಾರ್ಯದರ್ಶಿ ಎಸ್.ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ.ಬಸವರಾಜ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದೇವಾನಂದ್, ಸುರೇಶ್, ಎಚ್.ಪಿ.ಕರುಂಬಯ್ಯ, ವಿವಿಧ ಸಂಘಟನೆಗಳ ಪ್ರಮುಖರಾದ ಶ್ರೀನಿವಾಸ್, ನಿವೃತ್ತ ಮುಖ್ಯ ಶಿಕ್ಷಕ ಮಾರ್ಷಲ್ ಲೋಬೋ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಟಿ.ವೆಂಕಟೇಶ್, ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.