ಮಹಾರಾಷ್ಟ್ರದಲ್ಲಿ ನಕಲಿ ಮಹಿಳಾ ಸೇನಾ ಅಧಿಕಾರಿ ಬಂಧನ: ಶಸ್ತ್ರಾಸ್ತ್ರ, ಸಮವಸ್ತ್ರ ವಶಕ್ಕೆ

ಛತ್ರಪತಿ ಸಂಭಾಜಿನಗರ: ಸೇನಾ ಅಧಿಕಾರಿಯಂತೆ ವೇಷ ಧರಿಸಿ ಜನರನ್ನು ವಂಚಿಸುತ್ತಿದ್ದ 48 ವರ್ಷದ ಮಹಿಳೆಯನ್ನು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ದೌಲತಾಬಾದ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ರುಚಿಕಾ ಜೈನ್ ಎಂದು ಗುರುತಿಸಲಾಗಿದೆ.
ಮಹಿಳೆಯ ಬಳಿ ಸೇನಾ ಸಮವಸ್ತ್ರ, ‘ಪ್ಯಾರಾ’ ಎಂದು ಬರೆದ ಬ್ಯಾಡ್ಜ್, ಹುದ್ದೆಯನ್ನು ಸೂಚಿಸುವ ಮೂರು ಸ್ಟಾರ್ ಗಳು, ನಾಮಫಲಕ, ನಾಲ್ಕು ಪದಕಗಳು ಹಾಗೂ ಸಮವಸ್ತ್ರ ಧರಿಸಿದ ಫೋಟೋಗಳು ಪತ್ತೆಯಾಗಿದೆ. ಇದಲ್ಲದೆ ಹಲವಾರು ಪ್ರಶಸ್ತಿಗಳು, ಸ್ಮರಣಿಕೆಗಳು ಹಾಗೂ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ಸಿಕ್ಕಿದ್ದು, ಅವುಗಳಲ್ಲಿ ಆಕೆಯನ್ನು “ಕ್ಯಾಪ್ಟನ್ ರುಚಿಕಾ ಜೈನ್” ಎಂದು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಪರವಾನಗಿ ಅಗತ್ಯವಿಲ್ಲ ಎಂದು ಬರೆದಿರುವ ಏರ್ ಪಿಸ್ತೂಲ್ ಹಾಗೂ ಏರ್ ಗನ್ ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಮಹಿಳೆ ಜನರನ್ನು ಹೇಗೆ ವಂಚಿಸುತ್ತಿದ್ದಳು ಮತ್ತು ಸೇನೆಗೆ ಸಂಬಂಧಿತ ವಸ್ತುಗಳನ್ನು ಹೇಗೆ ಪಡೆದುಕೊಂಡಳು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.