ಹೊಂಗಸಂದ್ರದಲ್ಲಿ ಅಕ್ಕನ ಗಂಡನನ್ನೇ ಮದುವೆಯಾಗಿದ್ದ ಮಹಿಳೆ ನಿಗೂಢ ಹತ್ಯೆ

ಹೊಂಗಸಂದ್ರದಲ್ಲಿ ಅಕ್ಕನ ಗಂಡನನ್ನೇ ಮದುವೆಯಾಗಿದ್ದ ಮಹಿಳೆ ನಿಗೂಢ ಹತ್ಯೆ

ಬೆಂಗಳೂರು, ನ. 17: ನಗರದ ಹೊಂಗಸಂದ್ರದಲ್ಲಿ 35 ವರ್ಷದ ಪ್ರಮೋದಾ ಎಂಬ ಮಹಿಳೆ ಭೀಕರವಾಗಿ ಕೊಲೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬದ ಒಳಕಲಹ ಹಾಗೂ ಅಕ್ರಮ ಸಂಬಂಧ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡದ ಶಿರಸಿ ಮೂಲದ ಪ್ರಮೋದಾ ಗಾರ್ಮೆಂಟ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. ಅಕ್ಕನ ಗಂಡ ಸುರೇಶನನ್ನೇ ಎರಡನೇ ಮದುವೆ ಮಾಡಿಕೊಂಡಿದ್ದರು. ಇಬ್ಬರು ಮಕ್ಕಳ ತಾಯಿಯಾದ ಪ್ರಮೋದಾ, ಪತಿಯೊಂದಿಗೆ ಸಂಬಂಧ ಹದಗೆಟ್ಟ ನಂತರ ಕೆಲವು ವರ್ಷಗಳ ಹಿಂದೆ ಪ್ರತ್ಯೇಕವಾಗಿಯೇ ವಾಸವಾಗಿದ್ದರು. ಕಳೆದ ಮೂರು ತಿಂಗಳಿಂದ ಹೊಂಗಸಂದ್ರದ ಮುನಿಸುಬ್ಬ ರೆಡ್ಡಿ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಸೋಮವಾರ ರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಪ್ರಮೋದಾಳ ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಹಲವಾರು ಇರಿತದ ಗಾಯಗಳಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿ ನಡೆಸಿದ ಆರೋಪಿ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ತಕ್ಷಣ ಬೊಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು, ಹಂತಕರ ಪತ್ತೆಗೆ ತೀವ್ರ ಹುಡುಕಾಟ ಆರಂಭಿಸಿದ್ದು, ಮೃತಳ ಕುಟುಂಬ ಹಾಗೂ ಆಪ್ತರನ್ನು ವಿಚಾರಣೆಗೊಳಪಡಿಸಿದ್ದಾರೆ.