ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣಗಳು: ದೇಶದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ
ಬೆಂಗಳೂರು, ಡಿ.12: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಬಿ) ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದು, ಈ ಬಾರಿ ಕಾರಣ — ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ. ಈ ವರ್ಷ ವಿವಿಧ ವಿಮಾನ ನಿಲ್ದಾಣಗಳಲ್ಲಿ ದಾಖಲಾಗಿದ ಒಟ್ಟು ಒಂಬತ್ತು ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳು ಕೆಐಎಬಿಯಲ್ಲೇ ಸಂಭವಿಸಿರುವುದು ಲೋಕಸಭೆಯಲ್ಲಿ ಬಹಿರಂಗವಾಗಿದೆ.
ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಮುರಳೀಧರ ಮೊಹೊಲ್, ಕಾಂಗ್ರೆಸ್ ಸಂಸದ ಗುರುಜೀತ್ ಸಿಂಗ್ ಔಜ್ಲಾ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಜನವರಿ 1ರಿಂದ ನವೆಂಬರ್ 27ರವರೆಗೆ ಬೆಂಗಳೂರಿನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ದೆಹಲಿ, ಹೈದರಾಬಾದ್, ಮುಂಬೈ, ನಾಗಪುರ ಮತ್ತು ರಾಜ್ಕೋಟ್ ವಿಮಾನ ನಿಲ್ದಾಣಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ವಿವರಿಸಿದರು.
ಪ್ರಕರಣಗಳು ಬೆಳಕಿಗೆ ಬಂದ ತಕ್ಷಣವೇ ದೂರುಗಳನ್ನು ದಾಖಲಿಸಿ, ಸ್ಥಳೀಯ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ವಿಮಾನ ನಿಲ್ದಾಣಗಳ ಭದ್ರತಾ ತಪಾಸಣೆ ವೇಳೆ ಸಂಭವಿಸುವಂತಹ ಘಟನೆಗಳನ್ನು ತಡೆಯಲು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಹಲವು ಕಡ್ಡಾಯ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಟರ್ಮಿನಲ್ ಕಟ್ಟಡಗಳೆಲ್ಲವೂ ಸಿಸಿಟಿವಿ ಕಣ್ಗಾವಲಿನಡಿಯಲ್ಲಿ ಇರಬೇಕೆಂಬ ನಿಯಮದಡಿ CISF ಹಾಗೂ ಏರ್‌ಲೈನ್ ಭದ್ರತಾ ಸಿಬ್ಬಂದಿಗಳು ಒಟ್ಟಾಗಿ ಶಂಕಾಸ್ಪದ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದಾರೆ.
ಪ್ರಯಾಣಿಕರಿಂದ ದೂರುಗಳನ್ನು ಸ್ವೀಕರಿಸಲು CISF ಸಹಾಯ ಕೌಂಟರ್‌ಗಳನ್ನು ಸ್ಥಾಪಿಸಿರುವುದರ ಜೊತೆಗೆ, ಸಿಸಿಟಿವಿ ನಿಗಾವನ್ನು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. CPGRAMS, INGRAM ಹಾಗೂ ಏರ್‌ಸೇವಾ ಪೋರ್ಟಲ್‌ಗಳ ಮೂಲಕವೂ ಕಳ್ಳತನ ಸೇರಿದಂತೆ ಲಗೇಜ್‌ಗಳ ತಪ್ಪು ನಿರ್ವಹಣೆ ಕುರಿತ ದೂರುಗಳನ್ನು ಸಲ್ಲಿಸಬಹುದಾಗಿದೆ.
ದೇಶದ ಅತ್ಯಧಿಕ ಪ್ರಯಾಣಿಕ ಸಂಚಾರ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಕೆಐಎಬಿಯಲ್ಲಿ ಭದ್ರತಾ ವೈಫಲ್ಯದ ಈ ಅಂಕಿ-ಅಂಶವು, ವಿಮಾನ ನಿಲ್ದಾಣ ಭದ್ರತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.
