ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ ಕೆ.ಬಿ. ಸೂರ್ಯಕುಮಾರ್ ಅವರಿಗೆ ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ

ಮಡಿಕೇರಿ : ರಾಜ್ಯ ಪ್ರಶಸ್ತಿಗೆ ಭಾಜನರಾದ ಮಡಿಕೇರಿಯ ಡಾ ಕೆ.ಬಿ. ಸೂರ್ಯಕುಮಾರ್ ಅವರನ್ನು ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ವೈದ್ಯ ಬರಹಗಾರರ ಸಂಘದ ವತಿಯಿಂದ ಕರ್ನಾಟಕ ರಾಜ್ಯದ ವೈದ್ಯರ ಶ್ರೇಷ್ಠ ಪುಸ್ತಕಗಳಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ ಮಡಿಕೇರಿಯ ಖ್ಯಾತ ವೈದ್ಯರಾದ ಡಾ. ಕೆ.ಬಿ. ಸೂರ್ಯಕುಮಾರ್ ಅವರು ಬರೆದು, ಹರಿವು ಪ್ರಕಾಶನದವರು ಪ್ರಕಟಿಸಿರುವ 'ಮಂಗಳಿ' - ತೃತೀಯ ಲಿಂಗಿಗಳ ಜೀವನ ಆಧಾರಿತ ಒಂದು ಕಥೆಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಸನ್ಮನಿಸಲಾಯಿತು.
ನಗರದಲ್ಲಿರುವ ಡಾ. ಸೂರ್ಯಕುಮಾರ್ ಅವರ ಕ್ಲಿನಿಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕೊಡಗು ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಕನ್ನಡ ಚುಟುಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷೆ ಎಂ.ಎ.ರುಬೀನಾ, ಕನ್ನಡ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬೊಟ್ಟೋಳಂಡ ನಿವ್ಯಾ ಕಾವೇರಮ್ಮ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಹುಟ್ಟಿ, ಬೆಳೆದ ಡಾ. ಕೆ.ಬಿ. ಸೂರ್ಯಕುಮಾರ್, ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಬರಹಗಾರರು. ವಿಧಿ ವಿಜ್ಞಾನ ವಿಭಾಗದಲ್ಲಿ ತಜ್ಞತೆ ಹೊಂದಿರುವ ಇವರು ತನ್ನ ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚಿನ ವೈದ್ಯಕೀಯ - ಅನುಭವಗಳನ್ನು ಮೆಡಿಕಲ್ ಕಾಲೇಜಿನ ಪ್ರೊಫೆಸರ್ - ಆಗಿ ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದರ ಜೊತೆಗೆ, ರೋಗಿಗಳ ಶುಶ್ರೂಷೆಯಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ. ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡಂತಹ ಅನೇಕ ಪ್ರಕರಣಗಳ ಬಗ್ಗೆ ಅವರು ಕಥಾನಕ ರೂಪದಲ್ಲಿ ಬರೆದ ಲೇಖನಗಳು ಈಗಾಗಲೇ 'ವೈದ್ಯ ಕಂಡ ವಿಸ್ಮಯ', 'ಕೌತುಕಗಳ ಮಾಯಾಜಾಲ', 'ವೈದ್ಯ ಲೋಕದ ಕಥೆಗಳು', 'ನಿಗೂಢ ಕೊಲೆಗಳು' ಎಂಬ ಪುಸ್ತಕಗಳಾಗಿ ಹೊರಬಂದು ಓದುಗರ ಮೆಚ್ಚುಗೆ ಗಳಿಸಿದೆ. ಕನ್ನಡದಲ್ಲಿ ವೈದ್ಯಕೀಯ ವಿವರಣೆಗಳು ಸ್ವಲ್ಪ ಕಡಿಮೆ ಇರುವ ಈ ದಿನಗಳಲ್ಲಿ ಸಾಮಾನ್ಯ ರೋಗಗಳ ಕಿರುನೋಟ ಬೀರುವ "ವೈದ್ಯಕೀಯ ಕೈಪಿಡಿ" ಎಂಬ ಪುಸ್ತಕ ಇತ್ತೀಚಿಗೆ ಹೊರ ಬಂದಿದೆ. ಡಾ. ಸೂರ್ಯಕುಮಾರ್ ವೈದ್ಯ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಬಹಳಷ್ಟು, ಇವರ ಸೇವೆ ಸದಾಕಾಲ ಇದೇ ರೀತಿ ಬೆಳಗುತ್ತಿರಲಿ ಎಂದರು. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸಂಶೋಧನಾ ಕೃತಿಗಳು ಹೊರಬರುವಂತಾಗಲಿ ಎಂದು ಹಾರೈಸಿದರು.
ಕೊಡಗು ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಪರಿಷತ್ತು ಹಲವು ಸಾಧಕರನ್ನು ಇದೇ ರೀತಿ ಗುರುತಿಸಿ, ಪ್ರೋತ್ಸಾಹಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಲೋಹಿತ್ ಮಾಗುಲುಮನೆ, ರಂಜಿತ್ ಜಯರಾಂ, ಸದಸ್ಯ ಸುರ್ಜಿತ್ ಪಿ ಎಸ್, ಹಾಗು ಕ್ಲಿನಿಕ್ ಸಿಬ್ಬಂದಿ ಹಾಜರಿದ್ದರು.