ಕೇರಳದಲ್ಲಿ ‘ಮೆದುಳು ತಿನ್ನುವ ಅಮೀಬಾ’ ರೋಗದ ಆತಂಕ: 61 ಪ್ರಕರಣಗಳು ಪತ್ತೆ, 19 ಮಂದಿ ಮೃತ್ಯು | ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಕೇರಳದಲ್ಲಿ ‘ಮೆದುಳು ತಿನ್ನುವ ಅಮೀಬಾ’ ರೋಗದ ಆತಂಕ: 61 ಪ್ರಕರಣಗಳು ಪತ್ತೆ, 19 ಮಂದಿ ಮೃತ್ಯು   | ಆರೋಗ್ಯ ಇಲಾಖೆಯಿಂದ ಎಚ್ಚರಿಕೆ
Photo credit: NDTV

ಹೊಸದಿಲ್ಲಿ: ಕೇರಳದಲ್ಲಿ ಅಪರೂಪವಾದರೂ ಪ್ರಾಣಾಪಾಯಕಾರಿ ಅಮೀಬಿಕ್ ಮೆನಿಂಗೊಎನ್ಸೆಫಲಿಟಿಸ್ (PAM) ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ಘೋಷಿಸಿದೆ. ‘ಮೆದುಳು ತಿನ್ನುವ ಅಮೀಬಾ’ ಎಂದೇ ಕರೆಯಲಾಗುವ ನೇಗ್ಲೇರಿಯಾ ಫೌಲೇರಿ ಸೂಕ್ಷ್ಮಾಣುವಿನಿಂದ ಉಂಟಾಗುವ ಈ ಸೋಂಕು ಈವರೆಗೆ 61 ಮಂದಿಗೆ ತಗುಲಿ, 19 ಮಂದಿಯ ಜೀವ ಕಸಿದುಕೊಂಡಿದೆ.ಕಳೆದ ಕೆಲವು ವಾರಗಳಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ.

ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, “ಈ ಸೋಂಕು ರಾಜ್ಯದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಮೊದಲು ಈ ಪ್ರಕರಣಗಳು ವರದಿಯಾದರೂ ಈಗ ರಾಜ್ಯದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿವೆ. ಮೂರು ತಿಂಗಳ ಶಿಶುವಿನಿಂದ ಹಿಡಿದು 91 ವರ್ಷದ ವೃದ್ಧರ ತನಕ ಈ ರೋಗ ಕಾಣಿಸಿಕೊಂಡಿದೆ” ಎಂದು ತಿಳಿಸಿದ್ದಾರೆ.

PAM ಸೋಂಕು ಕೇಂದ್ರ ನರಮಂಡಲವನ್ನು ಹಾನಿಗೊಳಿಸಿ ಮೆದುಳಿನಲ್ಲಿ ಊತ ಉಂಟುಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾವಿಗೆ ಕಾರಣವಾಗುತ್ತದೆ. ಈ ಸೋಂಕು ಸಾಮಾನ್ಯವಾಗಿ ಬೆಚ್ಚಗಿನ ಹಾಗೂ ನಿಂತಿರುವ ಸಿಹಿನೀರಿನಲ್ಲಿ ಈಜುವುದು, ಡೈವಿಂಗ್ ಮಾಡುವುದು ಅಥವಾ ಸ್ನಾನ ಮಾಡುವಾಗ ಮೂಗಿನ ಮೂಲಕ ಅಮೀಬಾ ಮೆದುಳಿಗೆ ಪ್ರವೇಶಿಸುವುದರಿಂದ ತಗುಲುತ್ತದೆ. ಕಲುಷಿತ ನೀರನ್ನು ಕುಡಿಯುವುದರಿಂದ ಈ ಸೋಂಕು ತಗುಲುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.

ತಲೆನೋವು, ಜ್ವರ, ವಾಕರಿಕೆ, ವಾಂತಿ ಮೊದಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತೀವ್ರಗೊಳ್ಳುವಿಕೆ ತುಂಬಾ ವೇಗವಾಗಿ ನಡೆಯುತ್ತದೆ. ಲಕ್ಷಣಗಳು ಸಾಮಾನ್ಯ ಮೆನಿಂಜೈಟಿಸ್‌ಗೆ ಹೋಲಿಕೆಯಾಗುವುದರಿಂದ ಪತ್ತೆ ಮಾಡಲು ಕಷ್ಟವಾಗುತ್ತದೆ. ತಡವಾದರೆ ಸಾವಿನ ಸಾಧ್ಯತೆ ಬಹಳ ಹೆಚ್ಚಾಗುತ್ತದೆ.

ಪ್ರಾಥಮಿಕ ಹಂತದಲ್ಲೇ ಪತ್ತೆಯಾದಲ್ಲಿ ಆಂಟಿಮೈಕ್ರೋಬಿಯಲ್ ಔಷಧಿಗಳ ಸಂಯೋಜನೆ ಚಿಕಿತ್ಸೆಗಾಗಿ ನೆರವಾಗಬಹುದು. ಆದರೆ ಪ್ರಕರಣಗಳು ಅಪರೂಪವಾಗಿರುವುದರಿಂದ ಮತ್ತು ತ್ವರಿತವಾಗಿ ಬೆಳವಣಿಗೆಯಾಗುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಬದುಕುಳಿಯುವ ಸಂಭವ ಕಡಿಮೆ.

ಸಾರ್ವಜನಿಕರಿಗೆ ಕೊಳಗಳು, ಸರೋವರಗಳು ಹಾಗೂ ನಿಂತಿರುವ ಅಥವಾ ಸಂಸ್ಕರಿಸದ ಸಿಹಿನೀರಿನಲ್ಲಿ ಈಜುವುದು ಅಥವಾ ಸ್ನಾನ ಮಾಡುವುದರಿಂದ ದೂರವಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸಿಹಿನೀರಿನಲ್ಲಿ ಇಳಿಯುವಾಗ ಮೂಗಿನ ಕ್ಲಿಪ್ ಬಳಸುವಂತೆ ಸಲಹೆ ನೀಡಲಾಗಿದೆ. ಬಾವಿ ಹಾಗೂ ನೀರಿನ ಟ್ಯಾಂಕ್‌ ಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ.

 ಕೇರಳದಲ್ಲಿ 2016ರಲ್ಲಿ ಮೊದಲ PAM ಪ್ರಕರಣ ವರದಿಯಾದರೂ, 2023ರವರೆಗೆ ಕೇವಲ ಎಂಟು ಪ್ರಕರಣಗಳು ಮಾತ್ರ ವರದಿಯಾಗಿದ್ದವು. ಆದರೆ 2023ರಲ್ಲಿ 36 ಪ್ರಕರಣಗಳು ಮತ್ತು ಒಂಭತ್ತು ಸಾವುಗಳು ದಾಖಲಾಗಿದ್ದವು. ಈ ವರ್ಷ ಈಗಾಗಲೇ 61 ಪ್ರಕರಣಗಳು ಮತ್ತು 19 ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಸಹಯೋಗದಲ್ಲಿ ಪರಿಸರ ಮಾದರಿ ಸಂಗ್ರಹಣೆ ನಡೆಸಿ ಕಲುಷಿತ ನೀರಿನ ಮೂಲಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದೆ.