ಮ್ಯಾಟ್ರಿಮೊನಿ ಮೂಲಕ ಪರಿಚಯ; ಮದುವೆಯಾಗುವುದಾಗಿ ಹಣ ಹಾಕಿಸಿಕೊಂಡು ಮಹಿಳೆಯ ಕೊಲೆ!

ಮ್ಯಾಟ್ರಿಮೊನಿ ಮೂಲಕ ಪರಿಚಯ; ಮದುವೆಯಾಗುವುದಾಗಿ ಹಣ ಹಾಕಿಸಿಕೊಂಡು ಮಹಿಳೆಯ ಕೊಲೆ!
Photo credit: NDTV

ಲುಧಿಯಾನ: ಅಮೆರಿಕದಲ್ಲಿ ವಾಸಿಸುತ್ತಿದ್ದ ಭಾರತೀಯ ಮೂಲದ 71 ವರ್ಷದ ಮಹಿಳೆಯನ್ನು ಹತ್ಯೆಗೈಯಲು ಬ್ರಿಟನ್ ಮೂಲದ ಎನ್‌ಆರ್‌ಐ ಒಬ್ಬರು ಸಂಚು ರೂಪಿಸಿದ ಪ್ರಕರಣ ಪಂಜಾಬ್‌ ನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಲುಧಿಯಾನ ಮೂಲದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

 ಹತ್ಯೆಯಾದವರನ್ನು ರೂಪಿಂದರ್ ಕೌರ್ ಪಂಧೇರ್ (71) ಎಂದು ಗುರುತಿಸಲಾಗಿದೆ. ಅವರು ಸಿಯಾಟಲ್‌ ನಲ್ಲಿ ವಾಸವಾಗಿದ್ದರು. ವೈವಾಹಿಕ ವೇದಿಕೆಯ ಮೂಲಕ ಅವರು ಯುಕೆ ಮೂಲದ ಚರಣ್‌ಜಿತ್ ಸಿಂಗ್ ಗ್ರೆವಾಲ್ (75) ಅವರಿಗೆ ಪರಿಚಯವಾಗಿದ್ದರು. ಆಸ್ತಿ ವಿವಾದದ ವಿಚಾರದಲ್ಲಿ ಸಹಾಯ ಮಾಡುವ ನೆಪದಲ್ಲಿ ಗ್ರೆವಾಲ್, ಕಿಲಾ ರಾಯ್‌ಪುರದ ನಿವಾಸಿ ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಖ್‌ಜೀತ್ ಸಿಂಗ್ ಅವರನ್ನು ಸಂಪರ್ಕಿಸಿದ್ದರು.

ಪಂಧೇರ್‌ನಿಂದ ದೊಡ್ಡ ಮೊತ್ತದ ಹಣ ಸ್ವೀಕರಿಸಿದ್ದ ಗ್ರೆವಾಲ್, ಆಕೆಯನ್ನು ಮದುವೆಯಾಗಲು ನಿರಾಕರಿಸಿ, ಬದಲಾಗಿ ಹತ್ಯೆಗೆ ಸಂಚು ರೂಪಿಸಿದ್ದಾನೆ. ಪಂಧೇರ್ ರನ್ನು ಕೊಂದರೆ 50 ಲಕ್ಷ ರೂಪಾಯಿ ಹಾಗೂ ವಿದೇಶದಲ್ಲಿ ನೆಲೆಸಲು ಸಹಾಯ ಮಾಡುವುದಾಗಿ ಸಿಂಗ್‌ ಗೆ ಭರವಸೆ ನೀಡಿದ್ದಾನೆ.

ಜುಲೈ 18 ರಂದು, ಸುಖ್‌ಜೀತ್ ಸಿಂಗ್ ತನ್ನ ಮನೆಯಲ್ಲಿ ಪಂಧೇರ್ ಅವರನ್ನು ಬೇಸ್‌ಬಾಲ್ ಬ್ಯಾಟ್‌ ನಿಂದ ಹಲ್ಲೆ ಮಾಡಿ ಕೊಂದು, ಶವವನ್ನು ಸುಟ್ಟು ಚರಂಡಿಯಲ್ಲಿ ಎಸೆದಿದ್ದಾನೆ. ಅಪರಾಧ ಮುಚ್ಚಿಹಾಕಲು ತನ್ನ ಮನೆಯನ್ನು ಬಣ್ಣ ಬಳಿಸಿದ್ದನೆಂದು ಆತ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ.

 ಪಂಧೇರ್ ಅವರ ಸಹೋದರಿ ಕಮಲ್ ಕೌರ್ ಖೈರಾ ಜುಲೈ 24 ರಂದು ಆಕೆಯನ್ನು ಸಂಪರ್ಕಿಸಲು ವಿಫಲವಾದಾಗ ಅನುಮಾನಗೊಂಡು ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ರಾಯಭಾರ ಕಚೇರಿಯ ಪ್ರಕರಣವನ್ನು ಪೊಲೀಸರು ತನಿಖೆ ಮಾಡಿದಾಗ ಕೊಲೆ ಪ್ರಕರಣ ಬಯಲಾಯಿತು.

ಸುಖ್‌ಜೀತ್ ಸಿಂಗ್ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಪಂಧೇರ್ ಅವರ ಸುಟ್ಟ ಶರೀರದ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಂಗ್ ಬಂಧನದಲ್ಲಿದ್ದು, ವಿದೇಶದಲ್ಲಿರುವ ಚರಣ್‌ಜಿತ್ ಸಿಂಗ್ ಗ್ರೆವಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ರೂಪಿಂದರ್ ಸಿಂಗ್ ತಿಳಿಸಿದ್ದಾರೆ.