ದಸರಾ ಪೂರ್ವಭಾವಿ ಸಭೆ: ನಾಡಹಬ್ಬ ದಸರಾ ಯಾವುದೇ ಗೊಂದಲಗಳಿಲ್ಲದೆ ನಡೆಸಬೇಕು: ಸಚಿವ ಎನ್.ಎಸ್ ಬೋಸರಾಜು ಸೂಚನೆ

ದಸರಾ ಪೂರ್ವಭಾವಿ ಸಭೆ: ನಾಡಹಬ್ಬ ದಸರಾ ಯಾವುದೇ ಗೊಂದಲಗಳಿಲ್ಲದೆ ನಡೆಸಬೇಕು:  ಸಚಿವ ಎನ್.ಎಸ್ ಬೋಸರಾಜು ಸೂಚನೆ

ಮಡಿಕೇರಿ:ಈ ಬಾರಿಯೂ ದಸರಾ ಯಶಸ್ವಿಯಾಗಿ ನಡೆಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜರವರು ದಸರಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

 ಜಿಲ್ಲಾಧಿಕಾರಿ ಭವನದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಉತ್ತಮ ರೀತಿಯಲ್ಲಿ ಕೊಡಗಿನ ಹೆಸರನ್ನು ಉನ್ನತ ಮಟ್ಟದಲ್ಲಿ ತಲುಪಿಸಬೇಕು ಎಂದು ನುಡಿದರು. ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಸಮಿತಿಯೊಂದಿಗೆ ನಾವಿದ್ದೇವೆ ಪ್ರತಿಯೊಂದು ಹಂತದಲ್ಲಿಯೂ ನಾವಿರುತ್ತೇವೆ ತಮ್ಮ ಸಹಕಾರ ಅತ್ಯಗತ್ಯ ಎಂದು ದಸರಾ ಸಮಿತಿಯ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದರು. ನಾಡ ಹಬ್ಬದಸರಾವನ್ನು ಯಾವುದೇ ಅಡೆಚಡೆಯಿಲ್ಲದೆ ಗೊಂದಲಗಳಿಲ್ಲದೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು ಮಾತನಾಡಿ ವಿಶೇಷವಾಗಿ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕರಗಸಾಗುವುದು ರಾತ್ರಿ ವೇಳೆಯಲ್ಲಿ ಆಗಿರುವುದರಿಂದ ಸೆಸ್ಕಾಂ ಅವರು ಯಾವುದೇ ಅಡಚಣೆ ಇಲ್ಲದೆ ವಿದ್ಯುತ್ ಸಂಪರ್ಕವನ್ನು ನೀಡಬೇಕಾಗಿದೆ ಎಂದು ಸೂಚಿಸಿದರು.

 ದಶಮಂಟಪಗಳ ಸುತ್ತ ನಿಷೇಧಾಜ್ಞೆಯನ್ನು ಹೇರಬೇಕು ಹಾಗೆಯೇ ಮಂಟಪಗಳ ಬಳಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕೆಂದು ತಿಳಿಸಿದರು. ಜಿ.ಎಸ್.ಟಿ ಬಿಲ್ ಗಳನ್ನು ಆದಷ್ಟು ಬೇಗ ನೀಡಬೇಕು ಎಂದು ತಿಳಿಸಿದರು. ಗ್ರಾಮದ ನಾಡ ಹಬ್ಬವನ್ನು ಒಟ್ಟಾಗಿ ಸೇರಿ ಅಚ್ಚುಕಟ್ಟಾಗಿ ನಡೆಸೋಣ ಎಂದು ದಸರಾ ಸಮಿತಿಯ ಅಧ್ಯಕ್ಷರುಗಳಿಗೆ ತಿಳಿಸಿದರು.

ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಾದ ಅರುಣ್ ಮಾತನಾಡಿ 161 ವರ್ಷದ ಇತಿಹಾಸವಿರುವ ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಮಾಡುವುದಾಗಿ ತಿಳಿಸಿದರು. ಪ್ರತಿಯೊಂದು ಹಂತದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅನುದಾನವನ್ನು ನೀಡಿರುವುದು ಸಂತಸ ತಂದಿದೆ ಅನುದಾನವನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸುತ್ತೇವೆ ಎಂದು ಗಣ್ಯರಿಗೆ ಆಶ್ವಾಸನೆ ನೀಡಿದರು.

 ಕಳೆದ ಬಾರಿ ಯಂತೆಯೇ ಈ ಬಾರಿಯೂ ದಸರಾವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತೇವೆ, ಕಾರ್ಯಕ್ರಮಗಳಾದ ಕ್ರೀಡೆ, ಮಕ್ಕಳ ದಸರಾ, ಮಹಿಳಾ ದಸರಾ, ಸಾಂಸ್ಕೃತಿಕ ಕಾರ್ಯಕ್ರಮ ಯುವದಸರಾ,ದಶಮಂಟಪದ ಕಾರ್ಯಕ್ರಮ ಪ್ರತಿಯೊಂದು ಕಾರ್ಯಕ್ರಮಗಳು ಅತ್ಯಂತ ಸುಸಜ್ಜಿತವಾಗಿ ನಡೆಯುತ್ತದೆ ಎಂದು ಅಧಿಕಾರಿಗಳಿಗೆ ಪ್ರತಿಕ್ರಿಯಿಸಿದರು.

 ದಸರಾ ಸಮಿತಿಯ ಸದಸ್ಯರು ಮಾತನಾಡಿ ಮಳೆ ನಿಂತು ವಾರ ಕಳೆದಿದ್ದು ರಸ್ತೆಗುಂಡಿ ಮುಚ್ಚಿಸುವ ಕೆಲಸವನ್ನು ಶೀಘ್ರದಲ್ಲಿ ನಿರ್ವಹಿಸಬೇಕೆಂದು ಅಧಿಕಾರಿಗಳ ಬಳಿ ಮನವಿ ಮಾಡಿದರು ಇದಕ್ಕೆ ಪ್ರತಿಕ್ರಯಿಸಿದ ಮ ಮಡಿಕೇರಿ ಶಾಸಕರಾದ ಮಂತರ್ ಗೌಡರವರು ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದಷ್ಟು ಬೇಗ ರಸ್ತೆ ಗುಂಡಿಗಳನ್ನು ಸರಿಪಡಿಸಲು ಕೋರಿದರು.

ದಸರಾ ಸಾಂಸ್ಕೃತಿಕ ಅಧ್ಯಕ್ಷರಾದ ಸಂತೋಷ್ ಮಾತನಾಡಿ ಸೆಪ್ಟೆಂಬರ್ 23 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ ಸಂಜೆ ಮೂರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು ಜಿಲ್ಲಾಡಳಿತದಿಂದ 13 ಲಕ್ಷ ಹಣವನ್ನು ನೀಡಿದ್ದು ಯಾವುದೇ ದುರುಪಯೋಗಪಡಿಸಿದೆ ಹಣವನ್ನು ಖರ್ಚು ಮಾಡಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

 ಗೋಣಿಕೊಪ್ಪ ದಸರಾ ಸಮಿತಿ ಅಧ್ಯಕ್ಷರಾದ ಪ್ರಮೋದ್ ಮಾತನಾಡಿ ಸರ್ಕಾರದ ಅನುದಾನದಿಂದ ಅದ್ದೂರಿಯಾಗಿ ದಸರಾವನ್ನು ನಡೆಸುತ್ತೇವೆ ಗೋಣಿಕೊಪ್ಪ ದಸರಾಗೆ ಅನುದಾನವನ್ನು ಹೆಚ್ಚಿಸಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಯಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಮಾತನಾಡಿ ಸರ್ಕಾರದಿಂದ ಈಗಾಗಲೇ ಅನುದಾನವು ಬಿಡುಗಡೆಯಾಗಿದ್ದು ಇರುವ ಅನುದಾನದಲ್ಲೇ ಪಾರದರ್ಶಕವಾಗಿ ಖರ್ಚು ವೆಚ್ಚ ಮಾಡಬೇಕೆಂದು ಸೂಚಿಸಿದರು. ಗೋಣಿಕೊಪ್ಪ ದಸರಾದ ಸಮಿತಿಯ ಅಧ್ಯಕ್ಷರುಗಳೊಂದಿಗೆ ಮಾನ್ಯ ಸಚಿವರಾದ ಎನ್.ಎಸ್ ಬೋಸರಾಜರವರು ಮಾತನಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಹಳ ಅಚ್ಚುಕಟ್ಟಾಗಿ ದಸರಾವನ್ನು ನಡೆಸುವಂತೆ ತಿಳಿಸಿದರು. ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬಹುದೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ ಡಿ.ಜೆ ಶಬ್ದದಿಂದ ಹೃದಯಘಾತವಾಗಿ ಮೃತವಾಗಿರುವ ಸಂಖ್ಯೆ ಮೂರಕ್ಕೆ ಏರಿದ್ದು ಅದಕ್ಕಾಗಿ ಡಿಜೆ ಯನ್ನು ಮಿತವಾಗಿ ಬಳಸುವಂತೆ ದಸರಾ ಸಮಿತಿ ಅವರಿಗೆ ತಿಳಿಸಿದರು. ಹಾಸನದಲ್ಲಿ ಆದಂತಹ ದುರ್ಘಟನೆ ಯಂತಹ ಘಟನೆ 10 ಜನರ ಪ್ರಾಣಪಕ್ಷಿ ಹೋಗಿದ್ದು ಅದನ್ನು ಪರಿಗಣನೆಗೆ ತೆಗೆದುಕೊಂಡು ಹೆಚ್ಚುವರಿ ಪೋಲಿಸ್ ನಿಯೋಜನೆ ಮಾಡಲಾಗುವುದು ಹಾಗೆಯೇ ಜನಸಂದಣಿಯನ್ನು ಕಡಿತಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಮಡಿಕೇರಿಯಲ್ಲಿ ಸ್ಥಳವಕಾಶ ಕಮ್ಮಿ ಇದ್ದು ಜನಸಂದಣಿ ತಡೆಯಲು ಪ್ರವಸೋದ್ಯಮ ಇಲಾಖೆಯವರು ಶ್ರಮಿಸಬೇಕು ಎಂದರು. ದಶಮಂಟಪಗಳ ಮಂಟಪಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಬೇಕು ಹಾಗೆಯೇ ಸಾರ್ವಜನಿಕರಿಗೂ ಮಂಟಪ ಅಂತರ ಕಾಯ್ದುಕೊಳ್ಳಬೇಕು. ಮಂಟಪದ ಸುತ್ತ ಮಂಟಪದ ಸದಸ್ಯರನ್ನು ನಿಯೋಜನೆ ಮಾಡಬೇಕು ಎಂದು ಕೋರಿದರು.

 ಮಂಟಪದ ರಚನೆಯನ್ನು ಹಾಗಾಗಿ ಪರಿಶೀಲಿಸಬೇಕು ಎಂದು ದಸರಾ ಸಮಿತಿಯವರಿಗೆ ತಿಳಿಸಿದರು ಹಾಗೆಯೇ ಮಂಟಪಗಳನ್ನು ವಿದ್ಯುತ್ ತಂತಿ ಸ್ಪರ್ಶಿಸದಂತೆ ರಚಿಸಬೇಕು ಎಂದು ತಿಳಿಸಿದರು. ದಿನದ 24 ಗಂಟೆಯೂ ದಸರಾ ಸಮಯದಲ್ಲಿ ಪೊಲೀಸ್ ಇಲಾಖೆಯು ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.

 ಜಿಲ್ಲಾಧಿಕಾರಿ ವೆಂಕಟರಾಜ ಮಾತನಾಡಿ ಹಣದ ಖರ್ಚು-ವೆಚ್ಚವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ತಿಳಿಸಿದರು ಮಿತವಾಗಿ ಬಳಸಿ ಅದರ ಬಿಲ್ ಗಳನ್ನು ಶೀಘ್ರದಲ್ಲಿಯೇ ತಲುಪಿಸಬೇಕು ಎಂದು ತಿಳಿಸಿದರು. ಯಾವುದಾದರೂ ಒಂದು ಆಹಿತಕರ ಘಟನೆ ನಡೆದರೆ ಮುಂದಿನ ಬಾರಿ ದಸರಾಕ್ಕೆ ಅವಕಾಶವೇ ಇರುವುದಿಲ್ಲ ಎಂದು ಎಚ್ಚರಿಸಿದರು.

ಟ್ರಾಫಿಕ್ ಸಮಸ್ಯೆಯನ್ನು ಪೊಲೀಸ್ ಇಲಾಖೆಯು ಜವಾಬ್ದಾರಿಯಿಂದ ನಿರ್ವಹಿಸಲಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಐಶ್ವರ್ಯ.ಆರ್, ಮಡಿಕೇರಿ ನಗರಸಭೆ ಅಧ್ಯಕ್ಷರಾದ ಕಾಲಾವತಿ.ಪಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತರರು ಇದ್ದರು.