ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ತ್ರಿಪದಿ ಕವಿ ಸರ್ವಜ್ಞ ಅವರು ಬರೆದಿರುವ ಪುಸ್ತಕ/ಹೊತ್ತಿಗೆಯನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಬೇಕು; ಲೀಲಾಕುಮಾರಿ ತೊಡಿಕಾನ

ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ತ್ರಿಪದಿ ಕವಿ ಸರ್ವಜ್ಞ ಅವರು ಬರೆದಿರುವ ಪುಸ್ತಕ/ಹೊತ್ತಿಗೆಯನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಬೇಕು; ಲೀಲಾಕುಮಾರಿ ತೊಡಿಕಾನ

ಮಡಿಕೇರಿ ಫೆ.20:-ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ತ್ರಿಪದಿ ಕವಿ ಸರ್ವಜ್ಞ ಅವರು ಬರೆದಿರುವ ಪುಸ್ತಕ/ಹೊತ್ತಿಗೆಯನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಬೇಕು ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಲೀಲಾಕುಮಾರಿ ತೊಡಿಕಾನ ಅವರು ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ‘ಕವಿ ಸರ್ವಜ್ಞ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ವಜ್ಞ ಅವರು ಬರೆದಿರುವ ತ್ರಿಪದಿ ಪದ್ಯಗಳು ಸಾರ್ವಕಾಲಿಕವಾಗಿದ್ದು, ಇಂಗ್ಲೀಷ್, ಹಿಂದಿ ಸೇರಿದಂತೆ ರಾಷ್ಟ್ರದ ಎಲ್ಲಾ ಭಾಷೆಗಳಿಗೂ ಭಾಷಾಂತರಿಸಿದಲ್ಲಿ ಪ್ರತಿಯೊಬ್ಬರಿಗೂ ತಲುಪಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಲೀಲಾಕುಮಾರಿ ತೊಡಿಕಾನ ಅವರು ಹೇಳಿದರು.

 ತ್ರಿಪದಿಗಳ ಬ್ರಹ್ಮ, ಚಕ್ರವರ್ತಿ ಎಂಬ ಬಿರುದು ಪಡೆದಿರುವ ಸರ್ವಜ್ಞ ಅವರು ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತಾವಾದಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಮೂರು ಸಾಲಿನಲ್ಲಿ ಪದ್ಯಗಳನ್ನು ರಚಿಸುವ ಮೂಲಕ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬರೆದಿರುವುದು ಶ್ಲಾಘನೀಯ ಎಂದರು.

ಸಾಮಾಜಿಕ ವಿಮರ್ಶೆ, ಜೀವನಾನುಭವ, ಬದುಕಿನ ಸತ್ಯಗಳನ್ನು ಸರಳವಾಗಿ ತ್ರಿಪದಿಗಳ ಮೂಲಕ ಸರ್ವಜ್ಞ ಅವರು ವಿವರಿಸಿದ್ದಾರೆ ಎಂದು ಅವರು ಹೇಳಿದರು. ಸಮಾಜದಲ್ಲಿನ ಅಂಕುಡೊಂಕುಗಳನ್ನು ತ್ರಿಪದಿಗಳ ಮೂಲಕ ಬರೆದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ತ್ರಿಪದಿಗಳಲ್ಲಿ ವ್ಯಂಗ್ಯ, ವಿಡಂಬನೆ, ವಿಮರ್ಶೆ ಕಾಣಬಹುದಾಗಿದೆ ಎಂದು ಅವರು ನುಡಿದರು.

ಸರ್ವಜ್ಞ ಅವರ ತ್ರಿಪದಿಗಳಲ್ಲಿ ಸತ್ಯ, ಧರ್ಮ ಹಾಗೂ ನ್ಯಾಯನಿಷ್ಠೆ ಕಾಣಬಹುದಾಗಿದೆ. ಮೂರು ಸಾಲಿನ ತ್ರಿಪದಿಗಳು ಮೂರು ಪುಟಗಳಷ್ಟು ವಿವರವನ್ನು ನೀಡಬಹುದಾಗಿದೆ. ಅಂತಹ ಚಿಂತನೆಯನ್ನು ತ್ರಿಪದಿಗಳಲ್ಲಿ ವರ್ಣೀಸಲಾಗಿದೆ ಎಂದರು. ಸರ್ವಜ್ಞ ಅವರ ತ್ರಿಪದಿಗಳು ಪ್ರಸ್ತುತ ಸಮಾಜಕ್ಕೆ ದಿವ್ಯ ಔಷಧಿಯಾಗಿದೆ. ಆತ್ಮವಿಮರ್ಶೆ, ಸಾಮಾಜಿಕ ಚಿಂತನೆ, ಸಮಾಜ ಸುಧಾರಣೆಯತ್ತ ತ್ರಿಪದಿಗಳು ಬೆಳಕನ್ನು ಚೆಲ್ಲುತ್ತವೆ. ಕವಿ ಸರ್ವಜ್ಞ ಅವರು ದಾರ್ಶನಿಕ, ತತ್ವಜ್ಞಾನಿ, ವಾಸ್ತವವಾಗಿ ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಲೀಲಾಕುಮಾರಿ ತೊಡಿಕಾನ ಅವರು ವಿವರಿಸಿದರು.

ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಮುತ್ತಮ್ಮ ಅವರು ಮಾತನಾಡಿ 2015 ರಿಂದ ಕವಿ ಸರ್ವಜ್ಞ ಅವರ ಜಯಂತಿಯನ್ನು ಸರ್ಕಾರ ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿದರು. ಕವಿ ಸರ್ವಜ್ಞ ಜಯಂತಿ ಸಂದರ್ಭದಲ್ಲಿ ಕುಲಾಲ ಕುಂಬಾರ ಸಂಘದವರು ಸಾಂಸ್ಕೃತಿಕ, ಕ್ರೀಡಾಕೂಟವನ್ನು ಆಯೋಜಿಸುವಂತಾಗಬೇಕು ಇದಕ್ಕೆ ಜಿಲ್ಲಾಡಳಿತದ ಸಹಕಾರ ಅತ್ಯಗತ್ಯ ಎಂದು ಕೋರಿದರು.

ಕುಲಾಲ/ಕುಂಬಾರ ಸಂಘದ ಮಾಜಿ ಅಧ್ಯಕ್ಷರಾದ ಎಂ.ಡಿ.ನಾಣಯ್ಯ ಅವರು ಮಾತನಾಡಿ ಕವಿ ಸರ್ವಜ್ಞರ ಜಯಂತಿಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದ್ದು, ಸರ್ವಜ್ಞರ ಹೆಸರಿನಲ್ಲಿ ಎಲ್ಲರೂ ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು. ಕುಲಾಲ ಕುಂಬಾರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಅವರು ಮಾತನಾಡಿ ಸಾಲ ಕೊಳ್ಳುವಾಗ ಹೆಜ್ಜೇನು ಸವಿದಂತೆ, ಸಾಲ ನೀಡುವಾಗ ಹೆಜ್ಜೇನು ಕಡಿದಂತೆ, ಎಂದು ವಿವರಿಸಿದ್ದಾರೆ ಎಂದು ಹೇಳಿದರು.

ಕುಲಾಲ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಕುಶಾಲಪ್ಪ ಮೂಲ್ಯ ಅವರು ಮಾತನಾಡಿ ಕವಿ ಸರ್ವಜ್ಞ ಅವರು ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲ್ಲೂಕು ಅಂಬಲೂರು ಗ್ರಾಮದಲ್ಲಿ ಜನಿಸಿ, ಕನ್ನಡ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ ಎಂದು ಹೇಳಿದರು.

ಕುಲಾಲ/ಕುಂಬಾರ ಮಹಿಳಾ ಸಂಘದ ಅಧ್ಯಕ್ಷರಾದ ಕಾಂತಿಮಣಿ, ಚಂದ್ರಶೇಖರ್ ಕುಲಾಲ, ಗಿಡ್ಡಪ್ಪ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು, ಕಲಾವತಿ ಮತ್ತು ತಂಡದವರು ನಾಡಗೀತೆ ಹಾಡಿದರು. ಸುಂಟಿಕೊಪ್ಪ ಪಿಡಿಒ ವಿ.ಜಿ.ಲೋಕೇಶ್ ನಿರೂಪಿಸಿ, ವಂದಿಸಿದರು.