ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದ ರಾಧಾಕೃಷ್ಣನ್ ಅವರಿಗೆ ಯದುವೀರ್ ಶುಭಾಶಯ ಪ್ರಜಾಪ್ರಭುತ್ವ ಸಂರಕ್ಷಣೆಗೆ ಉಪರಾಷ್ಟ್ರಪತಿಗಳು ಕೊಡುಗೆ ನೀಡುವ ಭರವಸೆ ಇದೆ: ಸಂಸದ ಯದುವೀರ್ ಒಡೆಯರ್

ಮೈಸೂರು: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸಂರಕ್ಷಣೆ ತೋರುವ ವಿಶ್ವಾಸವಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳನ್ನು ಪಡೆದಿರುವ ರಾಧಾಕೃಷ್ಣನ್ ಅವರು 300 ಮತಗಳನ್ನು ಪಡೆದಿರುವ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ವಿರುದ್ಧ ಜಯಗಳಿಸಿದ್ದಾರೆ. ರಾಧಾಕೃಷ್ಣನ್ ಅವರಿಗೆ ಸಂಸದರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. "ರಾಧಾ ಕೃಷ್ಣನ್ ಅವರ ಆಯ್ಕೆ ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಬಲಿಷ್ಠತೆಗೆ ಸಾಕ್ಷಿಯಾಗಿದೆ. ಅವರ ಗೆಲುವು ಅವರ ನಾಯಕತ್ವ, ಸಮಗ್ರತೆ ಮತ್ತು ಸಾರ್ವಜನಿಕ ಸೇವೆಗೆ ಬದ್ಧತೆ ತೋರುವ ಅವರ ಅಚಲ ನಂಬಿಕೆಗೆ ಮತ್ತಷ್ಟು ಮೆರುಗು ದೊರೆತಿದೆ" ಎಂದು ಯದುವೀರ್ ಒಡೆಯರ್ ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ.
"ಉಪರಾಷ್ಟ್ರಪತಿಯಾಗಿ ರಾಧಾ ಕೃಷ್ಣನ್ ಸಂಸತ್ತಿನ ಘನತೆಯನ್ನು ಎತ್ತಿಹಿಡಿಯುವಲ್ಲಿ ಮತ್ತು ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಅನುಭವ ಮತ್ತು ದೃಷ್ಟಿಕೋನವು ದೇಶವನ್ನು ಸಮಗ್ರ ಬೆಳವಣಿಗೆ ಮತ್ತು ಸ್ಥಿರತೆಯತ್ತ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ರಾಧಾಕೃಷ್ಣನ್ ಅವರ ನಾಯಕತ್ವ ಅತ್ಯಂತ ಮಹತ್ತದ್ದಾಗಿದ್ದು, ಮೌಲ್ಯಯುತವೂ ಆಗಿದೆ ಎಂದು ತಿಳಿಸಿದ್ದಾರೆ. "ನಿಷ್ಠೆ, ಜವಾಬ್ದಾರಿ ಮತ್ತು ಸಮರ್ಪಣಾ ಭಾವನೆ ಹೊಂದಿರುವ ರಾಧಾಕೃಷ್ಣನ್ ದೇಶ ಸೇವೆಯಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.