‘ದೃಶ್ಯಂ’ ಕಥೆ ನೆನಪಿಸುವ ಕೊಲೆ ಪ್ರಕರಣ | ಪತಿಯನ್ನು ಹತ್ಯೆ ಮಾಡಿ ಅಡುಗೆಮನೆಯಲ್ಲೇ ಹೂತುಹಾಕಿದ ಪತ್ನಿ, ಪ್ರಿಯಕರ! :ಒಂದು ವರ್ಷದ ಬಳಿಕ ಬಯಲಾದ ಭೀಕರ ಅಪರಾಧ

‘ದೃಶ್ಯಂ’ ಕಥೆ ನೆನಪಿಸುವ ಕೊಲೆ ಪ್ರಕರಣ |  ಪತಿಯನ್ನು ಹತ್ಯೆ ಮಾಡಿ ಅಡುಗೆಮನೆಯಲ್ಲೇ ಹೂತುಹಾಕಿದ ಪತ್ನಿ, ಪ್ರಿಯಕರ! :ಒಂದು ವರ್ಷದ ಬಳಿಕ ಬಯಲಾದ ಭೀಕರ ಅಪರಾಧ
Photo credit: Prajavani (ಸಾಂದರ್ಭಿಕ ಚಿತ್ರ)

ಅಹಮದಾಬಾದ್ (ಗುಜರಾತ್): ಜನಪ್ರಿಯ ಮಲಯಾಳಂ ಸಿನಿಮಾ ‘ದೃಶ್ಯಂ’ ಕಥೆ ನೆನಪಿಸುವಂತೆಯೇ ಭಯಾನಕ ಕೊಲೆ ಪ್ರಕರಣವೊಂದು ಅಹಮದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆಯ ಅಡುಗೆಮನೆಯ ನೆಲದ ಕೆಳಗೇ ಹೂತುಹಾಕಿದ ಪತ್ನಿ ಹಾಗೂ ಆಕೆಯ ಪ್ರಿಯಕರರ ಕ್ರೂರ ಕೃತ್ಯವನ್ನು ಪೊಲೀಸರು ಒಂದು ವರ್ಷದ ಬಳಿಕ ಬಯಲಿಗೆಳೆದಿದ್ದಾರೆ.

ನಗರದ ಸರ್ಖೇಜ್ ಪ್ರದೇಶದಲ್ಲಿ ನಡೆದ ಈ ಘಟನೆ ಬೆಳಕಿಗೆ ಬಂದಿದ್ದು, ಮೃತರನ್ನು ಸಮೀರ್ ಅನ್ಸಾರಿ ಎಂದು ಗುರುತಿಸಲಾಗಿದೆ. ಇವರು ಬಿಹಾರ ಮೂಲದ ಮೇಸ್ತ್ರಿಯಾಗಿದ್ದು, 2016ರಲ್ಲಿ ರೂಬಿ ಎಂಬ ಮಹಿಳೆಯೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದರು.

ರೂಬಿ ತನ್ನ ಪ್ರಿಯಕರ ಇಮ್ರಾನ್ ವಘೇಲಾ ಹಾಗೂ ಇಬ್ಬರು ಸಂಬಂಧಿಕರ ಸಹಾಯದಿಂದ ಪತಿಯನ್ನು ಕೊಲೆಮಾಡಿದ್ದಾಳೆ ಎಂದು ಅಹಮದಾಬಾದ್ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಅಜಿತ್ ರಾಜಿಯನ್ ಅವರು ಹೇಳಿದ್ದಾರೆ.

 “ಅನ್ಸಾರಿ ರೂಬಿಯ ಅಕ್ರಮ ಸಂಬಂಧವನ್ನು ತಿಳಿದುಕೊಂಡು ಆಕೆಯನ್ನು ಹಿಂಸಿಸುತ್ತಿದ್ದರಿಂದ, ಅವನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಳು” ಎಂದು ಅವರು ತಿಳಿಸಿದರು.

ಇಮ್ರಾನ್, ಮೊದಲು ಅನ್ಸಾರಿಯ ಗಂಟಲನ್ನು ಕೊಯ್ದು ಶವವನ್ನು ತುಂಡುಗಳಾಗಿ ಮಾಡಿದ ಬಳಿಕ, ಎಲ್ಲರೂ ಸೇರಿ ಅಡುಗೆಮನೆಯ ನೆಲವನ್ನು ಅಗೆದು ಶವವನ್ನು ಅದರಲ್ಲಿ ಹೂತುಹಾಕಿ ಸಿಮೆಂಟ್ ಹಾಗೂ ಟೈಲ್‌ಗಳಿಂದ ಮುಚ್ಚಿದ್ದಾರೆ. ನಂತರ ರೂಬಿ ಹಲವು ತಿಂಗಳುಗಳ ಕಾಲ ಅದೇ ಮನೆಯಲ್ಲಿ ವಾಸವಿದ್ದು, ನಂತರ ಮಕ್ಕಳೊಂದಿಗೆ ಬೇರೆಡೆಗೆ ತೆರಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ಅನ್ಸಾರಿ ನಿಗೂಢವಾಗಿ ಕಾಣೆಯಾಗಿದ್ದರೂ, ಯಾರೂ ಪ್ರಕರಣ ದಾಖಲಿಸಿರಲಿಲ್ಲ. ತನಿಖೆ ನಡೆಸುತ್ತಿದ್ದ ಅಪರಾಧ ವಿಭಾಗದ ಪೊಲೀಸರು ಸರ್ಖೇಜ್ ಪ್ರದೇಶದ ಮನೆಯ ಅಡುಗೆಮನೆಯ ಕೆಳಗಿನಿಂದ ಶವದ ಮೂಳೆಗಳು ಹಾಗೂ ಇತರ ಅವಶೇಷಗಳನ್ನು ಮಂಗಳವಾರ ರಾತ್ರಿ ಪತ್ತೆಹಚ್ಚಿದ್ದಾರೆ. 

ಪ್ರಸ್ತುತ ಇಮ್ರಾನ್ ವಘೇಲಾವನ್ನು ಬಂಧಿಸಲಾಗಿದ್ದು, ರೂಬಿ ಹಾಗೂ ಇತರ ಇಬ್ಬರು ಸಹಚರರು ಪರಾರಿಯಾಗಿದ್ದಾರೆ. ಪತ್ತೆಯಾದ ಮೂಳೆಗಳು ಹಾಗೂ ಶವದ ಅವಶೇಷಗಳನ್ನು ಡಿಎನ್‌ಎ ಹಾಗೂ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.