14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಆರು ಮಂದಿ ಆರೋಪಿಗಳ ಬಂಧನಕ್ಕಾಗಿ ಶೋಧ

ಖಗಾರಿಯಾ (ಬಿಹಾರ): ಬಿಹಾರದ ಖಗಾರಿಯಾದಲ್ಲಿ 14 ವರ್ಷದ ಬಾಲಕಿಯೊಬ್ಬಳ ಮೇಲೆ ಆರು ಮಂದಿ ಪುರುಷರು ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಎಲ್ಲ ಆರೋಪಿಗಳು ಪರಾರಿಯಾಗಿದ್ದು, ಬಂಧನ ಕಾರ್ಯಾಚರಣೆ ಮುಂದುವರಿದಿದೆ.
ಬಾಲಕಿಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಪರಿಚಿತನಾದ ವ್ಯಕ್ತಿಯೊಬ್ಬನು ಮಾತನಾಡುವ ನೆಪದಲ್ಲಿ ಬಾಲಕಿಯನ್ನು ಮನೆಯಿಂದ ಹೊರಗೆ ಕರೆದು ತನ್ನ ಮೋಟಾರ್ ಸೈಕಲ್‌ನಲ್ಲಿ ಹೊಲಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ, ಅವನು ಮತ್ತು ಇತರ ಐದು ಮಂದಿ ಸೇರಿ ಬಾಲಕಿಗೆ ಮಾದಕ ದ್ರವ್ಯ ಮಿಶ್ರಿತ ಪಾನೀಯ ನೀಡಿದ್ದು, ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಅತ್ಯಾಚಾರದ ನಂತರ ಬಾಲಕಿ ಪ್ರಜ್ಞಾಹೀನಳಾಗಿದ್ದು, ಆರೋಪಿಗಳು ಆಕೆಯನ್ನು ಹೊಲದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ರಾತ್ರಿಯಿಡೀ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಬಾಲಕಿ ಬೆಳಿಗ್ಗೆ ಪ್ರಜ್ಞೆ ಬಂದ ಬಳಿಕ ಮನೆಗೆ ತೆರಳಿ ನಡೆದ ಘಟನೆಯನ್ನು ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.
ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರಿಂದ ಆರು ಮಂದಿ ಆರೋಪಿಗಳನ್ನು ಗುರುತಿಸಿದ್ದು, ಪ್ರಕರಣ ದಾಖಲಿಸಲಾಗಿದೆ. “ಶಂಕಿತರನ್ನು ಪತ್ತೆಹಚ್ಚಿ ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಖಗಾರಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.