ವಿರಾಜಪೇಟೆ:ವಿದ್ಯುತ್ ಸಮಸ್ಯೆ ಪರಿಹಾರಕ್ಕೆ,ವರ್ತಕರ ಸಂಘದಿಂದ ಚೆಸ್ಕಾಂ ಗೆ ಮನವಿ
ವಿರಾಜಪೇಟೆ: ಇತ್ತೀಚೆಗೆ ವಿರಾಜಪೇಟೆಯಲ್ಲಿ ವಿದ್ಯುತ್ ಸಂಪರ್ಕ ಸೂಕ್ತವಾಗಿ ಪೂರೈಕೆಯಾಗದೆ ಇರುವುದರಿಂದ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪರಿಹಾರವನ್ನು ಕೋರಿ, ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ, ವಿರಾಜಪೇಟೆ ವರ್ತಕರ ಸಂಘದ ವತಿಯಿಂದ ಚೆಸ್ಕಾಂ ಮನವಿ ಪತ್ರ ಸಲ್ಲಿಸಲಾಯಿತು.
ವಿರಾಜಪೇಟೆಯ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ ಇತ್ತೀಚೆಗೆ ವಿರಾಜಪೇಟೆಯಲ್ಲಿ ವಿದ್ಯುತ್ ಸಂಪರ್ಕ ಸೂಕ್ತವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಪ್ರತಿಯೊಬ್ಬರೂ ಕೂಡ ನಾನಾ ರೀತಿಯಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಮನೆಯಲ್ಲಿ ಇರತಕ್ಕಂತಹ ಯಾವುದೇ ವಿದ್ಯುತ್ ಚಾಲಿತ ಯಂತ್ರಗಳನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಕುಡಿಯುವ ನೀರಿನಿಂದ ಪ್ರಾರಂಭಿಸಿ ಪ್ರತಿಯೊಂದು ತುಂಬಾ ತೊಂದರೆ ಉಂಟಾಗುತ್ತಿರುವುದೇ ಅಲ್ಲದೆ ಶಾಲಾ-ಕಾಲೇಜು ಮಕ್ಕಳು, ವರ್ತಕರು ವಯೋವೃದ್ಧರು, ಹೆಚ್ಚಿನ ಮಟ್ಟಿನ ವರ್ತಕರು, ವೆಲ್ಡಿಂಗ್, ಲೇತ್, ಸರ್ವಿಸ್ ಸೆಂಟರ್ ಎಂಟರ್ಪ್ರೈಸ್ ಗಳು, ಮಾಂಸದ ಅಂಗಡಿಗಳು ಹಾಗೂ ಇತರೆ ಮಳಿಗೆಯಲ್ಲಿ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗದೆ ಆರ್ಥಿಕವಾಗಿ ಹಿನ್ನಡೆಯಲ್ಲಿದ್ದಾರೆ. ಇದರಿಂದಾಗಿ ಎಲ್ಲರೂ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಆದುದರಿಂದ ತಾವುಗಳು ಆದಷ್ಟು ಬೇಗ ವಿರಾಜಪೇಟೆಯಲ್ಲಿ ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡಿಕೊಡಬೇಕು. ಇದಕ್ಕೆ ಸ್ಪಂದಿಸದೆ ಇದ್ದಲ್ಲಿ ಸಾರ್ವಜನಿಕರು ಹಾಗೂ ಎಲ್ಲಾ ವರ್ತಕರು ಸೇರಿ ಬೃಹತ್ ಪ್ರತಿಭಟನೆಯನ್ನು ಚೆಸ್ಕಾಂ ಕಛೇರಿ ಮುಂದೆ ಮಾಡಲಿದ್ದೇವೆ ಎಂದು ಈ ಸಂದರ್ಭ ಎಚ್ಚರಿಕೆ ನೀಡಿದರು. ವರ್ತಕರ ಸಂಘದ ಸುರೇಶ್ ಮಾತನಾಡಿ ವಿರಾಜಪೇಟೆಯಲ್ಲಿ ಹೆಚ್ಚಾಗಿ ವರ್ತಕರು ಹೆಚ್ಚಾಗಿದ್ದು ಅವರಿಗೆ ಅಡಚಣೆಯುಂಟಾಗುತ್ತಿದೆ. ಯಾವುದೇ ಮಾಹಿತಿ ನೀಡದೆ ವಿದ್ಯುತ್ ಕಡಿತಗೊಳಿಸಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ವಿದ್ಯುತ್ ಕಡಿತಗೊಳಿಸುವ ಮಾಹಿತಿಯನ್ನು ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮದ ಮೂಲಕ ತಿಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಅವರ ಪರವಾಗಿ ಮನವಿ ಸ್ವೀಕರಿಸಿ, ಮನವಿಗೆ ಸ್ಪಂದಿಸಿ ಮಾತನಾಡಿದ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಸುನಿತಾ ಹಾಗೂ ಸಹಾಯಕ ಇಂಜಿನಿಯರ್ (ವಿದ್ಯುತ್) ಸೋಮಶೇಖರ್ ಅಧಿಕಾರಿಗಳು ಶೀಘ್ರವೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಈ ವೇಳೆ ವರ್ತಕರ ಸಂಘದ ಖಜಾಂಚಿ ಆರ್ ಸುರೇಶ್, ಹಾಗೂ ನಿರ್ದೇಶಕರಾದ ರಾಜೇಶ್ ಆರ್ ಶೇಟ್, ಮಹಮ್ಮದ್ ಹನೀಫ್ ಹಾಗೂ ಇತರರು ಹಾಜರಿದ್ದರು.
