ಪತಿಯ ಹತ್ಯೆ ಪ್ರಕರಣ: ಪತ್ನಿ ಹಾಗೂ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಸಖರಾಯಪಟ್ಟಣ ಸಮೀಪದ ದೊಡ್ಡಿಹಟ್ಟಿಯಲ್ಲಿ ಹುಲಿಕೆರೆ ನಿವಾಸಿ ಪ್ರದೀಪ ಪತ್ನಿ ರಾಗಿಣಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ಶ್ರೀನಿವಾಸ ಎಂಬಾತನೊಂದಿಗೆ ಪ್ರದೀಪ ಗಾರೆ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಶ್ರೀನಿವಾಸನಿಗೆ ರಾಗಿಣಿಯ ಪರಿಚಯವಾಗಿದ್ದು, ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತೆನ್ನಲಾಗಿದೆ. ಈ ವಿಚಾರ ಪ್ರದೀಪನಿಗೆ ಗೊತ್ತಾದ ಬಳಿಕ ಗಲಾಟೆ ಮಾಡಿ ಅಡ್ಡಿಯಾಗಿದ್ದ. ಈ ಹಿನ್ನೆಲೆಯಲ್ಲಿ ರಾಗಿಣಿ ಹಾಗೂ ಶ್ರೀನಿವಾಸ ಸೇರಿ ಪ್ರದೀಪನನ್ನು ಮುಗಿಸಲು ಸಂಚು ರೂಪಿಸಿದ್ದರು.
2020ರ ನ.20 ರಂದು ಸಂಜೆ ಮಕ್ಕಳನ್ನು ಪಕ್ಕದ ಮನೆಗೆ ಟಿವಿ ನೋಡಲು ಕಳುಹಿಸಿ ರಾತ್ರಿ 9:30ರ ಸುಮಾರಿಗೆ ರಾಗಿಣಿ ಹಾಗೂ ಶ್ರೀನಿವಾಸ್ ಸೇರಿ ವೇಲ್‌ನಿಂದ ಪ್ರದೀಪನ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಬಿದ್ದಿದ್ದ ರಕ್ತವನ್ನು ಪ್ರದೀಪ ಧರಿಸಿದ್ದ ಬಟ್ಟೆ ಹಾಗೂ ಮನೆಯಲ್ಲಿದ್ದ ಇನ್ನೊಂದು ಬಟ್ಟೆಯನ್ನು ಬಳಸಿ ಒರೆಸಿದ್ದು, ಸಹಜ ಸಾವು ಎಂದು ಬಿಂಬಿಸಲು ಪ್ರಯತ್ನಿಸಿ, ಮೃತದೇಹವನ್ನು ಕೊಠಡಿಯ ಮಂಚದ ಮೇಲೆ ಮಲಗಿ ಸಿದ್ದರು. ಬಳಿಕ ಆತನನ್ನು ಹತ್ಯೆ ಮಾಡಲು ಬಳಸಿದ ಬಟ್ಟೆಗಳನ್ನು ಶ್ರೀನಿವಾಸ ಚೆಟ್ಟಿಪಾಳ್ಯ ಗೇಟ್‌ನ ಕೂಡುಹಳ್ಳಿ ಸೇತುವೆ ಕೆಳಕ್ಕೆ ಎಸೆದಿದ್ದ ಎನ್ನಲಾಗಿದೆ.
ಈ ಬಗ್ಗೆ ದೂರು ದೊರೆತ ಹಿನ್ನೆಲೆಯಲ್ಲಿ ಅಂದಿನ ಕಡೂರು ಪೊಲೀಸ್ ವೃತ್ತ ನಿರೀಕ್ಷಕ ಡಿ.ಎಸ್.ಮಂಜುನಾಥ್ ಅವರು, ಕೊಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದ ಸಂದರ್ಭಕಡೂರು ಪೊಲೀಸ್ ವೃತ್ತ ಕಚೇರಿಯ ಎಎಸ್ಸೆ ದೇವೇಂದ್ರಕುಮಾರ್ ಅವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಸಿ.ಭಾನುಮತಿ ಅವರು, ಇಬ್ಬರು ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳು ಶಿಕ್ಷೆ ಅನುಭವಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎಚ್. ಎಸ್.ಲೋಹಿತಾಶ್ವಾಚಾರ್ ವಾದ ಮಂಡಿಸಿದ್ದರು.