ಗ್ಯಾಂಗ್‌ವಾರ್: ಯುವಕನ ಭೀಕರ ಹತ್ಯೆ
ತುಮಕೂರು, ನ.15: ನಗರದ ಮಂಜುನಾಥ ನಗರದಲ್ಲಿ ಬುಧವಾರ ರಾತ್ರಿ ನಡೆದ ಮಾರಣಾಂತಿಕ ದಾಳಿ ತುಮಕೂರಿನಲ್ಲಿ ಮತ್ತೆ ಗ್ಯಾಂಗ್‌ವಾರ್ ಆತಂಕಕ್ಕೆ ಕಾರಣವಾಗಿದೆ. ಲಾಂಗು–ಮಚ್ಚುಗಳಿಂದ ನಡೆದ ದಾಳಿಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರೌಡಿಶೀಟರ್ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕ್ಯಾತ್ಸಂದ್ರದ ಅಭಿಷೇಕ್ (24) ಮೃತಪಟ್ಟವನು ಎಂದು ಗುರುತಿಸಲಾಗಿದೆ. ರೌಡಿಶೀಟರ್ ಮನೋಜ್‌ನ್ನು ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಕಳೆದ ಕೆಲ ದಿನಗಳಿಂದ ಅಭಿಷೇಕ್ ಮತ್ತು ಮನೋಜ್ ಗುಂಪಿನ ಹುಡುಗರ ನಡುವೆ ಬಾರ್‌ನಲ್ಲಿ ನಡೆದ ವಿವಾದ ಮತ್ತೆ ಮತ್ತೆ ಉಲ್ಬಣಗೊಳ್ಳುತ್ತಿತ್ತು. ಎರಡು ಬಾರಿ ನಡೆದ ರಾಜಿ ಯತ್ನವೂ ಫಲಕಾರಿಯಾಗದೆ, ಬಿಕ್ಕಟ್ಟು ಮುಂದುವರಿದಿತ್ತು.
ಬುಧವಾರ ರಾತ್ರಿ ನಡೆದ ಮಾತುಕತೆ ವೇಳೆ ವಾಗ್ವಾದ ತೀವ್ರಗೊಂಡು, ಅಭಿಷೇಕ್ ತನ್ನಿಬ್ಬರು ಸ್ನೇಹಿತರೊಂದಿಗೆ ಮೊದಲು ಮನೋಜ್ ಮೇಲೆ ದಾಳಿ ನಡೆಸಿದನೆಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಯಾಗಿ ಮನೋಜ್ ತನ್ನ ತಂಡವನ್ನು ಕರೆಸಿ ದಾಳಿ ನಡೆಸಿದ್ದು, ಅದರಲ್ಲೇ ಅಭಿಷೇಕ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ದಾಳಿಯ ವೇಳೆ ಮನೋಜ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಭಿಷೇಕ್ ಹತ್ಯೆ ಪ್ರಕರಣ ಹಾಗೂ ಮನೋಜ್ ಮೇಲಿನ ದಾಳೆಗೆ ಕೊಲೆಯತ್ನ ಪ್ರಕರಣವನ್ನು ದಾಖಲಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.
