ಅಂತಿಮಗೊಂಡ ಬಳಿಕವೂ ಬಿಹಾರ ಮತದಾರರ ಪಟ್ಟಿ ರದ್ದುಗೊಳಿಸಬಹುದು: ಸುಪ್ರೀಂ ಕೋರ್ಟ್ ಎಚ್ಚರಿಕೆ

ಅಂತಿಮಗೊಂಡ ಬಳಿಕವೂ ಬಿಹಾರ ಮತದಾರರ ಪಟ್ಟಿ ರದ್ದುಗೊಳಿಸಬಹುದು: ಸುಪ್ರೀಂ ಕೋರ್ಟ್ ಎಚ್ಚರಿಕೆ
Photo credit: NDTV

ಹೊಸದಿಲ್ಲಿ: ಬಿಹಾರದಲ್ಲಿ ನಡೆಯುತ್ತಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ನಿಲುವು ಪ್ರಕಟಿಸಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರವೂ ಯಾವುದೇ ಅಕ್ರಮ ಪತ್ತೆಯಾದರೆ ಸಂಪೂರ್ಣ ಪ್ರಕ್ರಿಯೆಯನ್ನೇ ರದ್ದುಗೊಳಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಪೀಠ ಎಚ್ಚರಿಕೆ ನೀಡಿದೆ.

 ಮತದಾರರ ಪಟ್ಟಿಗೆ ಗುರುತಿನ ಪುರಾವೆಯಾಗಿ ಆಧಾರ್ ಸೇರಿಸಲು ನೀಡಿದ್ದ ತನ್ನ ಹಿಂದಿನ ಆದೇಶವನ್ನು ತಿದ್ದುಪಡಿಸಬೇಕೆಂದು ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಚುನಾವಣಾ ಆಯೋಗವು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸುತ್ತಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿತು. ಆದರೆ, ಯಾವುದೇ ಅಕ್ರಮ ದೃಢಪಟ್ಟರೆ ಮಧ್ಯಪ್ರವೇಶಿಸಿ ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಬಹುದು ಎಂದು ಎಚ್ಚರಿಕೆ ನೀಡಿತು.

 “ಯಾವುದೇ ಅಕ್ರಮ ನಡೆಯುತ್ತಿದೆ ಎಂದು ನಮಗೆ ತಿಳಿದು ಬಂದರೆ, ಅಂತಿಮ ಪಟ್ಟಿ ಪ್ರಕಟವಾಗಿರುವುದರಿಂದ ಏನು ವ್ಯತ್ಯಾಸ? ನಾವು ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಬಹುದು,” ಎಂದು ನ್ಯಾಯಮೂರ್ತಿ ಕಾಂತ್ ಉಲ್ಲೇಖಿಸಿದರು.

 ಸೆಪ್ಟೆಂಬರ್ 8ರಂದು ಸುಪ್ರೀಂ ಕೋರ್ಟ್, ಮತದಾರರ ಪಟ್ಟಿಗೆ ಬಳಸಲಾಗುವ 11 ಗುರುತಿನ ದಾಖಲೆಗಳ ಜೊತೆಗೆ ಆಧಾರ್ ಸೇರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಆದರೆ, ಪೌರತ್ವವನ್ನು ಆಧಾರ್ ಮೂಲಕ ಸಾಬೀತು ಪಡಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ತೀರ್ಪಿನ ತಿದ್ದುಪಡಿ ಅರ್ಜಿಯ ಅಂತಿಮ ವಿಚಾರಣೆ ಅಕ್ಟೋಬರ್ 7ಕ್ಕೆ ನಿಗದಿಯಾಗಿದೆ.

ಇದೀಗ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸುತ್ತಿದ್ದು, ಬಡವರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಯತ್ನ ಎಂದು ಆರೋಪಿಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿ ಹಲವು ನಾಯಕರು “ಮತ ಕಳ್ಳತನ” ಆಗುತ್ತಿದೆ ಎಂದು ಆರೋಪಿಸಿ ಬಿಹಾರದಲ್ಲಿ ಮತದಾರರ ಹಕ್ಕು ಯಾತ್ರೆ ನಡೆಸಿದ್ದರು.

ಆದರೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿ, “ಏಳು ದಿನಗಳೊಳಗೆ ರಾಹುಲ್ ಗಾಂಧಿ ಅಫಿಡವಿಟ್ ಮೂಲಕ ಸಾಕ್ಷಿ ನೀಡಬೇಕು ಅಥವಾ ದೇಶಕ್ಕೆ ಕ್ಷಮೆಯಾಚಿಸಬೇಕು. ಮೂರನೇ ಆಯ್ಕೆ ಇಲ್ಲ” ಎಂದು ಎಚ್ಚರಿಕೆ ನೀಡಿದ್ದರು.