ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ..!

(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಮೂವರ ನಡುವೆ ಕೊಡಗು ಕಾಂಗ್ರೆಸ್‌ನಲ್ಲಿ ಪೈಪೋಟಿ ಏರ್ಪಟ್ಟಿದೆ. ಮೂವರು ಹಿರಿಯ ಕಾಂಗ್ರೆಸ್ ಮುಖಂಡರು ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಭಾವ ಬಳಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಮಾಜಿ ವಕ್ಫ್ ಬೋರ್ಡ್ ಸದಸ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಕಾರ್ಯದರ್ಶಿ ಕುಂಜಿಲ ಗ್ರಾಮದ ಅದಪೊಳೆ ಮೊಹಮ್ಮದ್ ಹಾಜಿ, ಕೊಡಗು ಜಿಲ್ಲಾ ಕಾಂಗ್ರೆಸ್ ಸದಸ್ಯ ಖಾಲಿದ್ ಹಾಕತ್ತೂರು ಹಾಗೂ ಮಾಜಿ ವಕ್ಫ್ ಬೋರ್ಡ್ ಸದಸ್ಯ , ಹಾಲಿ ಡಿಸಿಸಿ ಸದಸ್ಯ ಕುಪ್ಪೋಡಂಡ ಶಾಫಿ ಹಾಜಿ ಎಡಪಾಲ ಸೇರಿ ಮೂವರು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಮೂವರಲ್ಲಿ ಒಬ್ಬರಿಗೆ ಅಧ್ಯಕ್ಷ ಗಿರಿ ಖಚಿತ ಎಂದು ಕಾಂಗ್ರೆಸ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಸದ್ಯದಲ್ಲೇ ಅಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆ ಇದ್ದು, ಕಳೆದ ವಾರ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಬೀಡುಬಿಟ್ಟು ವಸತಿ ಮತ್ತು ವಕ್ಫ್ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ಕುಂಜಿಲದ ಮೊಹಮ್ಮದ್ ಹಾಜಿ ಅವರ ಪರವಾಗಿ ಬಹುತೇಕ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ‘ಬ್ಯಾಟ್’ ಬೀಸುತ್ತಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಎಡಪಾಲ ಶಾಫಿ ಅವರು ಶತಾಯಗತಾಯವಾಗಿ ತಮ್ಮ ಪ್ರಭಾವ ಬಳಸಿ ವಕ್ಫ್ ಅಧ್ಯಕ್ಷ ಸ್ಥಾನಕ್ಕೇರಲು ಪ್ರಯತ್ನ ನಡೆಸುತ್ತಿದ್ದಾರೆ. ಕೊಡಗು ಕಾಂಗ್ರೆಸ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಬ್ಬರು ಶಾಫಿ ಎಡಪಾಲ ಅವರಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಪಕ್ಷದಲ್ಲಿ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಖಾಲಿದ್ ಹಾಕತ್ತೂರು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ, ಸಾಧ್ಯ ಎಂಬಿತ್ಯಾದಿ ಚರ್ಚೆಗಳು ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ವಿಶೇಷವೇನೆಂದರೆ ಈ ಮೂವರು ಆಕಾಂಕ್ಷಿಗಳು ಕೂಡ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರುಗಳು.
ಧಾರ್ಮಿಕ ಸಂಘಟನೆಗಳ ಪ್ರಾಬಲ್ಯ!
ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯೊಬ್ಬರು ತಮಗಿರುವ ಧಾರ್ಮಿಕ ಸಂಘಟನೆಗಳ ಪ್ರಾಬಲ್ಯವನ್ನು ಬಳಸಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರಬಲವಾಗಿರುವ ಧಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು, ಸಂಘಟನೆಯ ನಾಯಕರ ಮುಖಾಂತರ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಅದಲ್ಲದೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಬೆಂಬಲದೊಂದಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಕುರ್ಚಿಗೇರಲು ತಯಾರಿ ನಡೆಸುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ವಕ್ಫ್ ಬೋರ್ಡ್ ಗೆ ಉಪಾಧ್ಯಕ್ಷರಾಗಿ ಶಾಫಿ ಸಹದಿ ಬೆಂಗಳೂರು ಅವರನ್ನು ಸರ್ಕಾರ ನೇಮಿಸಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಫಿ ಸಹದಿ ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಈ ಅವಧಿಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಹಕೀಂ ಗೋಣಿಕೊಪ್ಪ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವಿಶೇಷವೇನೆಂದರೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯೊಬ್ಬರಿಗೆ, ಮುಸ್ಲಿಮ್ ಸಮುದಾಯದಲ್ಲಿ ಪ್ರಬಲವಾಗಿರುವ ಎರಡು ಧಾರ್ಮಿಕ ಸಂಘಟನೆಗಳ ಮುಖಂಡರು ಕೂಡ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಬೆಂಗಳೂರಿಗೆ ನಿಯೋಗ ತೆರಳಿದ್ದರು. ಆದರೆ ಅಧ್ಯಕ್ಷ ಸ್ಥಾನ ಕೈತಪ್ಪುವವರಿಗೆ ‘ವೈಸ್ ಚೇರ್ಮನ್’ ಸ್ಥಾನವನ್ನು ನೀಡುವುದು ಖಚಿತ ಎನ್ನಲಾಗಿದೆ. ಕಳೆದ ಬಾರಿ ಶಾಫಿ ಸಹದಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಾವು ತೊಡಗಿಸಿಕೊಂಡಿದ್ದ ಧಾರ್ಮಿಕ ಸಂಘಟನೆಯ ಪ್ರಮುಖರಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನವನ್ನು ನೀಡಿದ್ದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ಕೊಡವ ಮುಸ್ಲಿಮರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬಗ್ಗೆ ಕುಶಾಲನಗರ, ಮಡಿಕೇರಿ ಹಾಗೂ ಸೋಮವಾರಪೇಟೆ ಭಾಗದ ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಚರ್ಚೆಗೆ ಕಾರಣವಾಗಿತ್ತು.
ಇದೀಗ ಕೊಡಗು ವಕ್ಫ್ ಬೋರ್ಡ್ ಮೂವರು ಆಕಾಂಕ್ಷಿಗಳು ಕೂಡ ಕೊಡವ ಮುಸ್ಲಿಮರಾಗಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಲ್ಲ. ಮತ್ತೊಂದೆಡೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಬಗ್ಗೆ ಎರಡು ಶಾಸಕದ್ವಯರು ಕೂಡ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಇದೆ.ಆದರೆ ಎ.ಎಸ್. ಪೊನ್ನಣ್ಣ ಅವರು ಸೂಚಿಸುವ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಅದಲ್ಲದೇ ರಾಜ್ಯ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಶಾಫಿ ಸಹದಿ ಯಾರಿಗೆ ಒಲವು ತೋರುತ್ತಾರೋ ಅವರು ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಶಕ್ತಿಗೆ ಲಭ್ಯವಾಗಿದೆ.ಕಳೆದ ವಾರ ಪಕ್ಕದ ಮೈಸೂರು ಜಿಲ್ಲೆಯ ವಕ್ಫ್ ಬೋರ್ಡ್ ಅಧ್ಯಕ್ಷರನ್ನು ಸರ್ಕಾರ ನೇಮಿಸಿದ್ದು, ಸದ್ಯದಲ್ಲೇ ಕೊಡಗು ಜಿಲ್ಲೆಯ ವಕ್ಫ್ ಬೋರ್ಡ್ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆ ಇದೆ.
ಅಧ್ಯಕ್ಷ ಸ್ಥಾನ ದೊರಕುವ ವಿಶ್ವಾಸವಿದೆ:
ನಾನು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸದ್ದೇನೆ. ಈ ಹಿಂದೆ ಎರಡು ಅವಧಿಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ.ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಕೂಡ ಕೆಲಸ ಮಾಡಿದ್ದೇನೆ. ಪಕ್ಷ ಈ ಬಾರಿ ನನಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ನೀಡುವ ವಿಶ್ವಾಸ ಹೊಂದಿದ್ದೇನೆ.
ಅದಪೊಳೆ ಮೊಹಮ್ಮದ್ ಹಾಜಿ ಕುಂಜಿ, ರಾಜ್ಯ ಕಾಂಗ್ರೆಸ್ ಮಾಜಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ
ನಾನು ಪಕ್ಷದ ಹಿರಿಯ ಕಾರ್ಯಕರ್ತ
ಬೂತ್ ಮಟ್ಟದಿಂದಲೇ ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಇದೀಗ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನವನ್ನು ಕೇಳಿದ್ದೇನೆ. ಪಕ್ಷ ನನಗೆ ಕೊಡುವ ವಿಶ್ವಾಸ ಇದೆ.ಹಿರಿಯ ಕಾಂಗ್ರೆಸ್ ಮುಖಂಡರ ಬೆಂಬಲ ಇದೆ. ಈ ಹಿಂದೆ ವಕ್ಫ್ ಬೋರ್ಡ್ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸ ಇದೆ.
ಶಾಫಿ ಕುಪ್ಪೋಡಂಡ, ಡಿಸಿಸಿ ಸದಸ್ಯ.
ಪಕ್ಷದ ತೀರ್ಮಾನಕ್ಕೆ ಬದ್ಧ
ನಾನು ಕೂಡ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಸರ್ಕಾರ ಮತ್ತು ಪಕ್ಷ ಅಧ್ಯಕ್ಷ ಸ್ಥಾನ ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುವೆ. ಯಾವುದೇ ರೀತಿಯ ಒತ್ತಡ ಮತ್ತು ಲಾಬಿ ಮಾಡುವ ಕೆಲಸಕ್ಕೆ ಮುಂದಾಗುವುದಿಲ್ಲ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರು ಕೂಡ ಅದಕ್ಕೆ ಬದ್ಧನಾಗಿರುವೆ.
ಖಾಲಿದ್ ಹಾಕತ್ತೂರು, ಡಿಸಿಸಿ ಸದಸ್ಯ
ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನ ಮಡಿಕೇರಿಗೆ ನೀಡಲಿ:
ಕೊಡಗು ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಮಡಿಕೇರಿ ತಾಲ್ಲೂಕಿನ ಪ್ರತಿನಿಧಿಗಳಿಗೆ ನೀಡಬೇಕು. ಅವರು ವಿರಾಜಪೇಟೆ ಹಾಗೂ ಸೋಮವಾಪೇಟೆ ತಾಲ್ಲೂಕಿಗೆ ವಕ್ಫ್ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ನೀಡಲಾಗಿದೆ. ಆದರೆ ಮಡಿಕೇರಿ ತಾಲ್ಲೂಕಿಗೆ ಇಲ್ಲಿಯವರೆಗೆ ಅಧ್ಯಕ್ಷ ಸ್ಥಾನ ಲಭಿಸದೆ ಇರುವುದರಿಂದ ಈ ಬಾರಿ ಪರಿಗಣಿಸಬೇಕು. ನಾನು ಕೂಡ ವಕ್ಫ್ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ.
ಕಲೀಲ್ ಬಾಷ,ಡಿಸಿಸಿ ಸದಸ್ಯ