ಸುಂಟಿಕೊಪ್ಪದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

Feb 1, 2026 - 17:46
 0  911
ಸುಂಟಿಕೊಪ್ಪದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಸುಂಟಿಕೊಪ್ಪ: ವ್ಯಕ್ತಿ ಕುಟುಂಬ ಮತ್ತು ಸಮಾಜದಲ್ಲಿ ಕುಟುಂಬ ಸಾಮರಸ್ಯ,ನಾಗರೀಕ ಶಿಷ್ಟಚಾರ, ಸ್ವದೇಶಿ ಬಳಕೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯತೆಯೊಂದಿಗೆ ಭಾರತವನ್ನು ವಿಶ್ವಗುರುವಾಗಿಸುವ ಉದ್ದೇಶ ಮತ್ತು ಗುರಿಯನ್ನು ಹಿಂದು ಸಂಗಮ ಕಾರ್ಯಕ್ರಮ ಹೊಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್ ಬೆಂಗಳೂರಿನ ಗುರುರಾಜ ಕುಲಕರ್ಣಿ ಹೇಳಿದರು‌.

ಹಿಂದು ಸಂಗಮ ಆಯೋಜನ ಸಮಿತಿ ಸುಂಟಿಕೊಪ್ಪ ಮಂಡಲದ ವತಿಯಿಂದ ಸುಂಟಿಕೊಪ್ಪದಲ್ಲಿ ಭಾನುವಾರದಂದು ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ಆವರಣದಲ್ಲಿ ನಡೆದ ಹಿಂದು ಸಂಗಮ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಪ್ರತಿಯೊಬ್ಬ ಮನುಷ್ಯನಲ್ಲಿರುವ ದೋಷಗಳನ್ನು ಅಳಿಸಿ ಗುಣಸಂಪನ್ನಾಗಿಸಿ ಕುಟುಂಬ ಸಮಾಜ ಮತ್ತು ದೇಶದ ಅಸ್ತಿಯನ್ನಾಗಿಸುವ ಅತ್ಯುತ್ತಮ ಪ್ರಜೆಗಳನ್ನಾಗಿಸುವ ಧರ್ಮ ಮತ್ತು ಸಂಸ್ಕೃತಿ ನಮ್ಮ ದೇಶದ್ದು ಎಂದು ಅವರು ಬಣ್ಣಿಸಿದರು. ಸಾವಿರ ವರ್ಷಗಳ ಗುಲಾಮಗಿರಿಯಿಂದ ನಾವು ಇತ್ತೀಚೆಗೆ ಹೊರ ಬಂದಿದ್ದು, ನಮ್ಮ ಧರ್ಮ ಸಂಸ್ಕೃತಿ ಆಚರಣೆ ಮತ್ತು ಪದ್ಧತಿ ಪರಂಪರೆಗಳನ್ನು ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಮತ್ತೆ ಜಾಗೃತಿಯನ್ನು ಉಂಟುಮಾಡುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವ ವರ್ಷದಲ್ಲಿ ಹಮ್ಮಿಕೊಂಡಿದ್ದು ಇದನ್ನು ಹಿಂದು ಸಂಗಮ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದು ಅವರು ಹೇಳಿದರು.

 ಇಂದು ವಿಶ್ವದ 190 ದೇಶಗಳಲ್ಲಿ ಯೋಗ ಜನಪ್ರಿಯವಾಗಿದೆ. ಗಣಿತದ ಮೂಲ ಶೂನ್ಯವನ್ನು ಜಗತ್ತಿಗೆ ಕೊಟ್ಟವರು ನಾವು. ಆರ್ಯುವೇದ ಜಗತ್ತಿಗೆ ನಮ್ಮ ಕೊಡುಗೆ ಪರೋಪಕಾರ ಸೇವೆ ತ್ಯಾಗಗಳಿಗೆ ಹೆಸರಾದ ಧರ್ಮ ನಮ್ಮದ್ದು ಎಂದು ಭಾರತ ದೇಶದ ಹಿರಿಮೆ ಗರಿಮೆಗಳನ್ನು ಗುರುರಾಜ ಕುಲಕರ್ಣಿ ವಿಶ್ಲೇಷಿದರು. ಕಾಫಿ ಬೆಳೆಗಾರ ಅಜಿತ್ ಅಪ್ಪಚ್ಚು ಮಾತನಾಡಿ, ಪ್ರಸ್ತುತ ದಿನಮಾನಸದಲ್ಲಿ ಧರ್ಮ ಜಾಗೃತಿ ನಮ್ಮ ಪದ್ಧತಿ, ಪರಂಪರೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯವಶ್ಯ‌ ಮಕ್ಕಳಲ್ಲಿ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಧರ್ಮ ಸಂಸ್ಕಾರ ನೀಡಬೇಕೆಂದು ಕರೆ ನೀಡಿರಲ್ಲದೇ, ಹೊರಗಿನ ಬೆದರಿಕೆಗಳಿಗಾಗಿ ನಾವು ಒಗ್ಗಟಾಗದೆ ನಮ್ಮ ಧರ್ಮ ,ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವು ಒಂದಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಂಟಿಕೊಪ್ಪ ಮಂಡಲ ಹಿಂದು ಸಂಗಮ ಸಮಿತಿಯ ಅಧ್ಯಕ್ಷ ಎಚ್.ಟಿ.ಬಸವರಾಜ್ ಮಾತನಾಡಿ, ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿ ನಮ್ಮ ಸಂಸ್ಕಾರ ಕಲಿದಬೇಕು. ಮಾತೆಯರು ಮತ್ತು ಮಹಿಳೆಯರು ಭಜನೆ ಮತ್ತು ಧರ್ಮ ಸಂಬಂಧವಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.

 ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ವಿವಿಧ ದೇವಾಲಯಗಳಲ್ಲಿ ದಶಕಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ ಹಿರಿಯರಾದ ಮಂಡುವಂಡ ಬೋಜಮ್ಮ, ಜವರಮ್ಮ ಮತ್ತು ಲಕ್ಷ್ಮಿಯಮ್ಮ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮೊದಲಿಗೆ ಸ್ಟೆಪ್‌ಡಾಟ್ ಕಾಂ ತಂಡದಿಂದ ಅತ್ಯಕರ್ಷಕ ಸ್ವಾಗತ ನೃತ್ಯ ನಡೆಯಿತು. ಸುಂಟಿಕೊಪ್ಪ ಮಹಿಳೆಯರು ಮತ್ತು ಮಕ್ಕಳಿಂದ ವಂದೇ ಮಾತರಂ ಗೀತೆಯನ್ನು ಹಾಡುವ ಮೂಲಕ ರಾಷ್ಟ್ರ ಪ್ರೇಮ ಮೆರೆದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಇಲ್ಲಿನ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಸಾಂಪ್ರದಾಯಿಕ ಉಡುಗೆಯೊಂದಿಗೆ ಭವ್ಯವಾದ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಶದೊಂದಿಗೆ ಭಗಧ್ವಜ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಭಜನ ನೃತ್ಯ,ಕೇರಳದ ಚಂಡೆ, ಭಾರತಾಂಬೆಯ ಭಾವಚಿತ್ರ ಅಲಂಕೃತ ತೆರೆದ ಜೀಪಿನಲ್ಲಿ ಇರಿಸಿ ಮೆರವಣಿಗೆಯು ಶ್ರೀ. ಚಾಮುಂಡೇಶ್ವರಿ ಮತ್ತು ಶ್ರೀ.ಮುತ್ತಪ್ಪ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊಂಡಿತು.

 ಮೆರವಣಿಗೆಯಲ್ಲಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ಕಾಫಿ ಬೆಳೆಗಾರರಾದ ಬೋಸ್‌ಮಂದಣ್ಣ, ಅಜಿತ್ ಅಪ್ಪಚ್ಚು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ.ಭಾರತೀಶ್, ರಾಮಸೇವಾ ಸಮಿತಿಯ ಕಾರ್ಯದರ್ಶಿ ಆಶೋಕ್‌ಶೇಟ್, ಪಿ.ಕೆ.ಮುತ್ತಣ್ಣ, ಎಂ.ಎ.ವಸಂತ, ವೈ.ಎಂ.ಕರುಂಬಯ್ಯ, ಡಿ.ನರಸಿಂಹ, ಶಾಂತರಾಂ ಕಾಮತ್,ರಾಮ್ ಗೌತಮ್ , ಎಸ್.ಜಿ.ಶ್ರೀನಿವಾಸ್, ಶ್ರೀ. ಚಾಮುಂಡೇಶ್ವರಿ ಮತ್ತು ಶ್ರೀ.ಮುತ್ತಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಆರ್. ರಮೇಶ್‌ಪಿಳ್ಳೆ, ಗ್ರಾಮದೇವತೆ ಸಮಿತಿಯ ಅಧ್ಯಕ್ಷ ಎ.ಶ್ರೀಧರ, ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಗೌರಿ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿಘ್ನೇಶ್, ಪಿ.ಆರ್.ಸುನಿಲ್‌ಕುಮಾರ್, ದೀನು ದೇವಯ್ಯ, ಧನುಕಾವೇರಪ್ಪ, ರಂಜಿತ್ ಕಾರ್ಯಪ್ಪ, ಬಿ.ಕೆ.ಮೋಹನ್, ರಾಕೇಶ್ವಿ,ವಿ.ಎ.ಸಂತೋಷ್, ವೇಲು, ಸೂರ್ಯಕಾಂತ್, ಮಹೇಂದ್ರ, ನಿಖಿಲ್ ,ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾ ಮೇದಪ್ಪ, ಪ್ರಮುಖರಾದ ಶಿವಮ್ಮ ಮಹೇಶ್, ಶಾಂತಿ, ಗೀತಾ, ಮಂಜುಳಾ,ವಸಂತಿ ಸೇರಿದಂತೆ ಮತ್ತಿತರರು ಇದ್ದರು.

 ಕುಶಾಲನಗರ ಉಪ ವಿಭಾಗದ ಡಿವೈಎಸ್ಪಿ ಚಂದ್ರಶೇಖರ್, ಕುಶಾಲನಗರ ಸಿಪಿಐ ದಿನೇಶ್ ಕುಮಾರ್ ನೇತೃತ್ವದಲ್ಲಿ ಸುಂಟಿಕೊಪ್ಪ ಪಿಎಸ್ ಐ ಮೋಹನ್ ರಾಜ್ ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದರು. ಕಾರ್ಯಕ್ತಮದ ಅಂಗವಾಗಿ ಪಟ್ಟಣದಾದ್ಯಂತ ಫ್ಲೆಕ್ಸ್ ಕೇಸರಿ ಬಾವುಟ, ಕೇಸರಿ ಬಂಟಿಂಗ್ಸ್ ಗಳಿಂದ ಕಂಗೊಳಿಸುತ್ತಿತ್ತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0