ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ; ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ
ಚಿಕ್ಕಮಗಳೂರು, ಡಿ.6: ದತ್ತ ಜಯಂತಿ ಬ್ಯಾನರ್ ತೆರವು ಸಂಬಂಧ ಉಂಟಾದ ಉದ್ವಿಗ್ನತೆ, ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಗಣೇಶ್ ಗೌಡ (40) ಅವರನ್ನು ಬೈಕ್ ನಲ್ಲಿ ಬಂದ ತಂಡ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ.
ಪೊಲೀಸ್ ಮಾಹಿತಿ ಪ್ರಕಾರ, ಹಲ್ಲೆ ನಡೆಸಿದವರಲ್ಲಿ ಸಂಜಯ್ ಮತ್ತು ಮಿಥುನ್ ಎನ್ನುವ ಇಬ್ಬರು ಬಜರಂಗದಳ ಕಾರ್ಯಕರ್ತರಿದ್ದಾರೆ ಎಂದು ಶಂಕಿಸಲಾಗುತ್ತಿದ್ದು, ದಾಳಿಯಲ್ಲಿ ಸಂಜಯ್ ತಲೆಗೆ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಥುನ್ ಸೇರಿದಂತೆ ಐವರನ್ನು ಸಖರಾಯಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ನಂತರ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. “ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇಬ್ಬರು ಆರೋಪಿಗಳು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನಿಖೆ ಎಲ್ಲಾ ಕೋನಗಳಿಂದ ಮುಂದುವರಿದಿದೆ,” ಎಂದು ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.
ಗಣೇಶ್ ಗೌಡ ಕಲ್ಮರಡಿ ಮಠದ ಬಳಿಯ ಕಿರಿದಾದ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ದಾಳಿಕೋರರು ಕಾರಿಗೆ ಅಡ್ಡ ಬಂದು ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲೇ ಮಚ್ಚು ಬಿದ್ದಿರುವುದು ಹಂತಕರು ಅತಿವೇಗದಲ್ಲಿ ಪರಾರಿಯಾಗಿರುವುದನ್ನು ಸೂಚಿಸುತ್ತದೆ.
ಘಟನೆಯ ನಂತರ ಮಲ್ಲೇಗೌಡ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಆನಂದ್,
“ಬ್ಯಾನರ್ ತೆರವು ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಎರಡೂ ಗುಂಪುಗಳ ನಡುವೆ ಉದ್ವಿಗ್ನತೆ ಇತ್ತು. ಪೊಲೀಸರು ಮುಂಚಿತವಾಗಿ ಮಧ್ಯಪ್ರವೇಶಿಸಿದ್ದರೆ ಘಟನೆ ತಪ್ಪಿಸಬಹುದಿತ್ತು. ಪ್ರಕರಣದಲ್ಲಿ ಸುಮಾರು ಎಂಟು ಮಂದಿ ಶಾಮೀಲಾಗಿರುವ ಶಂಕೆ ಇದೆ,” ಎಂದು ಪ್ರತಿಕ್ರಿಯಿಸಿದರು.
ಸಖರಾಯಪಟ್ಟಣ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ. ಗ್ರಾಮದಲ್ಲಿ ಕಾನೂನು-ಸುವ್ಯವಸ್ಥೆ ಸ್ಥಿರವಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
