ವಿಜಯನಗರ | ಜಗಳ ಬಿಡಿಸುವಾಗ ತಂದೆಗೆ ಒನಕೆಯಿಂದ ಹೊಡೆದ ಮಗ! ಮುಂದೇನಾಯ್ತು?
ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಕುಟುಂಬ ಕಲಹ ದಾರುಣ ಅಂತ್ಯ ಕಂಡಿದೆ. ತಂದೆ ತಾಯಿಯ ಜಗಳ ಶಮನಗೊಳಿಸಲು ಮುಂದಾದ ಮಗನೇ, ಕೆಳಗೆ ಬಿದ್ದಿದ್ದ ತಂದೆಗೆ ಒನಕೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ..
ಹತ್ಯೆಯಾದವರನ್ನು ಜವಳಿ ಶಿವಲಿಂಗಪ್ಪ (60) ಎಂದು ಗುರುತಿಸಲಾಗಿದೆ. ಇವರ ಎರಡನೇ ಮಗ ಶಂಕ್ರಪ್ಪ ಈ ಪ್ರಕರಣದ ಆರೋಪಿ. ಘಟನೆಯ ನಂತರ ಶಂಕ್ರಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತರ ಪತ್ನಿ ಗಂಗಮ್ಮ ಅವರು ಹೆಚ್‌ಬಿ ಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರು ಪ್ರಕಾರ, ಶಿವಲಿಂಗಪ್ಪ ಹಲವು ವರ್ಷಗಳಿಂದ ಮನೆಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರೆಂದು ತಿಳಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಘಟನೆಯ ದಿನವೂ ದಂಪತಿಗಳ ನಡುವೆ ಗಲಾಟೆ ಉಂಟಾಗಿದ್ದು, ಇದನ್ನು ಬಿಡಿಸಲು ಶಂಕ್ರಪ್ಪ ಮುಂದಾಗಿದ್ದಾನೆ. ಗಲಾಟೆ ತೀವ್ರಗೊಂಡಾಗ ತಳ್ಳಾಟದಲ್ಲಿ ಶಿವಲಿಂಗಪ್ಪ ನೆಲಕ್ಕೆ ಬಿದ್ದಿದ್ದು, ಆಕ್ರೋಶಗೊಂಡ ಶಂಕ್ರಪ್ಪ ಒನಕೆಯನ್ನು ಎತ್ತಿ ತಂದೆಗೆ ಹೊಡೆದಿದ್ದಾನೆ. ತಲೆಗೆ ಗಂಭೀರ ಗಾಯವಾಗಿ ಶಿವಲಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿದ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, “ಗಂಗಮ್ಮ ಅವರ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.
ಘಟನೆಯಿಂದ ಮಾಲವಿ ಗ್ರಾಮದಲ್ಲಿ ವಿಷಾದದ ವಾತಾವರಣ ನಿರ್ಮಾಣವಾಗಿದೆ.
