ತಡವಾಗಿ ಬಂದಿದ್ದಕ್ಕೆ 6ನೇ ತರಗತಿ ಬಾಲಕಿಗೆ ‘100 ಭಸ್ಕಿ’ ಶಿಕ್ಷೆ! ಮುಂದಾಗಿದ್ದೇನು?
ಪಾಲ್ಘರ್: ಶಾಲೆಗೆ ತಡವಾಗಿ ತಲುಪಿದ್ದಕ್ಕಾಗಿ ಶಿಕ್ಷೆಯಾಗಿ 100 ಭಸ್ಕಿ ಗಳನ್ನು ಮಾಡುವಂತೆ ಒತ್ತಾಯಿಸಿದ್ದರಿಂದ 6ನೇ ತರಗತಿಯ ಬಾಲಕಿ ವಾರದೊಳಗೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ-ಸತಿವಾಲಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನವೆಂಬರ್ 8ರಂದು ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿ ಬಾಲಕಿ ಹಾಗೂ ಇನ್ನೂ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 100 ಭಸ್ಕಿಗಳನ್ನು ಮಾಡಲು ಹೇಳಿದ್ದಾರೆಯೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಸದಸ್ಯರು ಆರೋಪಿಸಿದ್ದಾರೆ.
“ಅಮಾನವೀಯ ಶಿಕ್ಷೆಯೇ ನನ್ನ ಮಗಳ ಸಾವಿಗೆ ಕಾರಣ,” ಎಂದು ಬಾಲಕಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಾಲಾ ಬ್ಯಾಗ್ ಬೆನ್ನಿಗೆ ಕಟ್ಟಿಕೊಂಡೇ ಭಸ್ಕಿಗಳನ್ನು ಮಾಡಲು ಶಿಕ್ಷಕಿ ಬಲವಂತಪಡಿಸಿದ್ದರು. ಆ ದಿನದ ಶಿಕ್ಷೆಯ ನಂತರ ಮಗಳು ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲತೊಡಗಿದ್ದಳು. ನಿಂತುಕೊಳ್ಳಲು ಸಹ ಆಗುತ್ತಿರಲಿಲ್ಲ,” ಎಂದು ಅವರು ದುಃಖ ವ್ಯಕ್ತಪಡಿಸಿದರು.
ವಸಾಯಿಯ ಎಂಎನ್ಎಸ್ ನಾಯಕ ಸಚಿನ್ ಮೋರೆ, ಬಾಲಕಿಗೆ ಮೊದಲೇ ಆರೋಗ್ಯ ಸಮಸ್ಯೆಗಳಿದ್ದರೂ ಶಿಕ್ಷೆ ನೀಡಲಾಗಿದೆ ಎಂದು ಆರೋಪಿಸಿದರು. ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಪಾಂಡುರಂಗ ಗಲಂಗೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಅವರು ಹೇಳಿದರು.
“ಮಗಳ ಸ್ಥಿತಿ ಶಿಕ್ಷೆಯ ನಂತರವೇ ಹದಗೆಟ್ಟಿತು,” ಎಂದು ಬಾಲಕಿಯ ತಾಯಿ ಕಣ್ಣೀರಿಟ್ಟಿದ್ದಾರೆ. ಪೋಷಕರು ಶುಲ್ಕ ಪಾವತಿಸಿದರೂ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ ಶಿಕ್ಷಕಿ ಮಕ್ಕಳಿಗೆ ಶಿಕ್ಷೆ ನೀಡುತ್ತಿದ್ದರೆಂದು ಅವರು ಆರೋಪಿಸಿದರು. “ಭಾರವಾದ ಚೀಲದೊಂದಿಗೆ ಭಸ್ಕಿ ಮಾಡಿಸುವುದು ಅಮಾನವೀಯತೆ. ಅದೇ ನನ್ನ ಮಗಳು ಜೀವ ಕಳೆದುಕೊಂಡಿದ್ದಾಳೆ,” ಎಂದು ತಾಯಿ ನೋವಿನಿಂದ ಹೇಳಿದರು.
