ಕವನ ರಚನೆ ಸವಾಲುಗಳ ಅಭಿಯಾನ'ದಲ್ಲಿ ಗಮನ ಸೆಳೆದ ದುದ್ದಿಯಂಡ ಮುಸ್ಕಾನ್: ಮುಸ್ಕಾನ್ ಸೂಫಿ ಅವರ ಚೊಚ್ಚಲ ಕವನ ಸಂಕಲನ ಪ್ರಕಟಿಸಿದ ಅಂತರಾಷ್ಟ್ರೀಯ ಖ್ಯಾತಿಯ 'ಬುಕ್ ಲೀಫ್ ಪಬ್ಲಿಕೇಶನ್'

ಕವನ ರಚನೆ ಸವಾಲುಗಳ ಅಭಿಯಾನ'ದಲ್ಲಿ ಗಮನ ಸೆಳೆದ ದುದ್ದಿಯಂಡ ಮುಸ್ಕಾನ್:  ಮುಸ್ಕಾನ್ ಸೂಫಿ ಅವರ ಚೊಚ್ಚಲ ಕವನ ಸಂಕಲನ ಪ್ರಕಟಿಸಿದ ಅಂತರಾಷ್ಟ್ರೀಯ ಖ್ಯಾತಿಯ 'ಬುಕ್ ಲೀಫ್ ಪಬ್ಲಿಕೇಶನ್'
ಮುಸ್ಕಾನ್ ಸೂಫಿ

ಮಡಿಕೇರಿ:ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡಗಿನ ವಿದ್ಯಾರ್ಥಿನಿಯೊಬ್ಬರು ರಚಿಸಿದ ಕವನ ಸಂಕಲನ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಸದ್ದಿಲ್ಲದೆ ಸುದ್ದಿಯಾಗಿದೆ. ವಿರಾಜಪೇಟೆ ಮೂಲದ ದುದ್ದಿಯಂಡ ಮುಸ್ಕಾನ್ ಸೂಫಿ ಅವರ ಚೊಚ್ಚಲ ಇಂಗ್ಲಿಷ್ ಕೃತಿ 'ದಿಸ್ ಟೂ ಶೆಲ್ ಪಾಸ್' ಅನ್ನು ಅಂತರಾಷ್ಟ್ರೀಯ ಖ್ಯಾತಿಯ ಬುಕ್ ಲಿಫ್ ಪಬ್ಲಿಕೇಶನ್ ಪ್ರಕಟಿಸಿದ್ದು, ಅಮೆರಿಕ ಮೂಲದ ಪ್ರಸಿದ್ಧ ಕವಿ ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ನೀಡಲಾಗುವ 21ನೇ ಶತಮಾನದ ಅಂತರಾಷ್ಟ್ರೀಯ ಮಟ್ಟದ 'ಇಂಡಿ ಆಥರ್ಸ್ ಅವಾರ್ಡ್ 2025' ಕ್ಕೆ ನಾಮನಿರ್ದೇಶನಗೊಂಡಿದೆ. ತನ್ನ ಚಿಕ್ಕವಯಸಿನ ಪ್ರಾಯದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವುದು ಬಹುದೊಡ್ಡ ಸಾಧನೆಯಾಗಿದೆ.

ಬುಕ್ ಲಿಫ್ ಪಬ್ಲಿಕೇಶನ್ ಇತ್ತೀಚಿಗೆ ಜಾರಿಗೊಳಿಸಿದ 21 ದಿನಗಳಲ್ಲಿ 21 ಕವನ ರಚಿಸುವ 'ಸವಾಲುಗಳ ಅಭಿಯಾನ' (Challenges Campaign) ದಲ್ಲಿ ಪಾಲ್ಗೊಂಡಿದ್ದ, ಮೈಸೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯ ಮತ್ತು ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಮುಸ್ಕಾನ್ ಸೂಫಿ ಸವಾಲುಗಳ ನಿರ್ದಿಷ್ಟ ಗುರಿ ಸಾಧಿಸಿ ಗಮನ ಸೆಳೆದಿದ್ದಾರೆ. ನಿಗದಿತ 21 ದಿನಗಳಲ್ಲಿ 28ಕ್ಕೂ ಹೆಚ್ಚು ಕವನಗಳನ್ನು ಸ್ವಯಂ ರಚಿಸಿದ ಮುಸ್ಕಾನ್ ಸೂಫಿ 50 ಪುಟಗಳ ಕವನ ಸಂಗ್ರಹಕ್ಕೆ ರೂಪು ನೀಡಿದ್ದರು. ಕಾಲೇಜು ತರಗತಿಗಳ ಬಿಡುವಿನ ಸಮಯದಲ್ಲಿ ಕಾವ್ಯಕೃಷಿಯನ್ನು ಆರಂಭಿಸಿ ಗುರಿ ಸಾಧಿಸಿದ ಮುಸ್ಕಾನ್ ಸೂಫಿ ತಮ್ಮ ಮನದ ಮೂಸೆಯಲ್ಲಿ ಮೂಡಿ ಬಂದ ವಿವಿಧ ಪ್ರಕಾರಗಳ ಭಾವನೆಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಬಗೆಬಗೆಯ ಮನುಷ್ಯನ ಏರಿಳಿತಗಳು, ಸಮಾಜದ ಅನೇಕ ಬಗೆಯ ಹೊಯ್ದಾಟಗಳು, ಮನದ ತಳಮಳಗಳು, ಪ್ರಕೃತಿಯ ಸೌಂದರ್ಯ, ಅಂತಿಮವಾಗಿ ಮನುಷ್ಯ ಶರಣಾಗಲೇಬೇಕಾದ ಮರಣ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನಿಟ್ಟುಕೊಂಡು ಮುಸ್ಕಾನ್ ಸೂಫಿ ಕವನ ರಚಿಸಿ ಭಾವಗಳನ್ನು ಕವಿತೆಯಾಗಿಸಿದ್ದರು. ಮುಸ್ಕಾನ್ ಸೂಫಿ ಅವರ ಕಾವ್ಯದಲ್ಲಿ ನೋವು, ಗುಣಪಡಿಸುವಿಕೆ ಮತ್ತು ಸ್ವಯಂ-ಅನ್ವೇಷಣೆಯ ವಿಷಯಗಳನ್ನು ಆಳವಾಗಿ ಬೇರೂರುವಂತೆ ಚಿತ್ರಿಸಲಾಗಿದೆ. "ದಿಸ್ ಟೂ ಶಲ್ ಪಾಸ್" ಸಂಕಲನವು ಜೀವನದ ಕಠಿಣ ಕ್ಷಣಗಳಲ್ಲಿ ಕಂಡುಬರುವ ಶಾಂತ ಶಕ್ತಿಯನ್ನು ಸೆರೆಹಿಡಿದಿದೆ. ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಪದ್ಯಗಳ ಮೂಲಕ ದುರ್ಬಲತೆ ಮತ್ತು ಭರವಸೆಯನ್ನು ಸ್ವೀಕರಿಸಲು ಓದುಗರನ್ನು ಆಹ್ವಾನಿಸುವಂತೆ ಮುಸ್ಕಾನ್ ಕಾವ್ಯ ರಚಿಸಿರುವುದು ವಿಶೇಷವೆನಿಸಿದೆ. ಪ್ರಕೃತಿಯ ಶಾಂತತೆ ಮತ್ತು ದೈನಂದಿನ ಜೀವನದ ಸರಳ ಸೌಂದರ್ಯದಲ್ಲಿ ಶಾಂತಿಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಕಾವ್ಯದ ಮೂಲಕ ನಡೆಸಿರುವ ಮುಸ್ಕಾನ್, ಕಾವ್ಯವು ಆತ್ಮಗಳ ನಡುವಿನ ಸೇತುವೆ ಎಂದು ಕವಿತೆಯಲ್ಲಿ ಪ್ರತಿಪಾದಿಸಿದ್ದಾರೆ. ಮುಸ್ಕಾನ್ ಅವರ ಈ ಕವನ ಸಂಗ್ರಹವು ಬದುಕಿನ ಕತ್ತಲೆಯ ಸಮಯದಲ್ಲಿ ಸಾಂತ್ವನ ಮತ್ತು ಸಂಪರ್ಕವನ್ನು ಸಾಧಿಸುವ ಬಗ್ಗೆಯೂ ಬೆಳಕು ಚೆಲ್ಲಿದೆ. ಮುಸ್ಕಾನ್ ಅವರ ಕವನಗಳಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳನ್ನು ಹೆಚ್ಚು ಬಳಸಲಾಗಿದೆ. ಕಾವ್ಯದ ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿದೆ. ನವೀನವಾದ ಪದಗಳ ಬಳಕೆಗೆ ಹೆಚ್ಚಿನ ನೀಡಲಾಗಿದೆ. ಕವನಗಳ ವಿಷಯವಸ್ತುಗಳನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿದೆ. ಸಂಕಲನದ ಬಹುತೇಕ ಕವನಗಳು ಆಧುನಿಕತೆಗೆ ಒತ್ತು ನೀಡಲಾಗಿದೆ. ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುವ ಮುಸ್ಕಾನ್ ಸೂಫಿ ಅವರ ಈ ಕವನ ಸಂಕಲನ ಮೊದಲ ಹಂತದಲ್ಲೇ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಇಂಗ್ಲೀಷ್ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬುಕ್ ಲಿಫ್ ಪಬ್ಲಿಕೇಶನ್ ಕವನ ರಚನೆ ಕುರಿತು ನಡೆಸಿದ ಸವಾಲುಗಳ ಅಭಿಯಾನದಲ್ಲಿ ಜಾಗತಿಕವಾಗಿ ಸಾವಿರಾರು ಮಂದಿ ಕವಿಗಳು ಭಾಗವಹಿಸುತ್ತಾರೆ. ಈ ಪೈಕಿ ಆಯ್ಕೆಯಾದ ಅತ್ಯುತ್ತಮ ಕವನ ಸಂಕಲನಗಳನ್ನು ಬುಕ್ ಲಿಫ್ ಪಬ್ಲಿಕೇಶನ್ ಪುಸ್ತಕವಾಗಿ ಪ್ರಕಟಿಸುತ್ತದೆ. ಈ ಪೈಕಿಯೂ ಶ್ರೇಷ್ಠ ಗುಣಮಟ್ಟದ ಕವನ ಸಂಕಲನಗಳು ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ನೀಡಲಾಗುವ ಅಂತರಾಷ್ಟ್ರೀಯ 'ಇಂಡಿ ಆಥರ್ಸ್ ಅವಾರ್ಡ್ 2025' ಕ್ಕೆ ನಾಮನಿರ್ದೇಶನಗೊಳ್ಳುತ್ತದೆ. ತಮ್ಮ ಚೊಚ್ಚಲ ಕವನ ಸಂಕಲನ ಅಂತರಾಷ್ಟ್ರೀಯ 'ಇಂಡಿ ಆಥರ್ಸ್ ಅವಾರ್ಡ್ 2025' ಕ್ಕೆ ನಾಮನಿರ್ದೇಶನಗೊಂಡಿರುವ ಬಗ್ಗೆ ತೀವ್ರ ಹರ್ಷ ವ್ಯಕ್ತಪಡಿಸಿರುವ ಮುಸ್ಕಾನ್ ಸೂಫಿ, ಬುಕ್ ಲಿಫ್ ಪಬ್ಲಿಕೇಷನ್ ಆರಂಭಿಸಿದ ಕವನ ರಚನೆ ಕುರಿತ ಸವಾಲುಗಳ ಅಭಿಯಾನದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಅದರಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದೆ. ಹಿಂದಿನಿಂದಲೂ ಇಂಗ್ಲೀಷ್ ಕವನ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಸ್ಪೂರ್ತಿ ನೀಡಿತು. ಆದರೆ ನನ್ನ ಕವನಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ. ಇದೀಗ ಕವನ ಸಂಕಲನ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದೂ ಅಲ್ಲದೆ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ವಿಷಯ ತಿಳಿದು ಹೇಳತೀರದ ಸಂತೋಷವಾಗಿದೆ. ಮುಂದೆ ಸಾಹಿತ್ಯ ಕೃಷಿಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಉತ್ತೇಜನ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.

ಮುಸ್ಕಾನ್ ಸೂಫಿ ಅವರು ವಿರಾಜಪೇಟೆಯ ಡಿ.ಹೆಚ್.ಎಸ್. ಗ್ರೂಪ್ ಆಫ್ ಕಂಪನಿಯ ಮಾಲೀಕರು ಮತ್ತು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಮತ್ತು ಮಸೂದ ಸೂಫಿ ದಂಪತಿಯ ಪುತ್ರಿಯಾಗಿದ್ದಾರೆ. ಮುಸ್ಕಾನ್ ಅವರ ಚೊಚ್ಚಲ ಕವನ ಸಂಕಲನ 'ದಿಸ್ ಟೂ ಶೆಲ್ ಪಾಸ್' ಅಮೆಜಾನ್ ನಲ್ಲಿ ಆನ್ಲೈನ್ ಮೂಲಕ ಖರೀದಿಗೆ ಲಭ್ಯವಿದೆ.