ವಿರಾಜಪೇಟೆ: ಮಹಿಳೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮನವಿ ಸಲ್ಲಿಕೆ

ವಿರಾಜಪೇಟೆ: ಮಹಿಳೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮನವಿ ಸಲ್ಲಿಕೆ

ವಿರಾಜಪೇಟೆ:ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಟ್ಟು ಚೆಲ್ಲಾಡುತ್ತಿದೆ. ಬಡವರು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಅಂತ್ಯ ಹಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕೊಡಗು ಜಿಲ್ಲಾ ಸಮಿತಿ ವತಿಯಿಂದ ವಿರಾಜಪೇಟೆಯ ತಾಲೂಕು ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ವಿರಾಜಪೇಟೆ ತಹಸೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಶಿರಸ್ಥೇದಾರ್ ಪುರುಶೋತ್ತಮ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡುವ ಭರವಸೆ ನೀಡಿದರು.

 ಮನವಿಯಲ್ಲಿ, ವಿಶ್ವಸಂಸ್ಥೆಯು ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ ನಿರ್ಮೂಲನೆಗೆ ಕರೆ ನೀಡಿದೆ. ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಬಯಸುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ವಿಕಾರ ಸ್ವರೂಪದೊಂದಿಗೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಲೈಂಗಿಕ ಕಿರುಕುಳ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳ ಹೆಣ್ಣು ಭ್ರೂಣ ಹತ್ಯೆ, ಕೂಲಿ ತಾರತಮ್ಯ, ಲಿಂಗ ತಾರತಮ್ಯ, ಜಾತಿ ಧರ್ಮ ಜನಾಂಗೀಯ ಹೆಸರಿನಲ್ಲಿ ದಬ್ಬಾಳಿಕೆಗಳು ಶಿಕ್ಷಣ ಮತ್ತು ಉದ್ಯೋಗ ನಿರಾಕರಣೆ ಮುಂತಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ದಬ್ಬಾಳಿಕೆಗಳನ್ನು ಪ್ರತಿರೋಧಿಸುತ್ತಾ ಹಲವು ಳನ್ನು ಅಖಿಲ ಭಾರತ ಜನ ವಾದಿ ಮಹಿಳಾ ಸಂಘಟನೆ ನಡೆಸುತ್ತಾ ಬಂದಿದೆ.

 ಹಿಂಸೆ ನಿರ್ಮೂಲನೆಗಾಗಿ ಇಡೀ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಎಂಬ ಘೋಷಣೆಯೊಂದಿಗೆ ಜನವಾದಿ ಮಹಿಳಾ ಸಂಘಟನೆ ಹೋರಾಟ ನಡೆಸುತ್ತಿದೆ. ಇಂದು ದೇಶದ ಮಹಿಳೆಯರು ಸುರಕ್ಷತೆ ಬದಲು ಅಸುರಕ್ಷತೆಯಿಂದ ಬದುಕು ನಡೆಸುವಂತೆ ಆಗಿದೆ. ಭಾರತದಲ್ಲಿ ತಲತಲಾಂತರಗಳಿಂದ ಹೆಣ್ಣನ್ನು ಭೋಗದ ವಸ್ತುಗಳಾಗಿಯೇ ಕಾಣಲಾಗುತ್ತಿದೆ. ಬಂಡವಾಳಶಾಹಿ, ಭೂ ಮಾಲೀಕ, ಪಾಳೆಗಾರ, ಪಿತೃ ಪ್ರಧಾನ ಸಮಾಜ ವ್ಯವಸ್ಥೆ ಇದಕ್ಕೆಲ್ಲ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಸನ ಸಭೆಗಳವರೆಗೆ ರಾಜಕಾರಣಿಗಳು ಬಳಸುತ್ತಿರುವ ಭಾಷೆಗಳು ಕೀಳು ಮಟ್ಟಕ್ಕೆ ಇಳಿದಿವೆ.

ಮಹಿಳೆಯರ ಘನತೆಯ ಬದುಕಿಗೆ ಕುಂದುಂಟು ಮಾಡುವ ಇಂತಹ ನೀಚ ಸಂಸ್ಕೃತಿಯನ್ನು ಖಂಡಿಸುತ್ತೇವೆ. ಸ್ವ ಸಹಾಯ ಸಂಘಗಳಿಂದ ವಿಪರೀತ ಬಡ್ಡಿ ವಸೂಲಿ ಸೇರಿದಂತೆ ಜನವಾದಿ ಮಹಿಳಾ ಸಂಘಟನೆ ಹಾಗೂ ಇತರ ಮಹಿಳಾ ಸಂಘಟನೆಗಳು ಜನಪರ ಸಂಘಟನೆಗಳು ಆಗ್ರಹಿಸುತ್ತದೆ. ಬೆಲೆ ಏರಿಕೆ ನಿರುದ್ಯೋಗ ಹಸಿವು ಬಡತನ ಅಪೌಷ್ಟಿಕತೆ ಹೆಚ್ಚಾಗುತ್ತಿದೆ. 82 ರಷ್ಟು ಕುಟುಂಬಗಳು ಸಾಲದಲ್ಲಿಯೇ ಬಿದ್ದು ಒದ್ದಾಡುತ್ತಿವೆ. ಆಹಾರ ಆರೋಗ್ಯ ಶಿಕ್ಷಣ ಕೈಗೆಟುಕದಂತಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜನರು ಸಾಲದ ಸುಳಿಗೆ ಸಿಕ್ಕಿ ವಿಲವಿಲನೆ ಒದ್ದಾಡುವಂತ ಪರಿಸ್ಥಿತಿ ಎದುರಾಗುತ್ತಿದೆ. ಈ ಸಮಸ್ಯೆಗಳನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯ ಆದೇಶದಂತೆ ಮಹಿಳೆಯರ ಸರ್ವಾಂಗಿಣ ಅಭಿವೃದ್ಧಿಯ ಮೂಲಕ ಮಹಿಳೆ ಮತ್ತು ಮಕ್ಕಳ ಮೇಲಾಗುವ ಹಿಂಸೆ ನಿರ್ಮೂಲನೆಗೆ ಒತ್ತಾಯಿಸಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟಿಸಿ ಮನವಿಯನ್ನ ಸಲ್ಲಿಸಲಾಗುತ್ತಿದೆ.

 ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಮಹಿಳೆ ಮತ್ತು ಮಕ್ಕಳ ಮೇಲಾಗುವ ಹಿಂಸೆ ನಿರ್ಮೂಲನೆಗೆ ಒತ್ತಾಯಿಸುತ್ತಿದ್ದೇವೆ. ಎಲ್ಲಾ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಆಗ್ರಹಿಸುವುದಾಗಿ ಮನವಿಯಲ್ಲಿ ಕೋರಲಾಗಿದೆ. ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ, ತಾಲೂಕು ಅಧ್ಯಕ್ಷೆ ಯಮುನಾ, ಜನವಾದಿ ಮಹಿಳಾ ಸಂಘಟನೆ ಸದಸ್ಯೆ ಜೆ. ಆರ್. ಸೀತೆ, ಸುಮಿತ್ರಾ, ಜಿಲ್ಲಾ ಸಮಿತಿ ಸದಸ್ಯೆ ಜೆ. ಆರ್. ಪ್ರೇಮಾ ಸೇರಿದಂತೆ ಅನೇಕರು ಇದ್ದರು.