ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯಂ’ ಸ್ಟೈಲ್‌ನಲ್ಲಿ ಇಂಜಿನಿಯರ್ ಹತ್ಯೆ; ಮನೆಯಲ್ಲಿ ಹೂತು ಹಾಕಿದ ಆರೋಪಿ!

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯಂ’ ಸ್ಟೈಲ್‌ನಲ್ಲಿ ಇಂಜಿನಿಯರ್ ಹತ್ಯೆ; ಮನೆಯಲ್ಲಿ ಹೂತು ಹಾಕಿದ ಆರೋಪಿ!
Photo credit: TV09

ಆನೇಕಲ್, ನ. 19: ಹಣ ವಾಪಸ್ ಕೇಳಿದ್ದಕ್ಕಾಗಿ ಇಂಜಿನಿಯರ್‌ರನ್ನು ‘ದೃಶ್ಯಂ’ ಸಿನಿಮಾ ಶೈಲಿಯಲ್ಲಿ ಹತ್ಯೆಮಾಡಿ, ಮೃತದೇಹವನ್ನು ಮನೆಯಲ್ಲಿ ಹೂತು ಮರೆಮಾಚಿದ್ದ ಆಘಾತಕಾರಿ ಘಟನೆಗೆ ಅತ್ತಿಬೆಲೆ ಪೊಲೀಸರು ತೆರೆ ಎಳೆದಿದ್ದಾರೆ. ನಾಪತ್ತೆ ಪ್ರಕರಣವಾಗಿ ದಾಖಲಾಗಿದ್ದ ಇದು, ತನಿಖೆಯಲ್ಲಿ ಭೀಕರ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ.

ಆಂಧ್ರದ ಕುಪ್ಪಂ ಮೂಲದ ಶ್ರೀನಾಥ್ (30) ಹತ್ಯೆಯಾದವರು. ಅತ್ತಿಬೆಲೆಯ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದ ಶ್ರೀನಾಥ್ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣದ ಸಂದರ್ಭ ಆರೋಪಿಗಳಾದ ಪ್ರಭಾಕರ್ ಹಾಗೂ ಅವನ ಸ್ನೇಹಿತ ಜಗದೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಭಾಕರ್, ಹಣ ‘ಡಬಲ್’ ಮಾಡಿಕೊಡುವ ನೆಪದಲ್ಲಿ ಶ್ರೀನಾಥ್‌ ರಿಂದ ಸುಮಾರು 40 ಲಕ್ಷ ರೂ. ಪಡೆದಿದ್ದಾನೆ. ಹಣವನ್ನು ವಾಪಸ್ ಕೇಳತೊಡಗುತ್ತಿದ್ದಂತೆ, ಕುಪ್ಪಂಗೆ ಬರಲು ಹೇಳಿದ್ದಾನೆ. ಮನೆಗೆ ಕಾಲಿಟ್ಟ ಕ್ಷಣವೇ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆಗೈದು, ಮನೆಯೊಳಗೇ ಗುಂಡಿ ತೆಗೆದು ಮೃತದೇಹವನ್ನು ಹೂತಿದ್ದಾನೆ. ಜಗದೀಶ್ ಈ ಕೃತ್ಯಕ್ಕೆ ಸಹಕಾರಿಯಾಗಿದ್ದಾನೆ.

ಕುಪ್ಪಂಗೆ ಹೋಗುವುದಾಗಿ ಶ್ರೀನಾಥ್ ಪತ್ನಿಗೆ ತಿಳಿಸಿ ಮನೆಯಿಂದ ಹೊರಟಿದ್ದರು. ಎರಡು ದಿನ ಕಳೆದರೂ ಮರಳದ ಹಿನ್ನೆಲೆಯಲ್ಲಿ ಪತ್ನಿ ಅತ್ತಿಬೆಲೆ ಠಾಣೆಗೆ ದೂರು ನೀಡಿದರು. ವಿಚಾರಣೆಗೆ ಒಳಪಡಿಸಿದ್ದಾಗ ಪ್ರಭಾಕರ್ ಮೊದಲಿಗೆ “ನನಗೆ ಏನೂ ಗೊತ್ತಿಲ್ಲ” ಎಂದು ನಟಿಸಿದರೂ, ಪೊಲೀಸರ ಡ್ರಿಲ್ ಮಾಡಿದಾಗ ಕೊಲೆ ರಹಸ್ಯ ಬಯಲು ಮಾಡಿದ್ದಾನೆ. ಕುಪ್ಪಂ ತಹಶೀಲ್ದಾರ್ ನೇತೃತ್ವದಲ್ಲಿ ಮನೆಯಲ್ಲಿ ಹೂತಿಟ್ಟಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ.

ತನಿಖೆಯಿಂದ ಇಬ್ಬರ ಕ್ರಿಮಿನಲ್ ಹಿನ್ನಲೆ ಬಹಿರಂಗವಾಗಿದೆ. ಪ್ರಭಾಕರ್ ಹಿಂದೆಯೇ ತನ್ನ ಪತ್ನಿಯನ್ನೇ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಜಗದೀಶ್ ತನ್ನ ಪ್ರೇಯಸಿಯ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ. ಜೈಲಿನಿಂದ ಹೊರಬಂದ ನಂತರವೂ ಇಬ್ಬರೂ ಅದೇ ಬುದ್ಧಿ ತೋರಿಸಿದ್ದಾರೆ

ಹಣದ ವಿಚಾರದಲ್ಲಿ ಫೋನ್‌ನಲ್ಲಿ ಮಾತನಾಡಬೇಡಿ, ಐಟಿ ಸಮಸ್ಯೆ ಆಗುತ್ತದೆ ಎಂಬ ನೆಪದಲ್ಲಿ ವಾಟ್ಸ್ಯಾಪ್ ಸ್ಟೇಟಸ್ ಮೂಲಕ ಸಂದೇಶ ಹಂಚಿಕೊಳ್ಳಲು ಪ್ರಭಾಕರ್ ಶ್ರೀನಾಥ್‌ಗೆ ಸೂಚಿಸಿದ್ದ. ಕುಪ್ಪಂಗೆ ಬರಲು ಮೊಬೈಲ್ ಮನೆಯಲ್ಲಿ ಬಿಟ್ಟು ಬನ್ನಿ ಎಂದು ಹೇಳಿದ್ದರಿಂದ, ತನಿಖೆಯ ಆರಂಭಿಕ ಹಂತದಲ್ಲಿ ಪೊಲೀಸರಿಗೆ ಯಾವುದೇ ಡಿಜಿಟಲ್ ಸುಳಿವು ಸಿಕ್ಕಿರಲಿಲ್ಲ. ಒಂದು ತಿಂಗಳ ಕಾಲ್ ಡೀಟೈಲ್ಸ್‌ನಲ್ಲಿ ಸುಳಿವು ಏನೂ ಸಿಗದ ಕಾರಣ, ಪೊಲೀಸರು ಎರಡು ತಿಂಗಳ ವಿವರ ಪರಿಶೀಲಿಸಿ ಜಗದೀಶ್‌ನ ಸಂಪರ್ಕದ ಮೂಲಕ ಹತ್ಯೆ ಪತ್ತೆಹಚ್ಚಿದ್ದಾರೆ.

ಇಬ್ಬರ ಮೇಲೂ ಸಂಬಂಧಿತ ಕಾನೂನು ಪ್ರಕ್ರಿಯೆಗಳು ಜಾರಿಗೊಳಿಸಲಾಗಿದ್ದು, ಪ್ರಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗಿದೆ.