ಗೋಣಿಕೊಪ್ಪಲು ಟ್ರಾಫಿಕ್ ಅವ್ಯವಸ್ಥೆಗೆ ಯಾರು ಹೊಣೆ?

ನಾವೇ ಹೊಣೆ...ಎಲ್ಲವನ್ನೂ ಪೊಲೀಸ್ ಇಲಾಖೆ, ಜನಪ್ರತಿನಿಧಿಗಳ ಮೇಲೇ ಏರುವ ಮುನ್ನ ಒಮ್ಮೆ ಯೋಚಿಸಿ...ಗೋಣಿಕೊಪ್ಪಲು ನಗರ ಪಾಲಿಬೆಟ್ಟ ರಸ್ತೆಯಿಂದ ಕಾವೇರಿ ಕಾಲೇಜುವರೆಗೆ ಸದ್ಯಕ್ಕೆ 124 ಅಡಿ ಅಗಲಗೊಳ್ಳಬೇಕಾಗಿದೆ.ಹಾಗಾದಾಗ ನಗರ ಮುಖ್ಯ ರಸ್ತೆ ಎರಡು ಭಾಗದಲ್ಲಿಯೂ ಪಾರ್ಕಿಂಗ್ ಮಾಡಲು ಅವಕಾಶವಿದೆ.ಲೋಕೋಪಯೋಗಿ ಇಲಾಖೆ, ಅಂತರಾಜ್ಯ ಹೆದ್ದಾರಿ ಪ್ರಾಧಿಕಾರ ಇವರೊಂದಿಗೆ ಸೂಕ್ತ ಸಂಹವನ ಅಗತ್ಯವಿದೆ.ಕೆಲವು ಉದ್ಯಮಿಗಳು ಗೋಣಿಕೊಪ್ಪಲು ಎಪಿಎಂಸಿಯಿಂದ ಕಾವೇರಿ ಕಾಲೇಜುವರೆಗೂ fly over ನಿರ್ಮಾಣದ ಬಗ್ಗೆ ಹಾಗೂ ಕೀರೆಹೊಳೆ,ಕೈಕೇರಿ ತೋಡು ಮೇಲೆ ಗೋಣಿಕೊಪ್ಪಲು ಸುತ್ತ ರಿಂಗ್ ರಸ್ತೆ ನಿರ್ಮಾಣ ಮಾಡಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.ಸದ್ಯದ ಸರ್ಕಾರದ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಮುಂದಿನ 10 ವರ್ಷ ಅಸಾಧ್ಯವಾಗಬಹುದು.
ಇದೀಗ ಗೋಣಿಕೊಪ್ಪಲು ಉಮಾ ಮಹೇಶ್ವರಿ ಪೆಟ್ರೋಲ್ ಪಂಪ್ ಸಮೀಪದಿಂದ ಅರುವತ್ತೊಕ್ಕಲು ಜಂಕ್ಷನ್ ವರೆಗೆ ಬೈಪಾಸ್ ಕಾಂಕ್ರೀಟ್ ರಸ್ತೆ ಕಾಮಗಾರಿ ಹಿನ್ನೆಲೆ ಸಹಜವಾಗಿಯೇ ಗೋಣಿಕೊಪ್ಪಲು ಮುಖ್ಯ ರಸ್ತೆ ಮೇಲೆ ವಾಹನ ಒತ್ತಡ ಹೆಚ್ಚಾಗಿದೆ.ದಿಢೀರ್ ಈ ವಾಹನ ಸಂದಣಿಗೆ ಪೊಲೀಸರು, ಜನಪ್ರತಿನಿಧಿಯನ್ನು ದೂರುವದು ಎಷ್ಟು ಸರಿ....
ಗೋಣಿಕೊಪ್ಪಲು ಮುಖ್ಯ ಪಟ್ಟಣದ ಇಬ್ಬದಿಯಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಿಸುವವರು pwd ಸೂಚನೆಯಂತೆ ಮುಖ್ಯರಸ್ತೆ ಅಗಲೀಕರಣಕ್ಕೆ ಉದ್ಧೇಶಿತ ಜಾಗ ಬಿಟ್ಟು ನಿರ್ಮಾಣ ಕಾರ್ಯ ಕೈಗೊಂಡಿರುವದು ಕಂಡು ಬಂದಿದೆ.ಗೋಣಿಕೊಪ್ಪಲು ಗ್ರಾ.ಪಂ.ಕೂಡಾ ಈ ಹಿಂದೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಬಿ.ಎನ್.ಪ್ರಕಾಶ್ ಉಸ್ತುವಾರಿಯಲ್ಲಿ ಮುಖ್ಯರಸ್ತೆಗೆ ನಿರ್ದಿಷ್ಟ ಜಾಗ ಬಿಟ್ಟು ಕಟ್ಟಿರುವದು ನಮ್ಮ ಕಣ್ಣ ಮುಂದೆಯೇ ಇದೆ.ನಮಗೆ ಬೇಕಿರುವದು ಗೋಣಿಕೊಪ್ಪಲು ಎಪಿಎಂಸಿ ಯಿಂದ ಪಾದಾಚಾರಿ ನಡೆಗೆ ಫುಟ್ ಪಾತ್, ಉತ್ತಮ ಮೋರಿ ಅಂದರೆ ಒಳ ಚರಂಡಿ ವ್ಯವಸ್ಥೆ.
ವಿದ್ಯುತ್ ಕಂಬಗಳು ಹಾದು ಹೋಗಲು ಉತ್ತಮ ಸ್ಥಳಾವಕಾಶ ಕೂಡ ಕಾದಿರಿಸಬೇಕಾಗಿದೆ.ರಸ್ತೆಗೆ ಎಪಿಎಂಸಿ ಯಿಂದ ಕಾವೇರಿ ಕಾಲೇಜುವರೆಗೂ ಇಬ್ಬದಿ ಉತ್ತಮ ಪಾರ್ಕಿಂಗ್ ಮಾರ್ಕಿಂಗ್ ಆವಾಗ ಮಾಡಬಹುದು. ಸದ್ಯ ಗೋಣಿಕೊಪ್ಪಲು ಮೇಲೆ fly over ವ್ಯವಸ್ಥೆ ಕಷ್ಟ ಸಾಧ್ಯ.
ಇದೀಗ ನಮಗೆ ಅಧಿಕೃತ ಮಾಹಿತಿ ಬಂದಿರುವಂತೆ ಹಲವು ಹಳೆಯ ಕಟ್ಟಡ ಮಾಲೀಕರು pwd ನಿರ್ದೇಶನದನ್ವಯ ರಸ್ತೆಗೆ ಫುಟ್ ಪಾತ್ ಹಾಗೂ ನಿರ್ದಿಷ್ಟ ಜಾಗ ಬಿಟ್ಟುಕೊಡಲು ಸಿದ್ಧರಿದ್ದಾರೆ.ಆದರೆ ಅದೇಕೋ pwd ಪ್ರಮುಖ ಅಧಿಕಾರಿಗಳು ಮುಂದುವರಿಯುವದು ಕಾಣುತ್ತಿಲ್ಲ.ಅಭಿವೃದ್ಧಿ ಪರ ಚಿಂತನೆ ಇಲ್ಲದಿದ್ದಾಗ ಗೋಣಿಕೊಪ್ಪಲು ವಾಹನ ದಟ್ಟಣೆ ಹಾಗೂ ಜನ ಸಂದಣಿಯಿಂದ ಅವ್ಯವಸ್ಥೆ ಸಾಧ್ಯಅದೇ ಈಗ ನಡೆಯುತ್ತಿರುವದು....ಗೋಣಿಕೊಪ್ಪಲು ಗ್ರಾ.ಪಂ.ಸಭಾಂಗಣದಲ್ಲಿ ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕರಾದ ಮಹೇಶ್ ಕುಮಾರ್ , ಪೊಲೀಸ್ ಅಧಿಕಾರಿಗಳು, ಗೋಣಿಕೊಪ್ಪಲು ಗ್ರಾ.ಪಂ.ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರ ಸಮಕ್ಷಮದಲ್ಲಿ ಇದೇ ಮಾತನ್ನು ಆಡಿದ್ದು....ಮೊದಲು ಗೋಣಿಕೊಪ್ಪಲು ನಗರದ ಪಾಲಿಬೆಟ್ಟ ಜಂಕ್ಷನ್ ನಿಂದ ಕಾವೇರಿ ಕಾಲೇಜುವರೆಗೆ ರಸ್ತೆ ಅಗಲೀಕರಣ ಮಾಡಿದ್ದಲ್ಲಿ ಇದೀಗ ಇರುವ ಪಾರ್ಕಿಂಗ್ ಸಮಸ್ಯೆ ತನ್ನಿಂದ ತಾನೇ ಇತ್ಯರ್ಥವಾಗಲಿದೆ.ಇದೀಗ ಇರುವ ಮುಖ್ಯ ಪಟ್ಟಣದ ಹಳೆಯ ಕಟ್ಟಡಗಳಿಗೆ ಈ ಹಿಂದೆ ಲೋಕೋಪಯೋಗಿ ಇಲಾಖೆ ಮಾರ್ಕಿಂಗ್ ಮಾಡಿ ಮಾಲೀಕರಿಗೆ ಸೂಚನೆ ನೀಡಲಾಗಿತ್ತು.ಆದರೆ ಇನ್ನೂ ಕಟ್ಟಡ ಕೆಡವುವ ಕಾರ್ಯ ಅನುಷ್ಠಾನ ಗೊಂಡಿಲ್ಲ.
ಇದು ಯಾವಾಗ? ಇದೀಗ ಅಂತಹಾ ಸುವರ್ಣ ಅವಕಾಶ ಬಂದಿದೆ.ಇಡೀ ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯನಗರಿ ಗೋಣಿಕೊಪ್ಪಲು ಅಂತರ ರಾಜ್ಯ ಹೆದ್ದಾರಿ ಅಗಲೀಕರಣಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಮತ್ತೊಂದು ಸರ್ವೆ ಕಾರ್ಯ ಕೂಡಲೇ ಮಾಡಿ, ಮೂರು ತಿಂಗಳ ನೋಟೀಸು ನೀಡಿ ಮಾಲೀಕರು ಅಡ್ಡಿ ಆತಂಕ ಒಡ್ಡಿದ್ದಲ್ಲಿ ಜೆಸಿಬಿ ತಂದು ಹಳೆಯ ಕಟ್ಟಡ ಕೆಡವಬೇಕಿದೆ.ಉದ್ಯಮಿಗಳಿಗೆ ,ವರ್ತಕರಿಗೆ ಕೆಲವು ತಿಂಗಳು ಕಷ್ಟವಾಗಬಹುದು? ಮಡಿಕೇರಿಯಲ್ಲಿ ಎಂ.ಎಂ.ನಾಣಯ್ಯ ಅವರು ಶಾಸಕರಾಗಿದ್ದಾಗ ಕಾಲೇಜು ರಸ್ತೆ ಕಟ್ಟಡ ಕೆಡವಲಿಲ್ಲವೆ? ಉದ್ಯಮಿ ತಮ್ಮು ಪೂವಯ್ಯ ಮತ್ತು ಎಂಎಂ.ನಾಣಯ್ಯ ಅವರ ನಡುವೆ ನಂತರ ಜಟಾಪಟಿ ನಡೆದಿರಬಹುದು? ಅದು ಬೇರೆ ವಿಚಾರ..ವೀರಾಜಪೇಟೆ ನಗರವೂ ಗಡಿಯಾರ ಕಂಬದ ಇಬ್ಬದಿ ಮುಖ್ಯ ರಸ್ತೆ...ಇದೇ ಸಮಸ್ಯೆ ಎದುರಿಸುತ್ತಿದೆ.ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತನ್ನ ಕಾನೂನನ್ನು ಸರಿಯಾಗಿ ಬಳಕೆ ಮಾಡಿದ್ದಲ್ಲಿ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಂತೆ ಗೋಣಿಕೊಪ್ಪಲು ರಸ್ತೆ ಅತಿಕೃಮಣ ಜಾಗ ಒಡೆದು ಹಾಕುವದು ಕಷ್ಟವಲ್ಲ.
ಬೆಂಗಳೂರು ನೈಸ್ ರಸ್ತೆ, ಮೈಸೂರು ರಿಂಗ್ ರಸ್ತೆ ಅಭಿವೃದ್ಧಿ ಆಗಬೇಕಾದರೆ..ಕೋಟಿಗಟ್ಟಲೆ ಬೆಲೆ ಬಾಳುವ ಬಿಲ್ಡಿಂಗ್ ಕೆಡವಲಿಲ್ಲವೇ....ಗೋಣಿಕೊಪ್ಪಲಿಗೆ ಇದೀಗ ಇಂತಹಾ ಕಾನೂನು ಅಳವಡಿಸುವ ಅಗತ್ಯವಿದೆ.ಇತ್ತೀಚೆಗೆ ವೀರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ನೇತ್ರತ್ವದಲ್ಲಿ ಇಲ್ಲಿನ ಪರಿಮಳ ಮಂಗಳ ವಿಹಾರದಲ್ಲಿ ವರ್ತಕರ ಸಂಘ, ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ನಗರ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಮತ್ತೊಂದು ಸಭೆ ನಡೆದರೂ ಅದರ ಉದ್ಧೇಶ ಅಷ್ಟಾಗಿ ಈಡೇರಲಿಲ್ಲ.ಇದೀಗ ಉತ್ತಮ ಜನಪರ ಶಾಸಕರಾಗಿ ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಮನಸ್ಸು ಮಾಡಿದರೆ.....ಇದು ಸಾಧ್ಯ...ಅಸಾಧ್ಯವೇನಲ್ಲ....
ಇಡೀ ಗೋಣಿಕೊಪ್ಪಲು ಬಂದ್ ಗೊಳಿಸಿ ಗೋಣಿಕೊಪ್ಪಲು ಸರಕಾರಿ ಶಾಲಾ ಮೈದಾನದಲ್ಲಿ ಸಭೆ ಕರೆಯಿರಿ....ಎಪಿಎಂಸಿಯಿಂದ ಕಾವೇರಿ ಕಾಲೇಜುವರೆಗೆ ಮುಖ್ಯರಸ್ತೆ ಇಬ್ಬದಿಯಲ್ಲಿಯೂ ಸ್ವಂತ ಕಟ್ಟಡ ಹೊಂದಿರುವ ಪ್ರತಿಯೊಬ್ಬ ಮಾಲೀಕರು ಆ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾ.ಪಂ.ಮೂಲಕ ಪ್ರತ್ಯೇಕ ನೋಟೀಸು ಮಾಲೀಕರಿಗೆ ಜಾರಿ ಮಾಡಬೇಕು.ಹೈವೇ ಅಥಾರಿಟಿ ಅಧಿಕಾರಿಗಳೂ ತಮ್ಮ ವಿವರಣೆ ನೀಡಲು ಸಮರ್ಥವಾಗಿ ರಸ್ತೆ ಅಗಲೀಕರಣದ ಬಗ್ಗೆ ಕಾನೂನು ಇತ್ಯಾದಿ ಬಗ್ಗೆ ಅಗತ್ಯ ಮಾಹಿತಿ ನೀಡಲು ಹಾಜರಿರಬೇಕು.
ಕೇವಲ ಗೋಣಿಕೊಪ್ಪಲು ನಾಗರಿಕರು, ಅಟೋ ,ವಾಹನ, ಬಸ್ ಇತ್ಯಾದಿ ಗೂಡ್ಸ್ ಸರಕು ಸಾಗಾಟ ಮಾಲೀಕರಲ್ಲದೆ...ಸಾರ್ವಜನಿಕವಾಗಿ ಅತ್ಯಗತ್ಯವಾದ ಕೆಲಸವಾದ ಹಿನ್ನೆಲೆ ದಕ್ಷಿಣ ಕೊಡಗಿನ ಬುದ್ದಿ ಜೀವಿಗಳಿಗೂ ಮಾತನಾಡಲು ಅವಕಾಶ ಇರಬೇಕು.ಪೊನ್ನಂಪೇಟೆ- ವೀರಾಜಪೇಟೆ ವಕೀಲರ ಸಂಘದ ಪದಾಧಿಕಾರಿಗಳು..ಗೋಣಿಕೊಪ್ಪಲು ಮುಖ್ಯ ರಸ್ತೆಯನ್ನು ಅವಲಂಬಿಸುವ ಸುಮಾರು 5000 ಜನರನ್ನು ಸೇರಿಸಿ ಮಹತ್ವದ ಜನಸಂಪರ್ಕ ಕರೆದು ಅಗತ್ಯ ಮಾಹಿತಿ ನೀಡಿದ್ದಲ್ಲಿ ಕನಿಷ್ಟ ಮುಂದಿನ ಒಂದು ವರ್ಷದ ಅವಧಿಯಲ್ಲಿ ಗೋಣಿಕೊಪ್ಪಲು ಹೆದ್ದಾರಿ ಅಗಲೀಕರಣ ಸಾಧ್ಯವಾಗಲಿದೆ.ತೆರೆಮರೆಯಲ್ಲಿ ದ್ವಿಮುಖ ಧೋರಣೆ ತಳೆದಿರುವ ವ್ಯಕ್ತಿಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೃದು ಧೋರಣೆ ಅನುಸರಿಸದಿದ್ದರೆ ಇದು ಖಂಡಿತಾ ಸಾಧ್ಯ...ನಮ್ಮ ವಾಣಿಜ್ಯ ನಗರಿ ವಾಹನ ದಟ್ಟಣೆ, ಜನ ಸಂದಣಿಯಿಂದ ಪಾರಾಗಬೇಕಾದರೆ ಇದಕ್ಕಿಂತಹಾ ಉತ್ತಮ ಮಾರ್ಗೋಪಾಯ ಇಲ್ಲ.ಮಾನ್ಯ ಶಾಸಕರು, ಸಾರ್ವಜನಿಕ ಹೋರಾಟಗಾರರು, ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು, ಕಟ್ಟಡ ತೆರವು ಮಾಡಲು ಸಿದ್ಧರಿರುವ ಕಟ್ಟಡ ಮಾಲೀಕರು ಮನಸ್ಸು ಮಾಡಿದ್ದಲ್ಲಿ ಕನಿಷ್ಟ ಒಂದು ತಿಂಗಳ ಮುನ್ನವೇ ಪ್ರಚಾರ
ಆರಂಭಿಸಿದರೆ ಇದು ಖಂಡಿತಾ
ಸಾಧ್ಯವಿದೆ....
ತಿಂಗಳ
ಮುನ್ನವೇ ಮಹಾ ಜನಸಂಪರ್ಕ ಸಭೆ ಕರೆದಲ್ಲಿ ಇದು ಸಾಧ್ಯ.
ಇದು ಮೊದಲ ಹೆಜ್ಜೆ ಆಗಲಿ.
ಟಿ.ಎಲ್.ಶ್ರೀನಿವಾಸ್, ಸುದ್ದಿ ಸಂಸ್ಥೆ.