ಪ್ರವಾಹ ಪೀಡಿತ ಸಂತ್ರಸ್ತರು ತಮ್ಮ ನೋವು ಹೇಳಿಕೊಳ್ಳುವಾಗ ನನ್ನ ರೆಸ್ಟೋರೆಂಟ್ ನಲ್ಲಿ 50 ರೂಪಾಯಿಯಷ್ಟೇ ವ್ಯಾಪಾರ ನಡೆಯಿತು ಎಂದ ಕಂಗನಾ ರಾಣಾವತ್!

ಮಂಡಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ಸಂಕಷ್ಟದಲ್ಲಿರುವ ಸಂತ್ರಸ್ತರ ಕುಟುಂಬಗಳನ್ನು ನಟಿ-ರಾಜಕಾರಣಿ ಕಂಗನಾ ರಾಣಾವತ್ ಗುರುವಾರ ಭೇಟಿ ಮಾಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಮನಾಲಿಯಲ್ಲಿರುವ ತಮ್ಮ 'ದಿ ಮೌಂಟೇನ್ ಸ್ಟೋರಿ ರೆಸ್ಟೋರೆಂಟ್'ಗೆ ನಲ್ಲೂ ವ್ಯಾಪಾರವಿಲ್ಲ ಎಂದು ಹೇಳಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
“ನಿನ್ನೆ ನನ್ನ ಕೆಫೆ ಕೇವಲ 50 ರೂಪಾಯಿಯ ವಹಿವಾಟು ನಡೆಸಿದೆ. ನಾನು ಸಿಬ್ಬಂದಿಗೆ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಸಂಬಳವನ್ನು ಪಾವತಿಸುತ್ತೇನೆ. ನಾನೂ ಹಿಮಾಚಲಿಯವಳು. ದಯವಿಟ್ಟು ನನ್ನ ನೋವನ್ನು ಅರ್ಥಮಾಡಿಕೊಳ್ಳಿ,” ಎಂದು ಕಂಗನಾ ಹೇಳಿದ್ದರು.
ಈ ವರ್ಷದ ಆರಂಭದಲ್ಲಿ ಆರಂಭವಾದ ದಿ ಮೌಂಟೇನ್ ಸ್ಟೋರಿ ರೆಸ್ಟೋರೆಂಟ್ ಹಿಮಾಚಲದ ಪಾಕಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಪ್ರಚಾರಗೊಂಡಿತ್ತು. ಪ್ರವಾಸೋದ್ಯಮ ಆಧಾರಿತ ಈ ವ್ಯವಹಾರವು ಇತ್ತೀಚಿನ ಭೂಕುಸಿತ ಮತ್ತು ಪ್ರವಾಹದಿಂದ ತೀವ್ರ ಹಿನ್ನಡೆಯನ್ನು ಎದುರಿಸಿದೆ ಎನ್ನಲಾಗಿದೆ.
ಕಂಗನಾ ಅವರು ಸೋಲಾಂಗ್ ಮತ್ತು ಪಲ್ಚನ್ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ BJP ಮುಖಂಡ ಹಾಗೂ ಮನಾಲಿಯ ಮಾಜಿ ಶಾಸಕ ಗೋವಿಂದ್ ಸಿಂಗ್ ಠಾಕೂರ್ ಜೊತೆ ಇದ್ದರು. ಸ್ಥಳೀಯರು 15-16 ಮನೆಗಳನ್ನು ಅಸುರಕ್ಷಿತವೆಂದು ಘೋಷಿಸಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.
ಬಿಯಾಸ್ ನದಿ ಪರ್ವತವನ್ನು ಸವೆಸುತ್ತಿರುವುದರಿಂದ ಸೋಲಾಂಗ್ ಗ್ರಾಮ ಸಂಪೂರ್ಣ ಭೂಕುಸಿತದ ಅಪಾಯದಲ್ಲಿದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಹವಾಮಾನ ಇಲಾಖೆ ಬಿಲಾಸ್ಪುರ್, ಕಾಂಗ್ರಾ, ಮಂಡಿ ಹಾಗೂ ಸಿರ್ಮೌರ್ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಿದೆ. ಭಾರೀ ಮಳೆಯಾಗುತ್ತಿದ್ದು, ಶಿಮ್ಲಾ, ಕಾಂಗ್ರಾ, ಪಾಲಂಪುರ್, ಸುಂದರನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಟಬೊ ಮತ್ತು ಬಜೌರಾ ಪ್ರದೇಶಗಳಲ್ಲಿ ಗಂಟೆಗೆ 33-35 ಕಿ.ಮೀ ವೇಗದ ಗಾಳಿ ಬೀಸುತ್ತಿದೆ ಎಂದು ಹವಾಮಾನ ಕಚೇರಿ ಮಾಹಿತಿ ನೀಡಿದೆ.
ಮಳೆಯ ಪರಿಣಾಮವಾಗಿ ಸಾರಿಗೆ ವ್ಯವಸ್ಥೆ ತೀವ್ರ ಅಸ್ತವ್ಯಸ್ತಗೊಂಡಿದ್ದು, NH-3 ಹಾಗೂ NH-503A ಸೇರಿದಂತೆ ಒಟ್ಟು 566 ರಸ್ತೆಗಳನ್ನು ಮುಚ್ಚಲಾಗಿದೆ. ಮಂಡಿಯಲ್ಲಿ 203, ಕುಲ್ಲು 156, ಶಿಮ್ಲಾ 50 ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ(SEOC) ಅಂಕಿಅಂಶಗಳ ಪ್ರಕಾರ, ಜೂನ್ 20ರಿಂದ ಪ್ರಾರಂಭವಾದ ಮಾನ್ಸೂನ್ ಇದುವರೆಗೆ ಕನಿಷ್ಠ 419 ಜನರನ್ನು ಬಲಿ ತೆಗೆದುಕೊಂಡಿದೆ. ಅವರಲ್ಲಿ 237 ಸಾವುಗಳು ನೇರವಾಗಿ ಮಳೆಯ ಪರಿಣಾಮ, 52 ಭೂಕುಸಿತ, 45 ಇಳಿಜಾರು ಕುಸಿತ, 40 ಪ್ರವಾಹದಲ್ಲಿ ಮುಳುಗಿ, 17 ಮೇಘ ಸ್ಫೋಟ ಮತ್ತು 11 ದಿಢೀರ್ ಪ್ರವಾಹಗಳಿಂದ ಸಂಭವಿಸಿದ್ದು, ಇದೇ ಅವಧಿಯಲ್ಲಿ 182 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ.