ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ,ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ಎರಡು ಗುಂಪುಗಳ ನಡುವೆ ಫೈಟ್ !

(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ: ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಇದೀಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ವಾಕ್ಸಮರ ತಾರಕ್ಕಕೇರಿದ್ದು,ಎರಡು ಗುಂಪುಗಳು ಪ್ರತ್ಯೇಕ ಸಭೆ ನಡೆಸಿರುವ ಘಟನೆ ನಡೆದಿದೆ. ಕಳೆದ ಶನಿವಾರ ಮಡಿಕೇರಿ ನಗರದ ಹೊರವಲಯದ ರೆಸಾರ್ಟ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ನೇತೃತ್ವದಲ್ಲಿ ಆಹ್ವಾನಿತ 99 ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಿಗೆ ಆಹ್ವಾನ ನೀಡಲಾಗಿತ್ತು.ಸಭೆಯಲ್ಲಿ 40ರಿಂದ 50 ಮಂದಿ ಭಾಗವಹಿಸಿದ್ದರು.ಸಭೆಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಇಬ್ಬರು ಆಕಾಂಕ್ಷಿಗಳು,ಅದಪೊಳೆ ಮೊಹಮ್ಮದ್ ಹಾಜಿ ಕುಂಜಿಲ ಹಾಗೂ ಮಡಿಕೇರಿ ನಗರದ ಕಲೀಲ್ ಪಾಷ ಭಾಗವಹಿಸಿದ್ದರು.ಸಭೆಯ ತೀರ್ಮಾನದಂತೆ ಇಬ್ಬರು ಆಕಾಂಕ್ಷಿಗಳ ಹೆಸರನ್ನು ಫೈನಲ್ ಮಾಡಿ ಶಾಸಕರಿಗೆ ಪಟ್ಟಿ ನೀಡುವಂತೆ ತೀರ್ಮಾನಿಸಲಾಗಿತ್ತು.ಆದರೆ ಸಭೆಯ ಮಾಹಿತಿ ತಿಳಿಯುತ್ತಿದ್ದಂತೆ ಸಭೆಗೆ ಆಹ್ವಾನವಿಲ್ಲದ ಹಾಗೂ ಸಭೆಯ ಬಗ್ಗೆ ಮಾಹಿತಿಯಿಲ್ಲದ ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಸಭೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು.ಕಾಂಗ್ರೆಸ್ ಹಿರಿಯ ಮುಖಂಡ ಎಡಪಾಲ ಶಾಫಿ ಅವರು ವಕ್ಫ್ ಬೋರ್ಡ್ ಪ್ರಬಲ ಆಕಾಂಕ್ಷಿಯಾಗಿದ್ದರು,ಆದರೆ ಅವರು ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಗೈರು ಹಾಜರಾಗಿದ್ದರು. ಅವರ ಹೆಸರನ್ನು ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಸದೆ ಸಭೆಯಲ್ಲಿ ಹಾಜರಿದ್ದ ಆಕಾಂಕ್ಷಿಗಳ ಹೆಸರನ್ನು ಮಾತ್ರ ಫೈನಲ್ ಮಾಡಿದಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು,ಮತ್ತು ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಮತ್ತೋರ್ವ ಆಕಾಂಕ್ಷಿ ಡಿಸಿಸಿ ಸದಸ್ಯ ಖಾಲಿದ್ ಹಾಕತ್ತೂರು ಅವರು ಕೂಡ ಸಭೆಯಲ್ಲಿ ಭಾಗವಹಿಸಿರಲಿಲ್ಲ.ಖಾಲಿದ್ ಅವರ ಹೆಸರನ್ನು ಕೂಡ ಆಕಾಂಕ್ಷಿಗಳ ಪಟ್ಟಿಯಿಂದ ಕೈಬಿಟ್ಟಿದ್ದರು.ಶನಿವಾರ ಸಭೆಯ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರು ತಮಗೆ ಬೇಕಾದವರಿಗೆ ಮಾತ್ರ ಆಹ್ವಾನ ನೀಡಿದ್ದಾರೆ ಎಂದು ಬಹಿರಂಗವಾಗಿ ಅಧ್ಯಕ್ಷರ ವಿರುದ್ಧ ವ್ಯಾಟ್ಸ್ ಅಪ್ ಗ್ರೂಪ್ ಗಳಲ್ಲಿ ಅಸಮಾಧಾನ ಹೊರಹಾಕಿದ್ದರು.
ವಿರಾಜಪೇಟೆಯಲ್ಲಿ ಸಭೆ,ಶಾಫಿ ಎಡಪಾಲ ಹೆಸರು ಅಂತಿಮಗೊಳಿಸಲು ತೀರ್ಮಾನ!
ಕಳೆದ ಶನಿವಾರ ಮಡಿಕೇರಿ ನಗರದ ಹೊರವಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ನೇತೃತ್ವದ ಸಭೆಗೆ ಆಹ್ವಾನವಿದ್ದರೂ ಕೂಡ ಸಭೆಗೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ವಿರಾಜಪೇಟೆಯಲ್ಲಿ ಭಾನುವಾರ ಸಭೆ ಸೇರಿದ್ದರು. ವಿಶೇಷವೇನೆಂದರೆ ಶನಿವಾರ ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ಅಲ್ಪಸಂಖ್ಯಾತ ಘಟಕದ ನಾಯಕರೊಬ್ಬರು ವಿರಾಜಪೇಟೆ ಸಭೆಯಲ್ಲಿ ಭಾಗವಹಿಸಿದ್ದರು. ವಿರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಹಿರಿಯ ಅಲ್ಪಸಂಖ್ಯಾತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧ್ಯಕ್ಷರಿಗೆ ಬೇಕಾದವರನ್ನು ಮಾತ್ರ ಸಭೆಗೆ ಆಹ್ವಾನಿಸಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಅಸಮಾಧಾನ ಹೊರಹಾಕಿದರು. ಪಿ.ಎ ಹನೀಫ್ ಅವರ ಏಕಪಕ್ಷೀಯ ನಿರ್ಧಾರದ ವಿರುದ್ಧ ಕಾಂಗ್ರೆಸ್ ಶಾಸಕರು ಹಾಗೂ ಜಿಲ್ಲಾಧ್ಯಕ್ಷರಿಗೆ ದೂರು ನೀಡಲು ಕೂಡ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಕೆಲವು ಧಾರ್ಮಿಕ ಮುಖಂಡರ ಪತ್ರ ಶಿಫಾರಸ್ಸು ತೆಗೆದುಕೊಂಡು ಬರುತ್ತಿದ್ದಾರೆ.ಇದಕ್ಕೆ ಕಾಂಗ್ರೆಸ್ ಅವಕಾಶ ನೀಡಬಾರದರು.ಗ್ರೂಪಿಸಂ ಮತ್ತು ಪಂಗಡಗಳಿಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅವಕಾಶ ನೀಡಬಾರದೆಂದು ವಿರಾಜಪೇಟೆ ಪುರಸಭೆ ಸದಸ್ಯ ಮತೀನ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ನಡೆದ ಸಭೆಯಲ್ಲಿ ಒಂದು ಧಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡವರಿಗೆ ಹೆಚ್ಚು ಆಹ್ವಾನ ನೀಡಿದ್ದಾರೆ ಎಂದು ಆರೋಪ ಕೂಡ ಪಿ.ಎ ಹನೀಫ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು. ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದವರು ಮೊಹಮ್ಮದ್ ಹಾಜಿ ಕುಂಜಿಲ ಅವರನ್ನು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೇರಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ವಲಯದಲ್ಲಿ ಕೇಳಿಬರುತ್ತಿದೆ. ಭಾನುವಾರ ವಿರಾಜಪೇಟೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಚ್.ಎಂ ಅಬ್ದುರೆಹಮಾನ್ ನಾಪೋಕ್ಲು ಅವರು ವಹಿಸಿದ್ದರು. ಸಭೆಯಲ್ಲಿ ಶಾಫಿ ಎಡಪಾಲ ಅವರ ಹೆಸರನ್ನು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಶಾಸಕರಿಗೆ ಶಿಫಾರಸು ಮಾಡುವಂತೆ ತೀರ್ಮಾನಿಸಿದ್ದಾರೆ.ಅದಲ್ಲದೇ ಪ್ರಸ್ತುತ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ವರಿಷ್ಠರಿಗೆ ತಿಳಿಸಲು ಅಬ್ದುರೆಹಮಾನ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ ಇಸ್ಮಾಯಿಲ್, ವಿರಾಜಪೇಟೆ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ ಅಬ್ದುಲ್ ಸಲಾಂ,ಮಾಜಿ ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರುಗಳಾದ ಎಂ.ಎ ಉಸ್ಮಾನ್ ಸುಂಟಿಕೊಪ್ಪ,ಎ.ಕೆ ಹಾರಿಸ್ ಕೊಳಕೇರಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ವಿರಾಜಪೇಟೆ ಪುರಸಭೆ ಸದಸ್ಯರಾದ ಶಾಫಿ,ಮತೀನ್,ನೆಲ್ಲಿಹುದಿಕೇರಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಂ,ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವೂಫ್ ಮಡಿಕೇರಿ,ಸುಂಟಿಕೊಪ್ಪದ ಇಸ್ಹಾಕ್ ಖಾನ್,ರಫೀಕ್ ಖಾನ್,ಶರೀಫ್,ಕರೀಂ ಗದ್ದೆಹಳ್ಳ,ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಬಶೀರ್ ನೆಲ್ಲಿಹುದಿಕೇರಿ, ಶುಕೂರ್ ಸಿದ್ದಾಪುರ ಸೇರಿ 70 ಕ್ಕೂ ಅಧಿಕ ಅಲ್ಪಸಂಖ್ಯಾತ ಮುಖಂಡರು ಭಾಗವಹಿಸಿದ್ದರು. ಶನಿವಾರ ಪಿ.ಎ ಹನೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಹ್ವಾನವಿದ್ದರೂ ಕೂಡ ಪ್ರಮುಖ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಸಭೆಗೆ ಗೈರಾಗಿದ್ದರು.ಆದರೆ ಶನಿವಾರ ನಡೆದ ಸಭೆಗೆ ಗೈರಾದವರು ಭಾನುವಾರ ವಿರಾಜಪೇಟೆಯಲ್ಲಿ ನಡೆದ ಸಭೆಯ ನೇತೃತ್ವವನ್ನು ವಹಿಸಿದ್ದು ವಿಶೇಷವಾಗಿತ್ತು.
ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಅಧ್ಯಕ್ಷ!
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ನೇತೃತ್ವದಲ್ಲಿ ಶನಿವಾರ ಮಡಿಕೇರಿಯಲ್ಲಿ ನಡೆದ ಸಭೆಯ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಹಾಗೂ ಭಾನುವಾರ ವಿರಾಜಪೇಟೆಯಲ್ಲಿ ಅಲ್ಪಸಂಖ್ಯಾತ ಮುಖಂಡರು ಸಭೆಯ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಅಧ್ಯಕ್ಷರಾದ ಪಿ.ಎ ಹನೀಫ್ ಅವರು ಡ್ಯಾಮೇಜ್ ಕಂಟ್ರೋಲ್ ಮಾಡಕ್ಕೆ ಪ್ರಯತ್ನಿಸಿದ್ದಾರೆ.ಶನಿವಾರ ನಡೆದ ಸಭೆಗೆ ಗೈರುಹಾಜರಾಗಿದ್ದ ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್, ಹಿರಿಯ ಕಾಂಗ್ರೆಸ್ ಮುಖಂಡ ಎರ್ಮು ಹಾಜಿ ಅವರನ್ನು ಭೇಟಿಯಾಗಿ ಶನಿವಾರ ನಡೆದ ಸಭೆ ಹಾಗೂ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.ಶನಿವಾರ ಸಂಜೆಯಿಂದಲೇ ಅಲ್ಪಸಂಖ್ಯಾತ ಘಟಕದ ಸಭೆಯ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಭಾನುವಾರ ಬೆಳಗ್ಗೆ ಇಬ್ರಾಹಿಂ ಮಾಸ್ಟರ್ ಹಾಗೂ ಎರ್ಮು ಹಾಜಿ ಅವರನ್ನು ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಲ್ಲದೇ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಕುಂಜಿಲದ ಮೊಹಮ್ಮದ್ ಹಾಜಿ ಅವರು ಮಾತ್ರ ಸೂಕ್ತ ಎಂಬಂತೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಒಂದು ಧಾರ್ಮಿಕ ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರು ಬಿಂಬಿಸುತ್ತಿದ್ದಾರೆ.ಅದಲ್ಲದೇ ಮೊಹಮ್ಮದ್ ಹಾಜಿ ಅವರ ಪರವಾಗಿ ಪಿ.ಎ ಹನೀಫ್ ತೆರೆಮರೆಯಲ್ಲಿ ಬೆಂಬಲ ಸೂಚಿಸುತ್ತಿರುವ ಬಗ್ಗೆ ಕೂಡ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.ವಕ್ಫ್ ಬೋರ್ಡ್ ಅಧ್ಯಕ್ಷರಾಗುವವರಿಗೆ ಧಾರ್ಮಿಕ ವಿಷಯದ ಬಗ್ಗೆ ಅರಿವು ಇರಬೇಕು ಅಂತಹವರಿಗೆ ಮಾತ್ರ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬರಹಗಳು ವ್ಯಾಟ್ಸ್ ಗ್ರೂಪ್ ಗಳಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದವರು ಶೇರ್ ಮಾಡುತ್ತಿದ್ದರು.ವಿಶೇಷವಾಗಿ ಕುಂಜಿಲ ಮೊಹಮ್ಮದ್ ಹಾಜಿ ಅವರಿಗೆ ಮಾತ್ರ ಧಾರ್ಮಿಕ ವಿಷಯದ ಬಗ್ಗೆ ಗೊತ್ತಿರುವುದು ಉಳಿದವರಿಗೆ ಏನೂ ಗೊತ್ತೇ ಇಲ್ಲ ಎಂಬಂತೆ ಇದೀಗ ಬಿಂಬಿಸಿರುವ ಬಗ್ಗೆ ಬಹಿರಂಗವಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಧಾರ್ಮಿಕ ಸಂಘಟನೆ ಮೂಲಕ ಲಾಬಿ ಮಾಡದೆ,ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ನಾಯಕರಿಗರ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಕೂಗು ಭಾನುವಾರ ವಿರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಗಿದೆ.ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಮುಸ್ಲಿಮ್ ಮುಖಂಡರಿಗೆ ಸೀಮಿತವಾದ ಹುದ್ದೆ,ನಿಗಮ ಮಂಡಳಿ,ಎಂ.ಎಲ್.ಸಿ ಸ್ಥಾನಕ್ಕೆ ಸಭೆ ನಡೆಸಿ ಎಂಬ ಒತ್ತಾಯವನ್ನು ಎರಡು ಸಭೆಯಲ್ಲಿ ಭಾಗವಹಿಸದೆ ತಟಸ್ಥವಾಗಿರುವ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಲ್ಲಿ ವ್ಯಕ್ತವಾಗಿದೆ. ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ಎರಡು ಗುಂಪುಗಳು ರಚನೆಗೊಂಡಿದ್ದು,ಬಣಗಳ ಬಡಿದಾಟದಲ್ಲಿ ಯಾರಿಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಕಾದುನೋಡಬೇಕಾಗಿದೆ.
ಪಟ್ಟಿಯಲ್ಲಿದ್ದವರಿಗೆ ಮಾಹಿತಿಯೇ ಇಲ್ಲ!
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಪಿ.ಎ ಹನೀಫ್ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ನಡೆದ ಸಭೆಯ ಬಗ್ಗೆ ಆಹ್ವಾನಿತರ ಪಟ್ಟಿಯಲ್ಲಿದ್ದವರಿಗೂ ಕೂಡ ಸಭೆಯ ಬಗ್ಗೆ ಮಾಹಿತಿ ಇರಲಿಲ್ಲ.ಕೇವಲ ನಾಮಕಾವಸ್ಥೆಗೆ ಪಟ್ಟಿಯಲ್ಲಿ ಹೆಸರು ಹಾಕಿ,ಅಧ್ಯಕ್ಷರಿಗೆ ಆಪ್ತರಾಗಿರುವವರಿಗೆ ಮಾತ್ರ ಕರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಆಕ್ರೋಶಕ್ಕೆ ಹೊರಹಾಕಿದ್ದಾರೆ. ಶನಿವಾರ ಸಭೆಯ ಬಗ್ಗೆ ಶುಕ್ರವಾರ ರಾತ್ರಿ ಕರೆ ಮಾಡಿ ಕೆಲವರನ್ನು ಆಹ್ವಾನಿಸಿದ್ದಾರೆ.ಕೆಲವರಿಗೆ ಕಾಲ್ ಮಾಡಿ ಕನೆಕ್ಟ್ ಆಗಿಲ್ಲ ಎಂದು ಅಧ್ಯಕ್ಷರು ಬೇಜವಬ್ದಾರಿ ಉತ್ತರ ನೀಡಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಅಲ್ಪಸಂಖ್ಯಾತ ಮುಖಂಡರಿಗೆ ತಮ್ಮ ಹೆಸರು ಪಟ್ಟಿಯಲ್ಲಿದ್ದರು ಕೂಡ ಸಭೆಯ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.ಅದಲ್ಲದೇ ಶನಿವಾರ ನಡೆದ ಅಲ್ಪಸಂಖ್ಯಾತ ಘಟಕದ ಸಭೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ,ಸೋಮವಾರ ಬೆಳಗ್ಗೆ ಶನಿವಾರದ ಸಭೆಗೆ ಆಹ್ವಾನಿಸಿದವರ ಪಟ್ಟಿ ಎಲ್ಲೆಡೆ ಶೇರ್ ಆಗುತ್ತಿದೆ. ಆಹ್ವಾನಿತರ ಪಟ್ಟಿ ನೋಡಿ ನನ್ನ ಹೆಸರು ಕೂಡ ಇತ್ತಾ! ನನಗೆ ಮಾಹಿತಿಯೇ ನೀಡಿಲ್ಲ ಎಂದು ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಎರಡು ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶದ ಮೇರೆಗೆ ಶನಿವಾರ ಮಡಿಕೇರಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಆಹ್ವಾನಿತ ನಾಯಕರ ಸಭೆಯನ್ನು ನಡೆಸಿದ್ದೇವೆ. ಸಭೆಗೆ ಆಹ್ವಾನಿಸಿರುವ ನಾಯಕರ ಪಟ್ಟಿಯನ್ನು ಕೂಡ ಶಾಸಕರ ಗಮನಕ್ಕೆ ತಂದಿದ್ದೇವೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿದ್ದೇವೆ.ಮಾಜಿ ಶಾಸಕರಾದ ಕೆ.ಎಂ ಇಬ್ರಾಹಿಂ ಮಾಸ್ಟರ್, ಹಿರಿಯ ಕಾಂಗ್ರೆಸ್ ಮುಖಂಡರಾದ ಪಿಸಿ ಹಸೈನಾರ್ ಹಾಜಿ ಹಾಗೂ ಎರ್ಮು ಹಾಜಿ ಅವರಿಗೆ ಶನಿವಾರ ನಡೆದ ಸಭೆಯ ಮಾಹಿತಿಯನ್ನು ನೀಡಿದ್ದೇವೆ.ಶನಿವಾರ ನಡೆದ ಸಭೆಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಇಬ್ಬರು ಆಕಾಂಕ್ಷಿಗಳ ಪಟ್ಟಿಯನ್ನು ಕೂಡ ಶಾಸಕರಿಗೆ ನೀಡುತ್ತೇವೆ.ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ.
ಪಿ.ಎ ಹನೀಫ್,ಅಧ್ಯಕ್ಷ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ -
------------------------------------------------------------
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಬೇಕು.ಸಭೆಯಲ್ಲಿ ಹಾಜರಿದ್ದ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಹೆಸರನ್ನು ಮಾತ್ರ ಫೈನಲ್ ಮಾಡಿರುವ ನಿರ್ಧಾರವನ್ನು ನಾನು ಖಂಡಿಸುತ್ತೇನೆ.ಭಾನುವಾರ ವಿರಾಜಪೇಟೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಚ್.ಎಂ ಅಬ್ದುರೆಹಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಎಡಪಾಲ ಶಾಫಿ ಅವರ ಹೆಸರನ್ನು ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದೇವೆ. ಎಲ್ಲಾ ಮಾಹಿತಿಯನ್ನು ಅಬ್ದುರೆಹಮಾನ್ ಅವರ ನೇತೃತ್ವದಲ್ಲಿ ಶಾಸಕರಿಗೆ ನೀಡುತ್ತೇವೆ.
ಕೆ.ಎ ಇಸ್ಮಾಯಿಲ್,ಅಧ್ಯಕ್ಷರು ನಾಪೋಕ್ಲು ಬ್ಲಾಕ್ ಕಾಂಗ್ರೆಸ್. -------------------------------------------