ಅರೇಬಿಕಾ ಕಾಫಿ ಬೆಳೆಗಾರರಿಗೆ ಖುಲಾಯಿಸಿದ ಅದೃಷ್ಟ: ಅರೇಬಿಕಾ ಪಾರ್ಚ್‌ ಮೆಂಟ್‌ ದರ 30,200ಕ್ಕೆ ಏರಿಕೆ : ಸರ್ವ ಕಾಲಿಕ ದಾಖಲೆಯ ಬೆಲೆ

ಅರೇಬಿಕಾ ಕಾಫಿ ಬೆಳೆಗಾರರಿಗೆ ಖುಲಾಯಿಸಿದ ಅದೃಷ್ಟ: ಅರೇಬಿಕಾ ಪಾರ್ಚ್‌ ಮೆಂಟ್‌  ದರ  30,200ಕ್ಕೆ ಏರಿಕೆ : ಸರ್ವ ಕಾಲಿಕ ದಾಖಲೆಯ   ಬೆಲೆ

(ವರದಿ:ಕೋವರ್‌ ಕೊಲ್ಲಿ ಇಂದ್ರೇಶ್)

ಬೆಂಗಳೂರು:ಜಗತ್ತಿನ ಕಾಫಿ ಬೆಳೆಯುವ ದೈತ್ಯ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಕಾಫಿಯ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದ್ದು ಇದು ಸಹಜವಾಗಿಯೇ ಕಾಫಿಯ ದರ ಏರಿಕೆಗೂ ಕಾರಣವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಕಾಫಿ ಬೆಳೆಗಾರ ರಾಷ್ಟ್ರವಾಗಿರುವ ಬ್ರೆಜಿಲ್‌ ನಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಯ ಸರಬರಾಜು ಕುಸಿತಗೊಂಡ ಬೆನ್ನಲ್ಲೇ ಕಳೆದ ವರ್ಷದಿಂದ ಭಾರತದಲ್ಲಿ ಕಾಫಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆ ಆಗಿದೆ.

 ಕಳೆದ ಫೆಬ್ರುವರಿಯಲ್ಲಿ 50 ಕೆಜಿ ಚೀಲವೊಂದಕ್ಕೆ 27 ಸಾವಿರ ರೂಪಾಯಿ ತಲುಪಿದ್ದ ಅರೇಬಿಕಾ ಪಾರ್ಚ್‌ ಮೆಂಟ್‌ ಕಾಫಿ ದರ ಶುಕ್ರವಾರದ ಮಾರುಕಟ್ಟೆಯಲ್ಲಿ ಸರ್ವಕಾಲಿಕ ದಾಖಲೆ ಬೆಲೆ ಆಗಿರುವ 30,200 ರೂಪಾಯಿಗಳನ್ನು ತಲುಪಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮಿನುಗಿಸಿದೆ. ಫೆಬ್ರುವರಿಯಲ್ಲಿ ಗರಿಷ್ಟ ಬೆಲೆ ದಾಖಲಿಸಿದ್ದು ನಂತರ ಬೆಲೆ 28-29 ಸಾವಿರ ರೂಪಾಯಿಗಳ ಸಮೀಪಕ್ಕೂ ಬಂದಿತ್ತು. ಆದರೆ ಬ್ರೆಜಿಲ್‌ ನಲ್ಲಿ ಮಾರ್ಚ್‌ ಏಪ್ರಿಲ್‌ ತಿಂಗಳಿನಲ್ಲಿ ಕಾಫಿ ಕೊಯ್ಲು ಆರಂಬಗೊಂಡ ಬೆನ್ನಲ್ಲೇ ಭಾರತದ ದೇಶೀ ಮಾರುಕಟ್ಟೆಯಲ್ಲಿ ದರ ಕುಸಿತ ಆರಂಬಗೊಂಡಿತ್ತು. ಕಾಫಿ ಮಾರುಕಟ್ಟೆ ತಜ್ಞರು ಈ ವರ್ಷ ದರ 30 ಸಾವಿರ ಮೀರಲಿದೆ ಎಂದು ಭವಿಷ್ಯ ನುಡಿದಿದ್ದರಾದರೂ ಕಾಫಿ ದರ ಕುಸಿತ ದಾಖಲಿಸಿದ ಪರಿಣಾಮ ಬೆಳೆಗಾರರು ಚಿಂತೆಗೀಡಾಗಿದ್ದರು. ಎಲ್ಲರ ನಿರೀಕ್ಷೆಯಂತೆ ಅರೇಬಿಕಾ ದರ ಇದೇ ಮೊದಲ ಬಾರಿಗೆ 30 ಸಾವಿರ ರೂಪಾಯಿಗಳ ಗಡಿ ದಾಟಿದೆ.

ಶುಕ್ರವಾರ ಚಿಕ್ಕಮಗಳೂರಿನ ಕಾಫಿ ಮಾರುಕಟ್ಟೆಯಲ್ಲಿ 50 ಕೆಜಿ ಚೀಲಕ್ಕೆ 30 ಸಾವಿರ ರೂಪಾಯಿ ಮೀರಿ ಅರೇಬಿಕಾ ಪಾರ್ಚ್ಮೆಂಟ್ 30,200 ರೂಪಾಯಿಗಳಿಗೆ ಮಾರಾಟ ಆಯಿತು. ಮೂಡಿಗೆರೆಯ ಮುದ್ರೆಮನೆ ಕಾಫಿ ಸಂಸ್ಥೆಯವರು ಈ ದರ ಕಾಫಿ ಇತಿಹಾಸದಲ್ಲಿಯೇ ಅತ್ಯಧಿಕ ಆಗಿದ್ದು ಈ ದರಕ್ಕೆ ಇಂದು ಕಾಫಿ ಖರೀದಿಸಿರುವುದಾಗಿ ತಿಳಿಸಿದರು. ಆದರೆ ಕೊಡಗಿನ ಮಾರುಕಟ್ಟೆಯಲ್ಲಿ ದರ ಕಡಿಮೆ ದಾಖಲಾಗಿತ್ತು. ಸೋಮವಾರಪೇಟೆಯ ಬ್ಲಾನ್‌ ಕಾಫಿ ಸಂಸ್ಥೆಯ ಪಾಲುದಾರ ಪ್ರವೀಣ್‌ ಮಾತನಾಡಿ ಇಂದು ಅರೇಬಿಕಾ ಕಾಫಿಯನ್ನು 29,500 ರೂಪಾಯಿಗಳಿಗೆ ಖರೀದಿಸುತ್ತಿರುವುದಾಗಿ ತಿಳಿಸಿದರು. ಮತ್ತೋರ್ವ ವ್ಯಾಪಾರಿ ನಿಶಾಂತ್‌ ಕಾಫಿ ಯ ಮಾಲೀಕರು ಇಂದು ದರ 30 ಸಾವಿರ ಇದ್ದು ಅದೇ ದರಕ್ಕೆ ಖರೀದಿಸಲಾಗುತ್ತಿದೆ , ಆದರೆ ಬೆಳೆಗಾರರಿಗೆ ಇಂದೇ ಪೂರ್ಣ ಹಣವನ್ನು ಪಾವತಿಸಲಾಗುವುದಿಲ್ಲ. ಕ್ಯೂರಿಂಗ್‌ ವರ್ಕ್ಸ್‌ ನಲ್ಲಿ ತೇವಾಂಶ ನೋಡಿಕೊಂಡು ವಾರದಲ್ಲಿ ಪೂರ್ಣ ಹಣ ನೀಡಲಾಗುವುದು ಎಂದು ತಿಳಿಸಿದರು.

ಇತರ ವರ್ಗದ ಕಾಫಿ ದರ ನೋಡುವುದಾದರೆ ಚಿಕ್ಕಮಗಳೂರಿನಲ್ಲಿ ಅರೇಬಿಕಾ ಚೆರಿ ಚೀಲಕ್ಕೆ (ತೇವಾಂಶ ಆಧರಿಸಿ) 15 ರಿಂದ 15,600 ರೂಪಾಯಿ, ರೊಬಸ್ಟಾ ಚೆರಿ 11,700 ರಿಂದ 12,200 ರವರೆಗೆ , ರೊಬಸ್ಟಾ ಪಾರ್ಚ್‌ ಮೆಂಟ್‌ ದರ 19,500 ರಿಂದ 20 ಸಾವಿರ ರೂಪಾಯಿಗಳವರೆಗೆ ಇತ್ತು. ಕೊಡಗಿನಲ್ಲಿ ಈ ಕಾಫಿಗೆ ದರ ಕ್ರಮವಾಗಿ 14,800 ರಿಂದ 15,200, 11,400 ರಿಂದ 11,800 ಹಾಗೂ 19 ರಿಂದ 19,500 ರ ವರೆಗೆ ಇತ್ತು. ಕಾಫಿ ದರ ಏರಿಕೆ ಬೆಳೆಗಾರರಿಗೆ ಹರುಷ ತಂದಿದ್ದರೂ ಕಾಫಿ ಬಳಕೆದಾರರಿಗೆ ಮಾತ್ರ ಕಾಫಿ ಕಹಿ ಆಗುತ್ತಿದೆ. ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಿಲೋ ಕಾಫಿ ಪುಡಿಯ ದರ 800 ರಿಂದ ಸಾವಿರ ರೂಪಾಯಿಗಳ ವರೆಗೆ ಇದೆ. ಕೆಲವೆಡೆ ಬ್ರಾಂಡ್‌ ಆಧರಿಸಿ ದರ ಕಿಲೋಗೆ ಸಾವಿರ ರೂಪಾಯಿಗಳಿಗೂ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿದೆ. ಈ ನಡುವೆ ಕಾಫಿಯ ರುಚಿಗಾಗಿ ಮಿಶ್ರಣ ಮಾಡುವ ಚಿಕೋರಿ ಬೇರಿನ ಬಳಕೆ ಹೆಚ್ಚಾಗಿದೆ ಎಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ತಿಳಿಸಿದರು. ಕಾಫಿಯ ದರ ಹೆಚ್ಚಳವನ್ನು ಸರಿದೂಗಿಸಲು ಕಾಫಿಗೆ ಶೇಕಡಾ 20 ರಷ್ಟು ಚಿಕೋರಿ ಮಿಶ್ರಣ ಮಾಡುವ ಬದಲಿಗೆ ಶೇಕಡಾ 40 ರಿಂದ 50 ರ ವರೆಗೆ ಚಿಕೋರಿ ಮಿಶ್ರಣ ಮಾಡಲಾಗುತ್ತಿದೆ ಎಂದು ವ್ಯಾಪಾರಿ ಮೂಲಗಳು ತಿಳಿಸಿವೆ. ಇದು ಕಾಫಿಯ ರುಚಿಯನ್ನು ಹಾಳು ಮಾಡುತ್ತಿದೆ ಎಂದು ಕಾಫಿ ಪ್ರಿಯರು ಆರೋಪಿಸುತ್ತಾರೆ.