ಯಂಗ್ ಇಂಡಿಯಾ ಯುವಕ ಸಂಘದ ಸುವರ್ಣ ಮಹೋತ್ಸವ: ಪಾಲಿಬೆಟ್ಟದಲ್ಲಿ ರಾಷ್ಟ್ರ ಮಟ್ಟದ ಪುಟ್ಬಾಲ್ ಪಂದ್ಯಾವಳಿಯ ಲೋಗೊ ಬಿಡುಗಡೆ
ಸಿದ್ದಾಪುರ :- ಯಂಗ್ ಇಂಡಿಯಾ ಯೂಥ್ ಕ್ಲಬ್ ನ 55ನೇ ಸುವರ್ಣ ಮಹೋತ್ಸವದ ಸಂಭ್ರಮಕ್ಕಾಗಿ ರಾಷ್ಟ್ರೀಯ ಮಟ್ಟದ ಮುಕ್ತ 5s ಫುಟ್ಬಾಲ್ ಪಂದ್ಯಾವಳಿ ಜನವರಿ 9, 10, 11ರಂದು ಪಾಲಿಬೆಟ್ಟ ಮೈದಾನದಲ್ಲಿ ನಡೆಯಲಿದ್ದು ಇದರ ಪ್ರಚಾರಾರ್ಥವಾಗಿ ಲೋಗೋ ಬಿಡುಗಡೆ ಕಾರ್ಯಕ್ರಮ ಪಾಲಿಬೆಟ್ಟ ಯಂಗ್ ಇಂಡಿಯಾ ಯೂತ್ ಕ್ಲಬ್ ಅವರಣದಲ್ಲಿ ನಡೆಯಿತು.
ಮಾಜಿ ಜಿಲ್ಲಾ ಪಂಚಾಯತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಲೋಗೋ ಬಿಡುಗಡೆ ಮಾಡಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುಲು ಯಂಗ್ ಇಂಡಿಯಾ ಯೂತ್ ಕ್ಲಬ್ ಪ್ರಮುಖರ ಶ್ರಮ ಕಾರಣವಾಗಿದೆ.
ಸದಸ್ಯ ರಂಶಾದ್ ಎಂಬ ಕ್ರೀಡಾ ಪಟು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಹಲವಾರು ಸಾಧನೆ ಮಾಡಿದ್ದಾರೆ. ಕ್ರೀಡಾ ಜಿಲ್ಲೆ ಎಂದು ಹೆಸರುವಾಸಿಯಾಗಿದ್ದರು ರಾಜ್ಯ. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಪ್ರತಿಭಾವಂತರಿಗೆ ಸರ್ಕಾರ ಹಾಗೂ ಕ್ರೀಡಾ ಇಲಾಖೆ ಹೆಚ್ಚಿನ ಸಹಕಾರ ನೀಡದೆ ಕಡೆಗಣಿಸುತ್ತಿರುವ ಪರಿಣಾಮ ಗ್ರಾಮೀಣ ಕ್ರೀಡಾಪಟುಗಳು ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ. ಸೂಕ್ತ ಆಟದ ಮೈದಾನದ ವ್ಯವಸ್ಥೆಯು ಇಲ್ಲದೆ ರಸ್ತೆ ಬದಿಗಳಲ್ಲಿ ಆಡಬೇಕಾದ ಪರಿಸ್ಥಿತಿಯು ನಿರ್ಮಾಣವಾಗಿದೆ.
ಸರ್ಕಾರ ಗ್ರಾಮೀಣ ಭಾಗದಲ್ಲೂ ಸುಸಜ್ಜಿತವಾದ ಆಟದ ಮೈದಾನ ನಿರ್ಮಾಣ ಮಾಡುವುದರೊಂದಿಗೆ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದ ಅವರು ಗ್ರಾಮದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ 55 ವರ್ಷ ಪೂರೈಸಿರುವ ಯಂಗ್ ಇಂಡಿಯಾ ಯೂತ್ ಕ್ಲಬ್ ಹಲವಾರು ಕ್ರೀಡಾಪಟುಗಳನ್ನು ಕ್ರೀಡಾ ಸಾಧನೆಯ ಮೂಲಕ ಮುಖ್ಯ ವಾಹಿನಿಗೆ ತರಲು ಮುಂದಾಗಿದೆ. ಈ ಹಿಂದೆ ಹಿರಿಯರು ಕಟ್ಟಿ ಬೆಳೆಸಿದ ಈ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಸಮಾಜ ಸೇವೆಯೊಂದಿಗೆ ಗುರುತಿಸಿಕೊಳ್ಳುವಂತೆ ಸಲಹೆ ನೀಡಿದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಗಣೇಶ್ ಮಾತನಾಡಿ 55 ವರ್ಷ ಪೂರೈಸಿರುವ ಯುವಕ ಸಂಘ ಹಲವಾರು ಸಮಾಜ ಸೇವ ಕಾರ್ಯಗಳೊಂದಿಗೆ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸುವಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದು ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ರಾಷ್ಟ್ರೀಯ ಮಟ್ಟದ ಆಟಗಾರರನ್ನ ಜಿಲ್ಲೆಗೆ ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ್ ಮಾತನಾಡಿ ಹಿರಿಯ ಕ್ರೀಡಾಪಟುಗಳು ಕಟ್ಟಿ ಬೆಳೆಸಿದ ಸಂಘವನ್ನು ಈಗಿನ ಯುವ ಕ್ರೀಡಾಪಟುಗಳು ಮುನ್ನಡೆಸಬೇಕಾಗಿದೆ ಶಾಂತಿ ಸಹ ಬಾಳ್ವೆ ಸಹೋದರತ್ವಕ್ಕೆ ಪಾಲಿಬೆಟ್ಟ ಗ್ರಾಮವೇ ಸಾಕ್ಷಿಯಾಗಿದ್ದು ಕ್ರೀಡಾ ಮನೋಭಾವದ ಮೂಲಕ ಉತ್ತಮ ಕ್ರೀಡಪಟುಗಳಾಗಿ ಗುರುತಿಸಿಕೊಂಡು ಗ್ರಾಮಕ್ಕೆ ಕೀರ್ತಿ ತರಬೇಕೆಂದರು.
ವರ್ತಕರ ಸಂಘದ ಮಾಜಿ ಅಧ್ಯಕ್ಷ ಕಾಳಪ್ಪ ಮಾತನಾಡಿ ಕ್ರೀಡಾ ಸಂಘಗಳ ಮೂಲಕ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದ್ದು ಗ್ರಾಮದ ಹಲವಾರು ಕ್ರೀಡಾಪಟುಗಳು ಸಾಧನೆಯೊಂದಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದಾರೆ ಕ್ರೀಡಾಪಟುಗಳಿಗೆ ನಾವೆಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಮತ್ತಷ್ಟು ಸಾಧನೆಗೆ ಸಹಕಾರ ನೀಡುವಂತಾಗಬೇಕೆಂದರು.
ಲೋಗೋ ಅನಾವರಣ ಸಂದರ್ಭ ಪ್ರಮುಖರಾದ ಕುಟ್ಟಂಡ ದೇಚಮ್ಮ, ಇಸ್ಮಾಯಿಲ್ ಹಾಜಿ, ವಾಟೇರಿರ ವಿನು, ಕುಟ್ಟಂಡ ಅಂಜನ್ ಚಿನ್ನಪ್ಪ, ಮಾಳೇಟಿರ ಪವಿತ್ರ, ಅಬೂಬಕರ್, ನಾಸೀರ್, ಮ್ಯಾಥ್ಯೂ, ತಂಬಿ, ರತ್ನ ಸುಬ್ಬಯ್ಯ, ಅಬ್ದುಲ್ ಜಬ್ಬಾರ್ ಹಾಜಿ, ಎಎಸ್ಐ ಮಂಜುನಾಥ್, ಅಬ್ದುಲ್ ನಾಸರ್, ರತೀಶ್, ಶಿವರಾಜು, ವಿಜೇಶ್, ರತೀಶ್, ಮೈಕೆಲ್, ವಿನ್ಸಿ, ಫೆಸ್ಟೋಸ್ ಸೇರಿದಂತೆ ಯಂಗ್ ಇಂಡಿಯ ಯುವಕರ ಸಂಘದ ಅಧ್ಯಕ್ಷ ಸಲೀಂ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
