ಆಲೂರುಸಿದ್ದಾಪುರ ರೋಟರಿ ಕ್ಲಬ್ ವತಿಯಿಂದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

ಶನಿವಾರಸಂತೆ:ಸಮೀಪದ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ವನಮಹೋತ್ಸವದ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುತ್ತಮುತ್ತಲಿನ ಜಾಗದಲ್ಲಿ ಹಲವು ಜಾತಿಯ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ,ರೋಟರಿ ಸಂಸ್ಥೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ.ಅರಣ್ಯ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿರುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಮೂಲಕ ವಿಶ್ವ ಪರಿಸರದ ದಿನ ಮತ್ತು ವನಮಹೋತ್ಸವದ ಅಂಗವಾಗಿ ಉಪಯುಕ್ತ ಗಿಡಗಳು ಸೇರಿದಂತೆ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಕಿರಣ್, ವಲಯ ಸೇನಾನಿ ಎ.ಎಸ್.ರಾಮಣ್ಣ, ಮುಂದಿನ ಸಾಲಿನ ಅಧ್ಯಕ್ಷ ಸಂಪತ್, ರೋಟರಿ ಸದಸ್ಯರಾದ ಎಚ್.ಇ.ತಮ್ಮಯ್ಯ, ಪ್ರಸನ್ನಕುಮಾರ್, ವೆಂಕಟೇಶ್, ವಿಜಯ್, ಜಿತೇಂದ್ರ, ಸತೀಶ್ ಹಾಜರಿದ್ದರು.