ಕತ್ತಿಯಿಂದ ಕಾವಲುಗಾರನ‌ ಮೇಲೆ ಹಲ್ಲೆ,ಕಾರ್ಮಿಕನ ವಿರುದ್ಧ ಪ್ರಕರಣ ದಾಖಲು

ಕತ್ತಿಯಿಂದ  ಕಾವಲುಗಾರನ‌ ಮೇಲೆ ಹಲ್ಲೆ,ಕಾರ್ಮಿಕನ ವಿರುದ್ಧ ಪ್ರಕರಣ ದಾಖಲು

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಕಾವಲುಗಾರನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಆರೋಪದಡಿ ಕಾರ್ಮಿಕನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಲಿಬೆಟ್ಟ ಗ್ರಾಮದ ಹೊಸಳ್ಳಿ ಕಾಫಿ ತೋಟದಲ್ಲಿ ಘಟನೆ ನಡೆದಿದ್ದು, ಕಾವಲುಗಾರ ಪೊನ್ನಯ್ಯ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಕಾರ್ಮಿಕ ಸುಂದರ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಕ್ರಮಕೈಗೊಂಡಿದ್ದಾರೆ.

 ಪಾಲಿಬೆಟ್ಟದ ಖಾಸಗಿ ಸಂಸ್ಥೆಗೆ ಸೇರಿದ ಹೊಸಹಳ್ಳಿ ಕಾಫಿ ತೋಟದ ಮುಖ್ಯ ಗೇಟ್‌ನಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿರುವ ಪೊನ್ನಯ್ಯ ಸಂಜೆ ವೇಳೆಯಲ್ಲಿ ಗೇಟಿನ ಬಳಿ ಕೆಲಸದ ನಿಮಿತ್ತ ನಿಂತಿರುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಕಾರ್ಮಿಕ ಸುಂದರ್ ರಾಜ್ ಮುಖ್ಯ ಗೇಟಿನ ಮೂಲಕ ತೆರಳುತ್ತಿರುವುದನ್ನು ಕಂಡು ಈ ಗೇಟಿನ ಮೂಲಕ ತೆರಳದಂತೆ ತಡೆಯೊಡ್ಡಿದ್ದಾರೆ. ಇದರಿಂದ ಕೋಪಗೊಂಡ ಸುಂದರ್ ರಾಜ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಕೈಯಲ್ಲಿದ್ದ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಇದನ್ನು ತಡೆಯಲು ಮುಂದಾದಾಗ ಪೊನ್ನಯ್ಯ ಅವರ ಕೈಗೆ ಗಾಯಗಳಾಗಿವೆ. ಪೊನ್ನಯ್ಯ ಅವರನ್ನು ಅಮ್ಮತ್ತಿಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.