ಕುಡಿದು ಬಂದ ಗಂಡನ ಹಿಂಸೆ: ಪತ್ನಿ ಹತ್ಯೆ, 4 ವರ್ಷದ ಮಗು ಅನಾಥ

ಕುಡಿದು ಬಂದ ಗಂಡನ ಹಿಂಸೆ: ಪತ್ನಿ ಹತ್ಯೆ, 4 ವರ್ಷದ ಮಗು ಅನಾಥ
Photo credit: TV09 (ಫೋಟೋ:ಆರೋಪಿ ಪತಿ ರಾಘವೇಂದ್ರ ‌ಮತ್ತು ಮೃತ ಪವಾನಿ)

ಚಿಕ್ಕಬಳ್ಳಾಪುರ/ಬೆಂಗಳೂರು, ನವೆಂಬರ್ 18: ಕುಡಿದು ಮನೆಗೆ ಬಂದಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಗಂಡ-ಹೆಂಡತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹುದುಗೂರು ಗ್ರಾಮದಲ್ಲಿ ನಡೆದಿದೆ. 

ಪಾವನಿ (30) ಎಂಬ ಗೃಹಿಣಿ ಪತಿಯ ಹಿಂಸೆಗೆ ಬಲಿಯಾಗಿದ್ದು, ಆರೋಪಿಯಾಗಿ ಪತಿ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಐದು ವರ್ಷಗಳ ಹಿಂದೆ ಮದುವೆಯಾದ ದಂಪತಿಗೆ ನಾಲ್ಕು ವರ್ಷದ ಗಂಡು ಮಗು ಇದೆ. ಮೊನ್ನೆ ಊರಿಗೆ ಬಂದಿದ್ದರೂ ಮನೆಗೆ ಬಾರದ ರಾಘವೇಂದ್ರನ ನಡೆ ಕುರಿತು ಪಾವನಿ ಪ್ರಶ್ನಿಸಿದ್ದಾಳೆ. ಪತ್ನಿಯ ಮಾತಿಗೆ ರಾಘವೇಂದ್ರ ತೀವ್ರ ಕೆರಳಿದ್ದಾನೆ ಎನ್ನಲಾಗಿದೆ. 

ಕೋಪೋದ್ರಿಕ್ತನಾದ ಆತ ಗಲಾಟೆ ಮಾಡಿದ್ದಾನೆ. ಕ್ಷಣಾರ್ಧದಲ್ಲಿ ಹಿಂಸೆಗೆ ತಿರುಗಿ, ಪಾವನಿಯ ಕುತ್ತಿಗೆಗೆ ವೇಲ್ ಬಿಗಿದು ರಾಘವೇಂದ್ರ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಮೃತಪಟ್ಟಿದ್ದರೆ, ತಂದೆ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಕಾರಣ ಈಗ 4 ವರ್ಷದ ಪುಟ್ಟ ಮಗುವು ಅನಾಥವಾಗಿದೆ.