ವಿಶ್ವ ಫುಟ್ಬಾಲ್ ಮಾಂತ್ರಿಕ LIONEL MESSI ಭಾರತಕ್ಕೆ ಬರಲಿದ್ದಾರೆ ಗೊತ್ತೇ!

ಹೊಸದಿಲ್ಲಿ: ಫುಟ್ಬಾಲ್ ಮಾಂತ್ರಿಕ ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ ಭಾರತದ ಪ್ರವಾಸಕ್ಕೆ ಅಂತಿಮ ಅನುಮತಿ ದೊರೆತಿದ್ದು, ಮೆಸ್ಸಿ ಅವರು ಡಿಸೆಂಬರ್ 12ರಂದು ಕೋಲ್ಕತಾಕ್ಕೆ ಭೇಟಿ ನೀಡುವ ಮೂಲಕ ತನ್ನ ಪ್ರವಾಸ ಆರಂಭಿಸಲಿದ್ದಾರೆ ಎಂದು ಕಾರ್ಯಕ್ರಮದ ಪ್ರವರ್ತಕರಾದ ಸತದ್ರು ದತ್ತ ಶುಕ್ರವಾರ ಹೇಳಿದ್ದಾರೆ.
2025ರ ಭಾರತದ ಪ್ರವಾಸದ ವೇಳೆ ಮೆಸ್ಸಿ ಅವರು ಕೋಲ್ಕತಾ ನಗರಕ್ಕೆ ಮೊದಲು ಆಗಮಿಸಲಿದ್ದು, ಆ ನಂತರ ಅಹ್ಮದಾಬಾದ್, ಮುಂಬೈ ಹಾಗೂ ಹೊಸದಿಲ್ಲಿಗೆ ತೆರಳಲಿದ್ದಾರೆ. ಡಿಸೆಂಬರ್ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗುವ ಮೂಲಕ ತನ್ನ ಭಾರತದ ಪ್ರವಾಸವನ್ನು ಮೆಸ್ಸಿ ಕೊನೆಗೊಳಿಸಲಿದ್ದಾರೆ. ಅರ್ಜೆಂಟೀನದ ಫುಟ್ಬಾಲ್ ದಿಗ್ಗಜ ಮೆಸ್ಸಿ 2011ರ ನಂತರ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 2011ರಲ್ಲಿ ಕೋಲ್ಕತಾದ ಸಾಳ್ವೆಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ತಂಡದ ವಿರುದ್ಧ ಫಿಫಾ ಸೌಹಾರ್ದ ಪಂದ್ಯವನ್ನಾಡಲು ತನ್ನ ರಾಷ್ಟ್ರೀಯ ತಂಡದೊಂದಿಗೆ ಮೆಸ್ಸಿ ಭಾರತಕ್ಕೆ ಆಗಮಿಸಿದ್ದರು. "ಮೆಸ್ಸಿ ಅವರು ಆಗಸ್ಟ್ 28ರಿಂದ ಸೆಪ್ಟೆಂಬರ್ 1ರ ನಡುವೆ ಅಧಿಕೃತ ಪೋಸ್ಟರ್ ನೊಂದಿಗೆ ಎಲ್ಲ ವಿವರಗಳು ಹಾಗೂ ಅವರ ಪ್ರವಾಸದ ಸಣ್ಣ ಪರಿಚಯದೊಂದಿಗೆ ಪೋಸ್ಟ್ ಮಾಡಲಿದ್ದಾರೆ" ಎಂದು ದತ್ತ ಪಿಟಿಐಗೆ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಮೆಸ್ಸಿಯ ತಂದೆಯವರನ್ನು ಭೇಟಿಯಾಗಿರುವ ದತ್ತಾ ಅವರು ಪ್ರಸ್ತಾವನೆಯನ್ನು ಮಂಡಿಸಿದರು. ಫೆಬ್ರವರಿ 28ರಂದು ಮೆಸ್ಸಿ ಸ್ವತಃ ತನ್ನ ನಿವಾಸದಲ್ಲಿ ದತ್ತಾರನ್ನು ಭೇಟಿಯಾಗಿ 45 ನಿಮಿಷ ಚರ್ಚಿಸಿದ್ದಾರೆ. "ನಾನು ಯೋಜನೆಯನ್ನು ಹಾಗೂ ನಾವು ಏನು ಮಾಡಲು ಬಯಸಿದ್ದೇವೆ ಎಂಬುದನ್ನು ವಿವರಿಸಿದೆ. ಅದು ಯೋಗ್ಯವಾಗಿದೆ ಎಂದು ಅವರಿಗೆ ಮನವರಿಕೆಯಾಯಿತು. ಅವರು ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ"ಎಂದು ದತ್ತ ಹೇಳಿದರು. ಮೆಸ್ಸಿ ಅವರು ಡಿಸೆಂಬರ್ 12ರಂದು ರಾತ್ರಿ ಕೋಲ್ಕತಾಕ್ಕೆ ಆಗಮಿಸಲಿದ್ದಾರೆ. ಎರಡು ದಿನ ಹಾಗೂ ಒಂದು ರಾತ್ರಿಯನ್ನು ಕೋಲ್ಕತಾದಲ್ಲಿ ಕಳೆಯಲಿದ್ದಾರೆ. ಡಿ.13ರಂದು ಸಂಜೆ ಮೆಸ್ಸಿ ಅವರು ಅದಾನಿ ಪ್ರತಿಷ್ಠಾನ ಆಯೋಜಿಸಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಹ್ಮದಾಬಾದ್ ಗೆ ಪ್ರಯಾಣಿಸಲಿದ್ದಾರೆ. ಡಿಸೆಂಬರ್ 14ರಂದು ಮುಂಬೈಗೆ ತೆರಳಲಿದ್ದು, ಬ್ರೆಬೋರ್ನ್ ಹಾಗೂ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್ 15ರಂದು ಮೆಸ್ಸಿ ಅವರು ಪ್ರಧಾನಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.