ಇಟ್ಟುಕೊಂಡವನಿಗಾಗಿ ಕಟ್ಟಿಕೊಂಡವನ ವೃಷಣ ಹಿಸುಕಿ ಕೊಲೆ ಮಾಡಿದ ಪತ್ನಿ!

ಇಟ್ಟುಕೊಂಡವನಿಗಾಗಿ ಕಟ್ಟಿಕೊಂಡವನ ವೃಷಣ ಹಿಸುಕಿ ಕೊಲೆ ಮಾಡಿದ ಪತ್ನಿ!

ಮೈಸೂರು, ನ.13: ಪತ್ನಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಗಂಡನನ್ನೇ ಪತ್ನಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೋರಿಸಲು ಯತ್ನಿಸಿದ ದಾರುಣ ಘಟನೆ ನಂಜನಗೂಡು ತಾಲೂಕಿನ ಇಂದಿರಾ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಗ್ರಾಮಸ್ಥರು ಆರೋಪಿಯ ಸಂಚನ್ನು ಬಯಲು ಮಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳು ಈಗ ಅನಾಥರಾಗಿದ್ದಾರೆ.

ಮೃತ ವೀರಣ್ಣ (41) ಸ್ಥಳೀಯವಾಗಿ ‘ಚಿಕ್ಕ ಯಜಮಾನ’ ಎಂದೇ ಪರಿಚಿತ. ಆರೋಪಿ ಶಿವಮ್ಮ (35) ಕಳೆದ ನಾಲ್ಕು ವರ್ಷಗಳಿಂದn ಹೆಚ್.ಡಿ.ಕೋಟೆಯ ಬಲರಾಮ ಎಂಬಾತನೊಂದಿಗೆ ಅಕ್ರಮ ಸಂಪರ್ಕ ಹೊಂದಿದ್ದಳು. ಈ ಕುರಿತು ಗ್ರಾಮದಲ್ಲಿ ಹಲವಾರು ಬಾರಿ ನ್ಯಾಯಪಂಚಾಯಿತಿ ನಡೆದರೂ ಸಂಬಂಧ ಕಡಿತವಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಬುಧವಾರ ರಾತ್ರಿ ಬಲರಾಮ ಫೋನ್ ಮಾಡಿರುವ ವಿಚಾರವಾಗಿ ದಂಪತಿಯ ನಡುವೆ ಮತ್ತೊಮ್ಮೆ ಗಲಾಟೆ ನಡೆದಿದೆ. ಬಳಿಕ ಊಟ ಮಾಡಿ ಮಲಗಿದ್ದ ವೀರಣ್ಣನ ಮೇಲೆ ಶಿವಮ್ಮ ದೊಣ್ಣೆಯಿಂದ ಹಲ್ಲೆ ನಡೆಸಿ ವೃಷಣ ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಕುತ್ತಿಗೆಯಲ್ಲಿ ಸೀರೆ ಸುತ್ತಿರುವುದು ಕಂಡುಬಂದುದರಿಂದ ಆತ್ಮಹತ್ಯೆ ಮಾಡಿಕೊಂಡಂತೆ ತೋರಿಸಲು ಪ್ರಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಬಾಯಿ ಬಡಿದುಕೊಂಡು ಹೊರಬಂದ ಶಿವಮ್ಮನ ವರ್ತನೆ ಶಂಕೆ ಹುಟ್ಟಿಸಿದ ಪರಿಣಾಮ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲಿಸಿದ್ದು, ಆರೋಪಿಯ ಕಥೆ ಸುಳ್ಳು ಎನ್ನುವುದು ಬಹಿರಂಗಗೊಂಡಿದೆ. ನಂತರ ಆಕೆಯನ್ನು ಹಿಡಿದು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಶಿವಮ್ಮ ಬಲರಾಮನ ಜೊತೆಗಿನ ಅಕ್ರಮ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ. ಆದರೆ ಈ ಪ್ರಕರಣಕ್ಕೆ ಕಾರಣನಾದ ಬಲರಾಮನನ್ನು ಇನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.