ಬರಪೊಳೆಯಲ್ಲಿ ರೋಮಾಂಚಕಾರಿ 4.5 ಕಿ.ಮೀ. ರ‍್ಯಾಫ್ಟಿಂಗ್

ಪೊನ್ನಂಪೇಟೆ:ಹಸಿರುಹೊದಿಕೆಯ ಪ್ರಕೃತಿಯ ಸೌಂದರ್ಯಗಳ ನಡುವೆ ಸ್ವಚ್ಛನೀರಿನಲ್ಲಿ ಉಸಿರಾಡಿಕೊಂಡು, ಕಲ್ಲು ಬಂಡೆಗಳ ನಡುವೆ ಜೀವವೇ ಬಾಯಿಗೆ ಬಂದಂತೆ ಭಯ ಹುಟ್ಟಿಸಿ, ಭಯ ನೀಗಿಸುವ ಜಲಕ್ರೀಡೆಗೆ ಬರಪೊಳೆ ಹೆಸರುವಾಸಿಯಾಗಿದೆ. ಪೊನ್ನಂಪೇಟೆ ತಾಲೂಕಿನ ಕೆ.ಕೆ.ಆರ್ ಎಂಬಲ್ಲಿರುವ ಬರಪೊಳೆಯು ಸಮುದ್ರಮಟ್ಟದಿಂದ ಸುಮಾರು 3 ಸಾವಿರ ಅಡಿಗಳ ಮೇಲಿನಿಂದ ಹರಿಯುವುದರಿಂದ ಇಲ್ಲಿನ ಜಲಕ್ರೀಡೆ ಮೈಮನ ಪುಳಕಿತಗೊಳಿಸುತ್ತದೆ. ಎದ್ದು, ಬಿದ್ದು ಸಾಗುವ ಹಾದಿಯಲ್ಲಿ ಜೀವ ಹೋಗಿ ಮತ್ತೆ ಬಂದಂತ ಅನುಭವ ನೀಡುತ್ತದೆ. ಸುಮಾರು 4.5 ಕಿಲೋ ಮೀಟರ್ ದೂರದ ಪಯಣದಲ್ಲಿ ಸುಮಾರು 5 ರಾಪಿಡ್ಸ್ ಗಳು ವಿಶೇಷ ಅನುಭವ ನೀಡುತ್ತದೆ. ಹೆಚ್ಚು ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆಯಾದರೂ ರೋಮಾಂಚನಕಾರಿ ಅನುಭವಕ್ಕೆ ಇಲ್ಲಿಗೆ ಬರಬೇಕಿದೆ. ಬರಪೊಳೆ ರ‍್ಯಾಫ್ಟಿಂಗ್ ವಿಶೇಷತೆ ಎಂದರೆ ರ‍್ಯಾಫ್ಟಿಂಗ್‌ನಲ್ಲಿ ಸಾಗಿದಂತೆ ನಮ್ಮ ಮುಂದೆ ಎದ್ದು ನಿಂತ ಬಂಡೆಯ ಸೆರೆಯಲ್ಲಿ ಸಾಗುವುದು ರೋಮಾಂಚಕಾರಿ ಅನುಭವ ನೀಡುತ್ತದೆ.
ಗುಂಡಿಯ ನೀರಿನಲ್ಲಿ ಎಲ್ಲಿ ನಾವು ಮುಳುಗಿಬಿಡುತ್ತೇವೋ ಎಂಬ ಭಯದ ನಡುವೆ ಮತ್ತೆ ಎದ್ದೇಳುವ ಪ್ರಕೃತಿ ವಿನ್ಯಾಸ ಇಲ್ಲಿನ ವಿಶೇಷತೆಯಲ್ಲೊಂದು. ಕಾವೇರಿ ನದಿಯಲ್ಲಿ ಇಂತಹ ಅನುಭವ ಸಿಗದ ಕಾರಣ ರಾಫ್ಟಿಂಗ್ ದಾಖಲೆಯಲ್ಲಿ ಬರಪೊಳೆ ಗ್ರೇಡ್ 3 ಮಾನ್ಯತೆ ಹೊಂದಿದೆ. ಹೆಚ್ಚು ಇಳಿ ಜಾರು ಎಂಬ ಕಾರಣಕ್ಕೆ ಭಯ ಕೂಡ ಇದ್ದು, ದಿಢೀರ್ ಮುಂದೆ ಬಂದು ನಿಂತಂತೆ ಕಾಣುವ ಕಲ್ಲುಗಳನ್ನು ತಪ್ಪಿಸಿಕೊಂಡು ಮುಂದೆ ಸಾಗಬೇಕಿದೆ. ಇದಕ್ಕೆ ನುರಿತ ಗೈಡ್ ಇಲ್ಲಿದ್ದಾರೆ. ದೇಶದ ಉತ್ತರ ಭಾಗದ ಇಂಗ್ಲೀಷ್ ಮತ್ತು ಹಿಂದಿ ಭಾಷೆ ತಿಳಿದಿರುವವರು ಇಲ್ಲಿ ಗೈಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತೀ ಹಂತದಲ್ಲೂ ಅಪಾಯವಾಗದಂತೆ ಮಾರ್ಗದರ್ಶನ ನೀಡುತ್ತಾರೆ. ಮಾನವ ವಸತಿ ಪ್ರದೇಶವಿಲ್ಲದ ಕಾರಣ ಎಲ್ಲೆಲ್ಲೂ ಸ್ವಚ್ಛತೆಯೇ ಬರಪೊಳೆಯ ಜೀವಾಳ. ಹಸಿರು ಹೊದಿಕೆಯ ನಡುವೆ ಬಿಳಿಯಾಗಿ, ಅಲ್ಲಲ್ಲಿ ಹಾಲ್ನೊರೆಯಂತೆ ಕಾಣುತ್ತದೆ. ದಟ್ಟ ಕಾಡು, ನದಿಗೆ ಮುತ್ತಿಕ್ಕುವ ವಾಟೆ ಕಾಡು, ಬಿದಿರು, ಕುರುಚಲು ಗಿಡಗಳು ನಾನೆಷ್ಟು ಸ್ವಚ್ಛ ಎಂಬುವುದನ್ನು ಸಾರುತ್ತಿದೆ. ಕಾಫಿ ತೋಟ ಹಾಗೂ ಟೀ ಎಸ್ಟೇಟ್ ನಡುವೆ ಸಾಗುವ ಪಯಣದಲ್ಲಿ ಟೀ ಗಿಡಗಳ ಸ್ವಾದದಿಂದ ಮನಸ್ಸಿಗೆ ಮುದ ನೀಡುತ್ತದೆ. ಸಾಮಾನ್ಯವಾಗಿ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ರಾಪ್ಟಿಂಗ್ ಕಾರ್ಯನಿರ್ವಹಿಸುತ್ತದೆ.
ಈ ಸಂದರ್ಭ ಕೂರ್ಗ್ ರಿವರ್ಸ್ ರಾಫ್ಟಿಂಗ್, ಪ್ರಾಯೋಜಕರಾದ ಬೋಸ್ ಮಾದಪ್ಪ ಅವರು ಮಾತನಾಡಿ, ಕಳೆದ 15 -20 ವರ್ಷದಿಂದ ರಿವರ್ ರಾಫ್ಟಿಂಗ್ ಎನ್ನುವ ರೋಮಾಂಚಕ ಕ್ರೀಡೆಯನ್ನು ನಡೆಸುತಿದ್ದೇವೆ. ಈ ವರ್ಷ ಮನ್ಸೂನ್ ಬೇಗ ಆರಂಭಗೊಂಡಿರುವುದರಿಂದ ಜೂನ್ ನಲ್ಲಿಯೇ ರಾಫ್ಟಿಂಗ್ ಆರಂಭಿಸಿದ್ದೇವೆ. ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆ ಇದೆ. ರಾಫ್ಟಿಂಗ್ ಗೆ ಬೇಕಾದ ಲೈಫ್ ಜಾಕೆಟ್, ಹೆಲ್ಮೆಟ್, ಹಾಗೂ ಪೇಡಲ್ ಎಲ್ಲವನ್ನು ಪರಿಶೀಲಿಸಿ ವರ್ಷ್ಂಪ್ರತಿ ಬದಲಾವಣೆ ಮಾಡುತ್ತೇವೆ. ಹಾಗೆ ರಾಫ್ಟ್ ಅನ್ನು ಪ್ರತಿ ವರ್ಷ ಜನರಲ್ ತಿಮ್ಮಯ್ಯ ಅಕಾಡೆಮಿಯ ವತಿಯಿಂದ ಫಿಟ್ನೆಸ್ ಟೆಸ್ಟ್ ಮಾಡಲಾಗುವುದು. ರಾಫ್ಟಿಂಗ್ ನಡೆಸಲು ಉತ್ತಮ ತರಬೇತಿ ಹೊಂದಿರುವ ರ‍್ಯಾಫ್ಟರ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ರಾಫ್ಟಿಂಗ್ ನಿರ್ವಹಣಾ ಸಮಿತಿ ಇದ್ದು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು. ಈ ಸಂದರ್ಭ ಕೂರ್ಗ್ ವಾಟರ್ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಪ್ರಾಯೋಜಕರಾದ ಪವನ್, ಕೊಡಗು ವೈಟ್ ವಾಟರ್ ರ‍್ಯಾಫ್ಟಿಂಗ್ ಪ್ರಯೋಜಕರಾದ ಚೋನಿರ ರತನ್, ನಿತಿನ್, ಕೂರ್ಗ್ ರಿವರ್ಸ್ ರ‍್ಯಾಫ್ಟಿಂಗ್ ಪ್ರಯೋಜಕರಾದ ಸೋಮಣ್ಣ, ಚಟ್ಟಂಗಡ ಮಹೇಶ್ ಹಾಗೂ ಮತ್ತಿತರು ಇದ್ದರು.
ವಿಶೇಷ ವರದಿ: ಚಂಪಾ ಗಗನ, ಪೊನ್ನಂಪೇಟೆ.