ಕೊಡಗು ವಿದ್ಯಾಲಯದಲ್ಲಿ ವಿದ್ಯಾಥಿ೯ಗಳ ಸಂಭ್ರಮದೊಂದಿಗೆ ವಾಷಿ೯ಕ ಕ್ರೀಡಾಕೂಟ
ಮಡಿಕೇರಿ ಡಿ. 14 - ನಗರದ ಕೊಡಗು ವಿದ್ಯಾಲಯದಲ್ಲಿ ವಾಷಿ೯ಕ ಕ್ರೀಡಾಕೂಟ ವಿದ್ಯಾಥಿ೯, ಶಿಕ್ಷಕರ ಸಂಭ್ರಮದೊಂದಿಗೆ ಜರುಗಿತು.
ಕ್ರೀಡೋತ್ಸವದ ಒಲಂಪಿಕ್ ಟಾರ್ಚ್ ನ್ನು ಕೊಡಗು ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜು ಮಾತನಾಡಿ, ಕ್ರೀಡೆಗಳು ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥೈರ್ಯ, ಶಿಸ್ತು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ಮುಂದುವರಿಯಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ವ್ಯಕ್ತಿತ್ವ ನಿರ್ಮಾಣದಲ್ಲಿ ಗೆಳೆಯರ ಪಾತ್ರ ಮಹತ್ವದ್ದಾಗಿದ್ದು, ವಿಫಲತೆಯನ್ನು ಧೈರ್ಯದಿಂದ ಎದುರಿಸುವುದು ನಾಯಕತ್ವದ ಪ್ರಮುಖ ಗುಣವೆಂದು ಅವರು ಅಭಿಪ್ರಾಯಪಟ್ಟರು. ಒತ್ತಡದ ಸಂದರ್ಭಗಳಲ್ಲಿ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಬೇಕು ಹಾಗೂ ವಿನಯವೇ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುವ ಶಾಶ್ವತ ಗುಣವೆಂದೂ ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು.
ಕುಂಡ್ಲೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ ಸಾಮಾಜಿಕ ಮಾಧ್ಯಮಗಳ ಪರಿಣಾಮದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ವಿದ್ಯಾರ್ಥಿ–ಗುರುಗಳ ನಡುವಿನ ಪರಸ್ಪರ ಗೌರವದಲ್ಲಿ ಉಂಟಾಗುತ್ತಿರುವ ಕುಸಿತದ ಬಗ್ಗೆ ಗಮನ ಸೆಳೆದರು. ಶೈಕ್ಷಣಿಕ ಸಾಧನೆಯಷ್ಟೇ ಜೀವನದಲ್ಲಿ ಯಶಸ್ಸಿಗೆ ಸಾಕಾಗುವುದಿಲ್ಲ ಎಂದು ನೈಜ ಉದಾಹರಣೆಗಳ ಮೂಲಕ ವಿವರಿಸಿದ ದಿನೇಶ್ ಕಾಯ೯ಪ್ಪ , ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ ಎಂದು ತಿಳಿಸಿದರು. ಉತ್ತಮ ಸ್ನೇಹಿತರ ಆಯ್ಕೆ ಹಾಗೂ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ ಮಾತನಾಡಿ, ಶಿಕ್ಷಕರ ನಿಷ್ಠಾವಂತ ಸೇವೆ, ಪೋಷಕರು, ಆಡಳಿತ ಮಂಡಳಿಯ ಸಹಕಾರದಿಂದಾಗಿ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಪ್ರಶಂಸಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಶಿಕ್ಷಣ, ಶಿಸ್ತು, ಮೌಲ್ಯಾಧಾರಿತ ಬೋಧನೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದು ಅವರು ಭರವಸೆ ನೀಡಿದರು.
2025 ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ವೆಂಕಟರಾಜ , ದಿನೇಶ್ ಕಾರ್ಯಪ್ಪ ನೇತ್ರಾ ಗಣಪತಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಜಿಲ್ಲಾಧಿಕಾರಿಗಳು ಕ್ರೀಡಾಕೂಟ , ಫುಡ್ ಸ್ಟಾಲ್‌ಗಳ ಉದ್ಘಾಟನೆಯನ್ನು ನೆರವೇರಿಸಿದರು. ಪೋಷಕರಿಗಾಗಿ ವಿಶೇಷ ಫನ್ ಸ್ಪೋರ್ಟ್ಸ್‌ಗಳನ್ನೂ ಏರ್ಪಡಿಸಲಾಗಿತ್ತು.
ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ , ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಓವರ್‌ಆಲ್ ಚಾಂಪಿಯನ್ ಪ್ರಶಸ್ತಿಯನ್ನು ಬಾಪು ಗ್ರೂಪ್ ಪಡೆದುಕೊಂಡಿತು.
ಶಿಕ್ಷಕಿಯರಾದ ಅಂಜನ್ ಪಿ.ಎನ್. ಸೋನಾಮುತ್ತಮ್ಮ ವಿದ್ಯಾರ್ಥಿಗಳಾದ ಯಶೀಕ ಶೆಟ್ಟಿ ಪ್ರಣವ್ ಪಿ. ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿ ತ್ರಿನಾದ್ ,ಶಿಕ್ಷಕಿ ಸೋನಾಮುತ್ತಮ್ಮ ನೆರವೇರಿಸಿದರು. ವಿದ್ಯಾಥಿ೯ಗಳಾದ ಜನ್ಯ ಸಿ.ಟಿ. ಸ್ವಾಗತಿಸಿ, ಕೌಶಲ್ ಸಿ.ಪಿ. ವಂದಿಸಿದರು.
ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷೆ ಅಕಾಡೆಮಿಕ್ ಅಧ್ಯಕ್ಷೆ ಊರ್ವಶಿ ಮುದ್ದಯ್ಯ, ಕ್ರೀಡಾ ಚೇರ್ ಪರ್ಸನ್ ರಘು ಮಾದಪ್ಪ, ಸಲಹಾ ಮಂಡಳಿ ಸದಸ್ಯ ಕುಮಾರ್ ಸುಬ್ಬಯ್ಯ, ಕಾರ್ಯದರ್ಶಿ ಬಿ.ಎಸ್. ಪೂಣಚ್ಚ, ಸಮಿತಿ ಸದಸ್ಯರಾದ ಗುರುದತ್ತ್ ನಿಯತ ದೇವಯ್ಯ ಸೋಮಣ್ಣ,ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್ ಆಡಳಿತ ನಿರ್ವಹಣಾಧಿಕಾರಿ ರವಿ ಪಿ. ಮೇಜರ್ ದಾಮೋದರ್ , ಆಪರ್ಚುನಿಟಿ ಶಾಲೆಯ ಸಲಹೆಗಾರ್ತಿ ಮೀನಾ ಕಾರ್ಯಪ್ಪ, ಕಾರ್ಯದರ್ಶಿ ವೀಣಾ ಚಂಗಪ್ಪ ಸಲಹಾ ಮಂಡಳಿಯ ಸದಸ್ಯೆ ಪುಷ್ಪಾ ಕುಟ್ಟಣ್ಣ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪಥಸಂಚಲನ ಬ್ಯಾಂಡ್ ಪ್ರದಶ೯ನ, ಸ್ವಾಗತ ನೃತ್ಯ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆಯ ಮಕ್ಕಳ ನೃತ್ಯ ಪ್ರದರ್ಶನವು ಎಲ್ಲರ ಮನಸೆಳೆಯಿತು.
