ಮೈಸೂರಿಗೆ ಮತ್ತೆ "ಸ್ವಚ್ಛ ಸರ್ವೇಕ್ಷಣೆ"ಯಲ್ಲಿ ಪ್ರಶಸ್ತಿ ನಗರವನ್ನು ಇನ್ನಷ್ಟು ಸುಂದರವಾಗಿಸಲು ಎಲ್ಲರೂ ಕೈಜೋಡಿಸೋಣ: ಸಂಸದ ಯದುವೀರ್

ಮೈಸೂರು: ನಮ್ಮ ಸಾಂಸ್ಕೃತಿಕ ರಾಜಧಾನಿಗೆ ಮತ್ತೊಂದು ಗರಿಮೆ ಬಂದಿರುವುದು ಹೆಮ್ಮೆ ಎನಿಸಿದೆ. ದೇಶದ "ಸ್ವಚ್ಛ ಸರ್ವೇಕ್ಷಣೆ"ಯಲ್ಲಿ ನಮ್ಮ ಮೈಸೂರು ಪ್ರಶಸ್ತಿ ಪಡೆದಿರುವುದು ಗಮನಾರ್ಹ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. 2024-25 ನೇ ಸಾಲಿನ ಸ್ವಚ್ಚ ಸರ್ವೇಕ್ಷಣ ಅಭಿಯಾನದ ವರದಿ ಹೊರಬಿದ್ದಿದ್ದು ಈ ಬಾರಿ ಮೈಸೂರು ಜಿಲ್ಲೆ ಟಾಪ್ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. 3 ರಿಂದ 10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ನೋಯ್ಡಾ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದ್ದು ಎರಡನೇ ಸ್ಥಾನದಲ್ಲಿ ಚಂಡೀಗಢ ಇದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದ ಯದುವೀರ್, ಇದು ಮೈಸೂರು ಮಹಾ ನಗರ ಪಾಲಿಕೆಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಯೋಗದಿಂದ ಸಿಕ್ಕಿರುವ ಮನ್ನಣೆ ಎಂದು ಹೇಳಿದ್ದಾರೆ. ರೆಡ್ಯೂಸ್, ರಿಯೂಸ್, ರೀ ಸೈಕಲ್ ಥೀಮ್‌ನಲ್ಲಿ ಸಮೀಕ್ಷೆ ನಡೆಸಲಾಗಿದೆ. ಒಳಚರಂಡಿ ವ್ಯವಸ್ಥೆ, ನಗರದ ಸೌಂದರ್ಯೀಕರಣವನ್ನು ಪರಿಗಣಿಸಲಾಗಿದೆ ಎಂದು ವಿವರ ನೀಡಿದ್ದಾರೆ.
ಈ ಹಿಂದೆ ನಮ್ಮ ಮೈಸೂರು ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಆದರೆ ಕಾಲ ನಂತರದಲ್ಲಿ ಹಿನ್ನೆಡೆಯಾಗಿತ್ತು. ಆದರೆ ಈಗ ಸಾಂಘಿಕ ಪ್ರಯತ್ನದಿಂದ ನಮ್ಮ ಊರು ಅಂದದೂರು ಆಗಿದೆ ಎಂದು ಯದುವೀರ್ ತಿಳಿಸಿದ್ದಾರೆ. ನಾವು ಇದೇ ರೀತಿ ನಮ್ಮ ಊರನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಪಾಲಿಕೆಯ ಸಿಬ್ಬಂದಿಯೊಂದಿಗೆ ನಾವೂ ಕೈ ಜೋಡಿಸಿ ಮೈಸೂರನ್ನು ಸ್ವಚ್ಛವಾಗಿಡೋಣ. ಮುಂದಿನ ದಿನಗಳಲ್ಲಿ ಸ್ವಚ್ಛ ಸರ್ವೇಕ್ಷಣದಲ್ಲಿ ನಮ್ಮ ಮೈಸೂರು ನಂಬರ್ ಒನ್ ಸ್ಥಾನ ಗಳಿಸುವಂತೆ ನೋಡಿಕೊಳ್ಳೋಣ ಎಂದು ಸಂಸದ ಯದುವೀರ್ ಒಡೆಯರ್ ಕರೆ ನೀಡಿದ್ದಾರೆ.