ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತ್ನಿ–ಮಕ್ಕಳ ಹತ್ಯೆ ಮಾಡಿ ಗುಂಡಿಯಲ್ಲಿ ಮುಚ್ಚಿದ ಅರಣ್ಯಾಧಿಕಾರಿ!

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತ್ನಿ–ಮಕ್ಕಳ ಹತ್ಯೆ ಮಾಡಿ ಗುಂಡಿಯಲ್ಲಿ ಮುಚ್ಚಿದ ಅರಣ್ಯಾಧಿಕಾರಿ!
Photo credit: TV09

ಭಾವನಗರ (ಗುಜರಾತ್), ನ.22: ಸಹೋದ್ಯೋಗಿಯೊಂದಿಗಿನ ಅಕ್ರಮ ಸಂಬಂಧಕ್ಕೆ ಕುಟುಂಬ ಅಡ್ಡಿಯಾಗುತ್ತಿದೆ ಎಂದು ಅರಣ್ಯಾಧಿಕಾರಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನೇ ಕೊಲೆ ಮಾಡಿ ಹೂತುಹಾಕಿರುವ ಘಟನೆ ಭಾವನಗರದಲ್ಲಿ ಬೆಳಕಿಗೆ ಬಂದಿದೆ. ಮೂವರೂ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ನಡೆದ ತನಿಖೆಯಲ್ಲಿ ನಿಜಾಂಶ ಹೊರಬಿದ್ದಿದ್ದು, ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

ಪೊಲೀಸರು ನೀಡಿರುವ ವಿವರಗಳಂತೆ, ಭಾವನಗರಕ್ಕೆ ಇತ್ತೀಚೆಗೆ ವರ್ಗಾಯಿಸಲ್ಪಟ್ಟ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಖಂಭಾಲಾ 2022ರಿಂದ ಮಹಿಳಾ ಅರಣ್ಯಾಧಿಕಾರಿಯೊಬ್ಬರೊಂದಿಗೆ ಆಪ್ತಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಸಂಬಂಧವನ್ನು ಕುಟುಂಬ ಒಪ್ಪಿಕೊಳ್ಳುವುದಿಲ್ಲ ಎಂದು, ಖಂಭಾಲಾ ಪತ್ನಿ ನಯನಾ (40), ಮಗಳು ಪ್ರೀತಾ (13) ಹಾಗೂ ಮಗ ಭವ್ಯಾ (9) ಅವರನ್ನು ಹತ್ಯೆಮಾಡಿದ್ದಾನೆ.

ಸೂರತ್‌ ನಲ್ಲಿ ವಾಸಿಸುತ್ತಿದ್ದ ಕುಟುಂಬ ರಜೆಗಾಗಿ ಭಾವನಗರಕ್ಕೆ ಬಂದ ಬಳಿಕ ಕಾಣೆಯಾಗಿದ್ದರಿಂದ ಬಂಧುಗಳಲ್ಲಿ ಕಳವಳ ಉಂಟಾಗಿತ್ತು. ನವೆಂಬರ್ 5ರಂದು ಖಂಭಾಲಾ ತನ್ನ ಭದ್ರತಾ ಸಿಬ್ಬಂದಿ ಕುಟುಂಬ ಆಟೋದಲ್ಲಿ ತೆರಳಿರುವುದನ್ನು ಕಂಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದ. ಆದರೆ ಸಿಬ್ಬಂದಿ ಈ ಹೇಳಿಕೆಯನ್ನು ನಿರಾಕರಿಸಿದ ನಂತರ ಪೊಲೀಸರು ಖಂಭಾಲಾ ವರ್ತನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಖಂಭಾಲಾನ ಕರೆ ದಾಖಲೆಗಳಲ್ಲಿ ಕಿರಿಯ ಸಿಬ್ಬಂದಿ ಗಿರೀಶ್ ವಾನಿಯಾ ಅವರೊಂದಿಗೆ ನಡೆದ ಸಂಭಾಷಣೆ ಪತ್ತೆಯಾಯಿತು. ಖಂಭಾಲಾ ವಾನಿಯಾ ಮೂಲಕ ಮನೆಯ ಹಿಂಭಾಗದಲ್ಲಿ ಎರಡು ಹೊಂಡಗಳನ್ನು ಅಗೆಯಲು ಸೂಚಿಸಿದ್ದು, ನಂತರ “ನೀಲಗಾಯ್ ಬಿದ್ದು ಸತ್ತುಹೋಗಿದೆ, ಹೊಂಡ ಮುಚ್ಚಬೇಕು” ಎಂದು ಡಂಪರ್‌ ಟ್ರಕ್‌ ಕಳುಹಿಸುವಂತೆ ಕೇಳಿಕೊಂಡಿರುವುದು ಬೆಳಕಿಗೆ ಬಂತು.

ನವೆಂಬರ್ 16ರಂದು ಪೊಲೀಸರು ಹೊಂಡಗಳನ್ನು ತೆರೆಸಿದಾಗ ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾದವು. ವಿಚಾರಣೆ ವೇಳೆ ಖಂಭಾಲಾ ಅಪರಾಧವನ್ನು ಒಪ್ಪಿಕೊಂಡಿದ್ದು, ಪೂರ್ವಯೋಜಿತವಾಗಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ನಂತರ ತನಿಖೆ ತಪ್ಪಿಸಲು ಪತ್ನಿಯ ಫೋನ್‌ ನಿಂದ ತಾನೇ ತಮಗೆ “ನಾನು ಬೇರೊಬ್ಬರೊಡನೆ ವಾಸಿಸಲು ಹೊರಟಿದ್ದೇನೆ” ಎಂಬ ಸಂದೇಶ ಕಳುಹಿಸಿದ್ದಾನೆ.

ಮಹಿಳಾ ಸಹೋದ್ಯೋಗಿಯ ಪಾತ್ರದ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.