ಬೆಂಗಳೂರಿನಲ್ಲೊಂದು ನಕಲಿ ಸಾಫ್ಟ್‌ವೇರ್ ಕಂಪನಿ; ಅಮೆರಿಕ ಪ್ರಜೆಗಳೇ ಗುರಿ!
ಬೆಂಗಳೂರು, ನ. 15: ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಹೆಸರಿನಲ್ಲಿ ಅಮೆರಿಕ ಪ್ರಜೆಗಳಿಗೆ ವಂಚನೆ ನಡೆಸುತ್ತಿದ್ದ ನಕಲಿ ಸಾಫ್ಟ್‌ವೇರ್ ಸಂಸ್ಥೆಯೊಂದನ್ನು ಸೈಬರ್ ಕ್ರೈಮ್ ಪೊಲೀಸರು ಬಯಲಿಗೆಳೆದಿದ್ದಾರೆ. ವೈಟ್ಫೀಲ್ಡ್ ಬಳಿಯ ವರ್ತೂರು ರಸ್ತೆಯಲ್ಲಿ ಮಸ್ಕ್ ಕಮ್ಯುನಿಕೇಷನ್ಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆಗೆ ಸೈಬರ್ ಕಮಾಂಡ್ ಯೂನಿಟ್‌ನ ವಿಶೇಷ ದಳ ಕಳೆದ ಎರಡು ದಿನಗಳಿಂದ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಆಗಸ್ಟ್‌ನಲ್ಲಿ ಆರಂಭವಾದ ಈ ನಕಲಿ ಸಂಸ್ಥೆ ತಾಂತ್ರಿಕ ದೋಷ, ವೈರಸ್ ಸಮಸ್ಯೆಗಳ ನೆಪದಲ್ಲಿ ಅಮೆರಿಕ ಗ್ರಾಹಕರಿಗೆ ಕರೆ ಮಾಡಿ ಮೋಸಮಾಡುತ್ತಿರುವ ಬಗ್ಗೆ ಸೈಬರ್ ಕಮಾಂಡ್ ಯೂನಿಟ್ ಗೆ ಮಾಹಿತಿ ಲಭಿಸಿತ್ತು. ಬಳಿಕ ಡಿಜಿಪಿ ಪ್ರಣಬ್ ಮೊಹಾಂತಿ ಮಾರ್ಗದರ್ಶನದಲ್ಲಿ ತಂಡ ರಚಿಸಿ ದಾಳಿ ಕೈಗೊಳ್ಳಲಾಯಿತು.
ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 21 ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಸಂದರ್ಭದಲ್ಲಿ ಕೆಲವರು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗೆ ಶೋಧ ಮುಂದುವರಿದಿದೆ.
ಸ್ಥಳದಲ್ಲಿ ನಡೆಸಿದ ಮಹಜರು ವೇಳೆ ಕಂಪ್ಯೂಟರ್ ಸಿಸ್ಟಂಗಳಿಂದ ಹಿಡಿದು ಡಿಜಿಟಲ್ ಸಾಧನಗಳು, ಮೊಬೈಲ್ ಫೋನ್ ಸೇರಿದಂತೆ ಅನೇಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಡಿಜಿಟಲ್ ಸಾಕ್ಷ್ಯ ವಶಕ್ಕೆ ಪಡೆದ ಬಳಿಕ ಅದರ ವಿಶ್ಲೇಷಣೆ ಆರಂಭವಾಗಿದೆ.
ಈ ಸಂಬಂಧ ವೈಟ್ಫೀಲ್ಡ್ ಸೆನ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ವಂಚನೆ ಜಾಲದ ಮೂಲವರೆಗೂ ತಲುಪುವ ಕಾರ್ಯಾಚರಣೆ ಮುಂದುವರಿದಿದೆ.
