ಆಗ್ರಾ | ಸೋದರಳಿಯನ ಹತ್ಯೆ ಪ್ರಕರಣ: ಶವವನ್ನು ಡ್ರಮ್ ನಲ್ಲಿ ಸುಟ್ಟುಹಾಕಿದ ಆರೋಪಿಯ ಬಂಧನ

ಆಗ್ರಾ: ಆಗ್ರಾದ ಮಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ ಹತ್ಯೆ ಪ್ರಕರಣಕ್ಕೆ ಪೊಲೀಸರು ತೆರೆ ಎಳೆದಿದ್ದಾರೆ. ತನ್ನ ಅಪ್ರಾಪ್ತ ಮಗಳ ಫೋಟೋಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದ ಸೋದರಳಿಯನನ್ನು ಕೊಂದು, ಶವವನ್ನು ಡ್ರಮ್ ನಲ್ಲಿ ತುಂಬಿ ಸುಟ್ಟುಹಾಕಿದ ಆರೋಪದ ಮೇಲೆ ದೇವಿರಾಂ (32) ಎಂಬಾತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನಿತ್ಯ ಕಿಶೋರ್ ಪರಾರಿಯಾಗಿದ್ದು, ಅವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
2024ರ ಫೆಬ್ರವರಿ 18ರಂದು 19 ವರ್ಷದ ರಾಕೇಶ್ ಎಂಬ ಯುವಕನನ್ನು ದೇವಿರಾಂ ತನ್ನ ಅಂಗಡಿಗೆ ಕರೆದೊಯ್ದಿದ್ದ. ಅಲ್ಲಿ ನಿತ್ಯ ಕಿಶೋರ್ ಜೊತೆಗೆ ದೇವಿರಾಂ ರಾಕೇಶ್‌ನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ, ಶವವನ್ನು ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುಂಬಿ, ಲೋಡರ್ ವಾಹನದ ಮೂಲಕ ಬೇರೆ ಸ್ಥಳಕ್ಕೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಹತ್ಯೆಯ ಕೆಲವು ದಿನಗಳ ನಂತರ ಅರ್ಧ ಸುಟ್ಟ ಶವ ಪತ್ತೆಯಾದರೂ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಡಿಎನ್‌ಎ ಪ್ರೊಫೈಲಿಂಗ್ ಮೂಲಕ ಶವವು ರಾಕೇಶ್ ನದ್ದೇ ಎಂಬುದು ದೃಢಪಟ್ಟಿತು. ಇದಾದ ಬಳಿಕ ಪೊಲೀಸರು ತನಿಖೆಯನ್ನು ವೇಗಗೊಳಿಸಿ ಆರೋಪಿ ದೇವಿರಾಂನನ್ನು ಸೋಮವಾರ ಬಂಧಿಸಿದರು ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅತುಲ್ ಶರ್ಮಾ ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಾಕೇಶ್ ದೇವಿರಾಂನ ಅಪ್ರಾಪ್ತ ಮಗಳ ಫೋಟೋಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ದೇವಿರಾಂ ಸೋದರಳಿಯನ ಹತ್ಯೆಗೆ ಮುಂದಾಗಿದ್ದಾನೆ. ಅಪರಾಧದ ನಂತರ ಸಾಕ್ಷಿ ನಾಶದ ಉದ್ದೇಶದಿಂದ ರಾಕೇಶ್ ನ ಮೊಬೈಲ್ ಫೋನ್‌ನ್ನು ಖಾರಿ ನದಿಗೆ ಎಸೆಯಲಾಗಿದೆ.
ಮಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಬೂಲ್‌ಪುರ ಗ್ರಾಮದ ನಿವಾಸಿಯಾಗಿರುವ ದೇವಿರಾಂ ಸ್ಥಳೀಯವಾಗಿ ಚಿಕ್ಕಮಟ್ಟದ ಅಂಗಡಿ ನಡೆಸುತ್ತಿದ್ದ. ಆತ ಎಸಗಿದ ಅಪರಾಧದ ವಿವರಗಳು ಬಹಿರಂಗವಾಗುತ್ತಿದ್ದಂತೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಮತ್ತೊಬ್ಬ ಆರೋಪಿ ನಿತ್ಯ ಕಿಶೋರ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಗಳು ಹಾಗೂ ಸ್ಥಳೀಯ ಸುಳಿವುಗಳ ಆಧಾರದಲ್ಲಿ ತನಿಖೆ ಮುಂದುವರಿಯುತ್ತಿದೆ.