ಕೊಡಗಿನ ಅಲ್ಪಸಂಖ್ಯಾತ ಸಮುದಾಯದಕ್ಕೆ ಸರ್ಕಾರದಲ್ಲಿ ರಾಜ್ಯ ಮಟ್ಟದ ಸ್ಥಾನಮಾನಕ್ಕೆ ಪ್ರಬಲವಾಗಿ ಆಗ್ರಹಿಸಿದ್ದೇನೆ: ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡಲಾರೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಕೆ.ಎ.ಯಾಕುಬ್ ಸ್ಪಷ್ಟನೆ.

ಕೊಡಗಿನ ಅಲ್ಪಸಂಖ್ಯಾತ ಸಮುದಾಯದಕ್ಕೆ ಸರ್ಕಾರದಲ್ಲಿ ರಾಜ್ಯ ಮಟ್ಟದ ಸ್ಥಾನಮಾನಕ್ಕೆ ಪ್ರಬಲವಾಗಿ ಆಗ್ರಹಿಸಿದ್ದೇನೆ: ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡಲಾರೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಕೆ.ಎ.ಯಾಕುಬ್ ಸ್ಪಷ್ಟನೆ.
ಯಾಕೂಬ್

ಮಡಿಕೇರಿ ನ.19 : ನಾನು 1980 ರಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ರಾಜಕಾರಣದ ಕುರಿತು ಸುದ್ದಿಗಳು ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅವರು ಸ್ಪಷ್ಟಪಡಿಸಿದ್ದಾರೆ.

 ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದ ಸಂವಿಧಾನಕ್ಕೆ ಬದ್ಧವಾದ ಆಶಯಗಳೊಂದಿಗೆ ಸರ್ವಜನಾಂಗದ ಶಾಂತಿಯ ತೋಟದಂತ್ತಿರುವ ಕಾಂಗ್ರೆಸ್ ಪಕ್ಷ ನನಗೆ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಿ ಪಕ್ಷದಲ್ಲಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಆದರೆ ಇತ್ತೀಚೆಗೆ ನಾನು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸುದ್ದಿಗಳನ್ನು ಗಮನಿಸಿದ್ದೇನೆ. ಇದರಲ್ಲಿ ಯಾವುದೇ ಹುರುಳಿಲ್ಲ. ನನ್ನ ಅಭಿಮಾನಿಗಳು ಹಿತೈಷಿಗಳು ಪಕ್ಷದ ಕಾರ್ಯಕರ್ತರು ಮುಖಂಡರು ನನಗೆ ಪಕ್ಷದಲ್ಲಿ ಉತ್ತಮ ಸ್ಥಾನ ಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ ಇದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನ ಮೇಲೆ ಕಾಂಗ್ರೆಸ್ ಪಕ್ಷ ವಿಶ್ವಾಸವಿಟ್ಟು ಹಲವು ಸಂದರ್ಭಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನೀಡಿ ಬೆಳೆಸಿದೆ.

ಅಲ್ಲದೆ ಪ್ರಸ್ತುತ ಕೆಪಿಸಿಸಿ ಸದಸ್ಯ ಸ್ಥಾನವನ್ನು ನೀಡಿ ಪಕ್ಷದ ಬೆಳವಣಿಗೆಯಲ್ಲಿ ನನ್ನ ಸಹಭಾಗಿತ್ವವನ್ನು ಬಯಸಿದೆ. ಅಲ್ಪಸಂಖ್ಯಾತರಿಗೆ ರಾಜಕೀಯ ಬಲ ನೀಡಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಕೂಡ ಅಲ್ಪಸಂಖ್ಯಾತರ ಸಬಲೀಕರಣಕ್ಕೆ ಅಗತ್ಯ ಅವಕಾಶಗಳನ್ನು ನೀಡುತ್ತದೆ ಎನ್ನುವ ವಿಶ್ವಾಸವಿದೆ. ಕಳೆದ 45 ವರ್ಷಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿರುವ ನನಗೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿರುವುದು ರಾಜಕಾರಣದ ಸಹಜ ಪ್ರಕ್ರಿಯೆಯಾಗಿದೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಪಕ್ಷ ಸಂಘಟನೆಯ ದೃಷ್ಟಿಯಿಂದ ಕೊಡಗಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರದಲ್ಲಿ ರಾಜ್ಯ ಮಟ್ಟದ ಸ್ಥಾನಮಾನ ಒದಗಿಸಲು ಬಲವಾಗಿ ಪ್ರತಿಪಾದಿಸಿದ್ದೇನೆ. ಇದು ನಮ್ಮ ಪಕ್ಷದೊಳಗಿನ ಆರೋಗ್ಯಕರ ಸಮಾಲೋಚನೆಯಾಗಿದೆಯೇ ಹೊರತು ಪಕ್ಷವನ್ನು ತೊರೆಯುವ ಮನೋಸ್ಥಿತಿ ನನಗಿಲ್ಲ. ನನ್ನ ರಾಜಕೀಯ ಜೀವನದ ಕೊನೆಯವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಕೆ.ಎ.ಯಾಕುಬ್ ಸ್ಪಷ್ಟಪಡಿಸಿದ್ದಾರೆ. ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.