ಮಡಿಕೇರಿ; ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಗತ್ಯ ತರಬೇತಿ ನೀಡುವುದರೊಂದಿಗೆ ಸಾರ್ವಜನಿಕರಿಗೆ ಸಹಕರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು: ಡೀನ್ ಡಾ. ಲೋಕೇಶ್
ಮಡಿಕೇರಿ: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಜನಸ್ನೇಹಿ ಸೇವೆಗೆ ಒತ್ತು ನೀಡಲಾಗುವುದು. ವೈದ್ಯರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಗತ್ಯ ತರಬೇತಿ ನೀಡುವುದರೊಂದಿಗೆ ಸಾರ್ವಜನಿಕರಿಗೆ ಸಹಕರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ) ಡೀನ್ ಡಾ. ಲೋಕೇಶ್ ಭರವಸೆಯ ನುಡಿಗಳನ್ನಾಡಿದರು.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಡಾ. ಲೋಕೇಶ್, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಸ್ಪತ್ರೆಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿರುವ ಸಮಸ್ಯೆಗಳ ಕುರಿತು ಪತ್ರಕರ್ತರು ಗಮನ ಸೆಳೆದರು. ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಸೂಕ್ತವಾಗಿ ರೋಗಿಗಳಿಗೆ ಸ್ಪಂದಿಸುವುದಿಲ್ಲ. ಅವರ ವರ್ತನೆಯಲ್ಲಿ ಬದಲಾವಣೆಗಳಾಗಬೇಕು. ಆಸ್ಪತ್ರೆ ಎಂದರೆ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತುರ್ತು ಸ್ಪಂದನದ ಅವಶ್ಯಕತೆಯಿದೆ ಎಂದು ಹಲವು ಪತ್ರಕರ್ತರು ಗಮನಕ್ಕೆ ತಂದರು. ಈ ಕುರಿತು ಪ್ರತಿಕ್ರಿಯಿಸಿದ ಡಾ. ಲೋಕೇಶ್ ಅವರು, ಈ ಬಗ್ಗೆ ವ್ಯಾಪಕ ದೂರುಗಳಿವೆ.
ಪರಿಹರಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು. ಸೂಕ್ತ ಮಾರ್ಗದರ್ಶನ ಒದಗಿಸುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಲಾಗಿದ್ದು, ಅದನ್ನು ಹೆಚ್ಚಿಸಲಾಗುವುದು. ಸಿಬ್ಬಂದಿ ವರ್ಗದ ಮನಪರಿವರ್ತನೆಗೆ ತುರ್ತು ಕ್ರಮವಹಿಸಿ ಮುಂದೆ ಜನಸ್ನೇಹಿಯಾಗಿ ಸೇವೆ ನೀಡಲು ಮುಂದಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸಲು ಕ್ರಮವಹಿಸಲಾಗುವುದು. ಹೊರ ಆವರಣವನ್ನು ಬಳಸಿಕೊಂಡು ವ್ಯವಸ್ಥಿತವಾಗಿ ವಾಹನ ನಿಲುಗಡೆಗೆ ಯೋಜನೆ ರೂಪಿಸಲಾಗುವುದು. ಐಬಿ ಬಳಿ ಜಿಲ್ಲಾಸ್ಪತ್ರೆಗೆ ಸೇರಿದ ಜಾಗವಿದ್ದು, ಅಲ್ಲಿಯೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದು ಡಾ. ಲೋಕೇಶ್ ಹೇಳಿದರು.
ವೈದ್ಯರು ಆಸ್ಪತ್ರೆಯಲ್ಲಿ ಸಕಾಲದಲ್ಲಿ ಸಿಗುವುದಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳೇ ರೋಗಿಗಳ ಚಿಕಿತ್ಸೆಗೆ ಮುಂದಾಗುತ್ತಾರೆ. ಅದಲ್ಲದೆ, ಸೂಕ್ತ ಪರಿಹಾರೋಪಾಯ ನೀಡುವಲ್ಲಿ ವಿಫಲತೆ ಕಂಡುಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಲೋಕೇಶ್ ಅವರು, ಆಸ್ಪತ್ರೆಯಲ್ಲಿ ಶೇ 28 ವೈದ್ಯರ ಕೊರತೆ ಇದೆ. ನೇಮಕಾತಿಗೆ ಆಹ್ವಾನಿಸಲಾಗಿದೆ. ಆದರೆ, ಯಾರು ಅರ್ಜಿ ಸಲ್ಲಿಸಿಲ್ಲ. ಸೀಮಿತ ವೈದ್ಯರ ನಡುವೆಯೂ ತ್ವರಿತ ಸ್ಪಂದನ ಕೊಡುವ ಕೆಲಸವಾಗುತ್ತಿದೆ. ಉಚಿತ ಚಿಕಿತ್ಸೆಯ ಮೂಲಕ ನೆರವು ನೀಡಲಾಗುತ್ತಿದೆ. ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡುವ ಕ್ರಮ ದೂರವಾಗಬೇಕಾದರೆ ಕಾರ್ಡಿಯಾಲಜಿ ವೈದ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಇದರ ನಿಯೋಜನೆಗೆ ಈಗಾಗಲೇ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸ್ಕ್ಯಾನಿಂಗ್ ಸೇವೆ ಉಚಿತವಾಗಿ ದೊರೆಯುತ್ತಿಲ್ಲ ಎಂಬ ದೂರಿಗೆ ಉತ್ತರಿಸಿದ ಲೋಕೇಶ್ ಅವರು, ದಾಖಲಾಗುವ ಬಿಪಿಎಲ್ ಕಾರ್ಡ್ದಾರ ಒಳರೋಗಿಗಳಿಗೆ ಮಾತ್ರ ಉಚಿತ ಸ್ಕ್ಯಾನಿಂಗ್ ಸೇವೆ ದೊರೆಯುತ್ತದೆ. ಉಳಿದಂತೆ ಎಂಆರ್‌ಐ, ಇಸಿಜಿ ವ್ಯವಸ್ಥೆಯೂ ಆಸ್ಪತ್ರೆಯಲ್ಲಿದೆ ಎಂದು ವಿವರಿಸಿದರು.
ಕ್ಯಾನರ್ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಲು ಕಿಮೋ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಇದ್ದು, ಮಂಜೂರಾತಿ ಕೂಡ ಆಗಿದೆ. ಆದರೆ, ಇದಕ್ಕೆ ತಜ್ಞ ವೈದ್ಯರು ಲಭ್ಯವಾಗುತ್ತಿಲ್ಲ. ಮೈಸೂರಿನಿಂದ ವಾರಕ್ಕೆ 2 ದಿನ ವೈದ್ಯರು ಬರಲಿದ್ದಾರೆ. ಶೀಘ್ರದಲ್ಲಿಯೇ ಇದಕ್ಕೂ ಕ್ರಮವಹಿಸಲಾಗುವುದು. ಕ್ರಿಟಿಕಲ್ ಕೇರ್ ಸೆಂಟರ್ ನಿರ್ಮಾಣ ಹಂತದಲ್ಲಿದ್ದು, ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ತುರ್ತು ಸಂದರ್ಭ ತಜ್ಞ ವೈದ್ಯರಿಂದ ತ್ವರಿತ ಚಿಕಿತ್ಸೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಹೆಚ್ಚಿನ ದೂರುಗಳಿವೆ. ಖಾಸಗಿ ಕ್ಲಿನಿಕ್‌ಗೆ ವೈದ್ಯರು ಕರೆಸಿಕೊಂಡು ಚಿಕಿತ್ಸೆ ನೀಡುತ್ತಾರೆ. ಹೆರಿಗೆ ಸಮಯದಲ್ಲಿ ಹಣ ನೀಡಬೇಕಾದ ಸ್ಥಿತಿಯೂ ಇದೆ ಎಂಬ ದೂರುಗಳಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು. ಯಾರು ಕೂಡ ಹಣ ನೀಡಬಾರದು. ಹಣ ಕೇಳಿದ ಪ್ರಕರಣಗಳಿದ್ದಲ್ಲಿ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಸರಕಾರಿ ವೈದ್ಯರು ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿ ಒಳರೋಗಿಗಳನ್ನು ದಾಖಲು ಮಾಡಿಕೊಳ್ಳಬಾರದು ಎಂದು ಸರಕಾರ ಘೋಷಿಸಲಿದೆ ಎಂದು ಡಾ. ಲೋಕೇಶ್ ಹೇಳಿದರು.
ಉಳಿದಂತೆ ಆಸ್ಪತ್ರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. 2 ಹೊಸ ಕಟ್ಟಡಗಳು ನಿರ್ಮಾಣಗೊಂಡಿವೆ. ಮತ್ತೊಂದು ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಅದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಯಶಸ್ವಿನಿ, ಆಯುಷ್ಮಾನ್ ಭಾರತ್ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ. ದಂತ ಭಾಗ್ಯ, ಉಚಿತ ಕನ್ನಡಕ ವಿತರಣೆಗೂ ಅವಕಾಶವಿದೆ ಎಂದು ವಿವರಿಸಿದರು. ಸ್ಥಾನೀಯ ವೈದ್ಯಾಧಿಕಾರಿ ಡಾ. ಧನಂಜಯ ಕುಮಾರ್ ಮಾತನಾಡಿ, ದೂರುಗಳಿದ್ದರೆ ತಕ್ಷಣ ಗಮನಕ್ಕೆ ತಂದರೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಸಾರ್ವಜನಿಕರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಚಿಕಿತ್ಸೆ ನೀಡುವ ಸಂದರ್ಭ ಹಿರಿಯ ವೈದ್ಯರನ್ನು ಕರೆಸಬೇಕೆಂದು ಕೇಳಬೇಕು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಆರೋಗ್ಯಕರ ಚರ್ಚೆಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯಬೇಕೆಂಬುದು ಸಂವಾದದ ಆಶಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ, ಜಿಲ್ಲಾ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸ್ವಾಗತಿಸಿ, ವಂದಿಸಿದರು.