ಕೇವಲ 2 ಲಕ್ಷ ರೂಪಾಯಿ ಕೊಟ್ಟರೆ ಸಾಕು ‘ಕಳ್ಳತನದ ಪಾಠ’! : ಮಧ್ಯಪ್ರದೇಶದ ರಾಜ್‌ಗಢದಲ್ಲಿ “ಕಳ್ಳರ ಕಾಲೇಜು”
ಭೋಪಾಲ್: ಮಕ್ಕಳಿಗೆ ಶಿಕ್ಷಣ, ನೈತಿಕತೆ, ಸಮಾಜದಲ್ಲಿ ಉತ್ತಮ ಪ್ರಜೆ ಆಗುವ ಮಾರ್ಗ ತೋರಿಸಬೇಕಾದ ಸ್ಥಳವೇ ಶಾಲೆ–ಕಾಲೇಜು. ಆದರೆ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಮೂರು ಹಳ್ಳಿಗಳಲ್ಲಿ ನಡೆಯುತ್ತಿರುವ ಕ್ರಿಯೆಗಳು ಈ ನಂಬಿಕೆಗೆ ಸಂಪೂರ್ಣ ವಿರುದ್ಧ. ಇಲ್ಲಿ ದುಡ್ಡು ಕೊಟ್ಟರೆ ಮಕ್ಕಳಿಗೆ ಕಳ್ಳತನ ಮತ್ತು ದರೋಡೆ ಕಲಿಸುವ ‘ಅಪರಾಧ ಕಾಲೇಜು’ಗಳೇ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ.
ವರದಿ ಪ್ರಕಾರ ಭೋಪಾಲ್‌ನಿಂದ 100 ಕಿ.ಮೀ ದೂರದ ಕಡಿಯಾ, ಗುಲ್ಖೇಡಿ ಹಾಗೂ ಹುಲ್ಖೇಡಿ ಹಳ್ಳಿಗಳಲ್ಲಿ 12–13 ವರ್ಷದ ಬಾಲಕರಿಗೆ ಬಾಲ್ಯದಲ್ಲೇ ಕಳ್ಳತನ, ದರೋಡೆ, ಡಕಾಯಿತಿ ಸೇರಿದಂತೆ ಹಲವು ಅಪರಾಧಗಳ ‘ತರಬೇತಿ’ ನೀಡಲಾಗುತ್ತಿದೆ. ಮಕ್ಕಳನ್ನು ಗ್ಯಾಂಗ್‌ಗಳಿಗೆ ಸೇರಿಸಲು ಪೋಷಕರೇ 2 ರಿಂದ 3 ಲಕ್ಷ ರೂ. ಶುಲ್ಕ ಪಾವತಿಸುತ್ತಾರೆ ಎನ್ನುವುದು ಇನ್ನೂ ಆತಂಕಕಾರಿ ಸಂಗತಿ.
ತರಬೇತಿ ಪೂರ್ಣಗೊಳಿಸಿದ ನಂತರ ಗ್ಯಾಂಗ್ ನಾಯಕರು ಮಗುವಿನ ಪೋಷಕರಿಗೆ ವಾರ್ಷಿಕ 3 ರಿಂದ 5 ಲಕ್ಷ ರೂ. ನೀಡುತ್ತಾನೆ. ಇದರಿಂದಾಗಿ ಅಪರಾಧವೇ ಅವರಿಗೊಂದು ‘ಉದ್ಯೋಗ’ವಾಗುತ್ತದೆ. ಈ ಮೂವರು ಹಳ್ಳಿಗಳಲ್ಲಿ ತರಬೇತಿ ಪಡೆದ ಸುಮಾರು 2,000ಕ್ಕೂ ಹೆಚ್ಚು ಜನರ ವಿರುದ್ಧ ದೇಶದಾದ್ಯಂತ 8,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಮಕ್ಕಳಿಗೆ ಜೇಬುಗಳ್ಳತನದಿಂದ ಹಿಡಿದು ಜನಸಂದಣಿಯಲ್ಲಿ ಚೀಲ ಕಸಿದು ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವ ತಂತ್ರಗಳು, ಸಿಕ್ಕಿಬಂದರೆ ಹೊಡೆತವನ್ನು ಸಹಿಸುವ ಸಾಮರ್ಥ್ಯವರೆಗೂ ವಿವಿಧ ರೀತಿಯ ಅಪರಾಧ ಕೌಶಲ್ಯಗಳನ್ನು ಅಭ್ಯಾಸಗೊಳಿಸಲಾಗುತ್ತದೆ. ಪೊಲೀಸರು ಅಧಿಕಾರ ಹೊಂದಿದ್ದರೂ ಈ ಪ್ರದೇಶದಲ್ಲಿ ಎಚ್ಚರಿಕೆಯಿಂದಲೇ ಕಾರ್ಯಾಚರಣೆ ಮಾಡಬೇಕಾದ ಪರಿಸ್ಥಿತಿ ಇದೆ.
ಕಳೆದ ಆಗಸ್ಟ್ 8ರಂದು ಜೈಪುರದ ಹಯಾತ್ ಹೋಟೆಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಒಬ್ಬ ಅಪ್ರಾಪ್ತ ಬಾಲಕ ವಧುವಿನ ಕುಟುಂಬದ ₹1.5 ಕೋಟಿ ಮೌಲ್ಯದ ಆಭರಣ ಮತ್ತು ₹1 ಲಕ್ಷ ನಗದು ಹೊಂದಿದ್ದ ಚೀಲವನ್ನು ದೋಚಿ ಪರಾರಿಯಾಗಿದ್ದ. ಅವನ ಬಂಧನದಿಂದಲೇ ಈ ಗ್ಯಾಂಗ್‌ಗಳ ಚಟುವಟಿಕೆ ಬಹಿರಂಗಕ್ಕೆ ಬಂತು.
ಇದೇ ರೀತಿ, 2023ರ ಡಿಸೆಂಬರ್‌ನಲ್ಲಿ ದೆಹಲಿಯ ಮದುವೆ ಸಮಾರಂಭದಲ್ಲಿ 22 ವರ್ಷದ ಯಶ್ ಸಿಸೋಡಿಯಾ ಆಭರಣಗಳ ಚೀಲ ಕದ್ದು ಪರಾರಿಯಾದ ಪ್ರಕರಣಕ್ಕೂ ಈ ಹಳ್ಳಿಗಳ ಗ್ಯಾಂಗ್‌ಗಳೇ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಹಳ್ಳಿಗಳಲ್ಲಿ ಹೊರಗಿನ ಯಾರೇ ಕಾಲಿಟ್ಟರೂ ನಿವಾಸಿಗಳು ತಕ್ಷಣ ಎಚ್ಚರಿಕೆಯಾಗುತ್ತಾರೆ. ಹಳ್ಳಿಯೊಳಗೆ ಅಪರಾಧವೇ ಬದುಕಿನ ಒಂದು ಭಾಗವಾಗಿ ಬೆಳೆದಿರುವುದು ಪೊಲೀಸರಿಗೂ, ಆಡಳಿತಕ್ಕೂ ದೊಡ್ಡ ಸವಾಲಾಗಿದೆ.
ಮಕ್ಕಳ ಭವಿಷ್ಯವನ್ನು ಅಪರಾಧದ ದಾರಿಗೆ ತಳ್ಳುತ್ತಿರುವ ಈ ‘ಕಳ್ಳರ ಕಾಲೇಜು’ಗಳ ಕಾಲೇಜು ಸಮಾಜಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
