ಯುವ ಸ್ಪಂದನ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮ:ಯುವ ಜನತೆ ಸಮಾಜದ ಆಸ್ತಿಯಾಗಿ ಬೆಳೆಯಬೇಕು: ವೆಂಕಟೇಶ್ ಪ್ರಸನ್ನ

ಮಡಿಕೇರಿ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮ್ಹಾನ್ಸ್ ಸಹಯೋಗದೊಂದಿಗೆ ಯುವ ಸ್ಪಂದನ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮವು ನಗರದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆಯಿತು.ಯುವ ಜನತೆಗೆ ಜೀವನ ಕೌಶಲ್ಯ ಮತ್ತು ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಕ್ಷೇತ್ರ ಸಂಪರ್ಕ ಅಧಿಕಾರಿಯಾದ ನವ್ಯ ಆರ್. ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಬಗ್ಗೆ ತರಬೇತಿ ನೀಡಿದರು.
ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಪ್ರಸನ್ನ ಅವರು ಮಾತನಾಡಿ ಯುವ ಜನರು ಸಮಾಜದ ಆಸ್ತಿಯಾಗಿ ಬೆಳೆಯಬೇಕು ಎಂದು ಕರೆ ನೀಡಿದರು. ಯುವ ಜನರು ಹಾದಿ ತಪ್ಪದೆ ಸರಿಯಾದ ಹಾದಿಯಲ್ಲಿ ನಡೆಯಬೇಕು. ಕೆಟ್ಟ ಚಟಗಳಿಗೆ ತುತ್ತಾಗಬಾರದು. ಸಮಾಜದಲ್ಲಿ ಯುವ ಜನರಿಗೆ ತಮ್ಮದೇ ಆದ ಸ್ಥಾನವಿದ್ದು, ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಡಾ.ಪ್ರಕಾಶ್ ಎಂ.ಎನ್. ಅವರು ಮಾತನಾಡಿ ಯುವ ಜನರು ಮಾನಸಿಕ ಒತ್ತಡಕ್ಕೆ ತುತ್ತಾಗದೆ, ತಮ್ಮ ಬುದ್ದಿಮತ್ತೆಯನ್ನು ಹೆಚ್ಚಿಸಿಕೊಳ್ಳಬೇಕು. ಓದಿನ ಕಡೆ ಗಮನಹರಿಸಬೇಕು. ಕಲಿಕೆಯಲ್ಲಿ ಸದಾ ತೀವ್ರತೆ ಇರಬೇಕು. ಆ ನಿಟ್ಟಿನಲ್ಲಿ ಮುನ್ನಡೆಯುವಂತೆ ಎಂದು ಸಲಹೆ ಮಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸಮಾಲೋಚಕಿ ಲಕ್ಷ್ಮಿ ಎಂ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಪರಿವರ್ತಕಿ ಚೈತ್ರ ಎ.ಸಿ., ಕಾಲೇಜು ಶಿಕ್ಷಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.