ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕ ಕುಟುಂಬಕ್ಕೆ ವಸತಿ ಭಾಗ್ಯ

ಕುಶಾಲನಗರ : ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕರು ಹಾಗೂ ವಿಕಲಚೇತನ ಕುಟುಂಬವೊಂದಕ್ಕೆ ನಿರ್ಮಿಸಿಕೊಡಲು ಉದ್ದೇಶಿಸಿರುವ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.
ಇಲ್ಲಿನ ಜನತಾ ಕಾಲೊನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ವಿಕಲಚೇತನ ಕುಟುಂಬ ನಾದ್ಯ ಎಂಬುವವರಿಗೆ ಟ್ರಸ್ಟ್ ವತಿಯಿಂದ ಸುಂದರನಗರ ಗ್ರಾಮದಲ್ಲಿ 3 ಸೆಂಟ್ ಜಾಗ ಖರೀದಿ ಮಾಡಿ ಅಂದಾಜು ರೂ.8.5 ಲಕ್ಷ ವೆಚ್ಚದಲ್ಲಿ ವಸತಿ ಭಾಗ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಕೂಡಿಗೆ ಜುಮ್ಮಾ ಮಸೀದಿ ಧರ್ಮಗುರು ಹೈದರಾಲಿ ಶಾಹದಿ ಖತ್ತಿಬ್ ಹಾಗೂ ಟ್ರಸ್ಟ್ ಅಧ್ಯಕ್ಷ ಎಂ.ಎಚ್.ಮಹಮ್ಮದ್ ಹಾಗೂ ಪದಾಧಿಕಾರಿಗಳು ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು.
ಅಧ್ಯಕ್ಷ ಎಂ.ಎಚ್.ಮಹಮ್ಮದ್ ಮಾತನಾಡಿ, ಕೊಡಗಿನ ಬಡವರ ಬೆಳಕು ಚಾರಿಟೇಬಲ್ ಟ್ರಸ್ಟ್ ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಜಾತಿ,ಭೇದ,ಧರ್ಮ ಮರೆತು ಸಮಾಜದಲ್ಲಿ ಬಡವರ ಹಾಗೂ ನಿರ್ಗತಿಕರ ಏಳಿಗೆಗೆ ಶ್ರಮಿಸುತ್ತಿದೆ.ಬಡ ಹೆಣ್ಣು ಮಕ್ಕಳಿಗೆ ಕಲ್ಯಾಣ ಭಾಗ್ಯ, ವಸತಿ ರಹಿತ ನಿರ್ಗತಿಕ ಕುಟುಂಬಗಳಿಗೆ ವಸತಿ ಭಾಗ್ಯ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ ಎಂದರು.
ಉದ್ಯಮಿ ದಾವೂದ್ ಮಾತನಾಡಿ, ಟ್ರಸ್ಟ್ ವತಿಯಿಂದ ಹಾಗೂ ದಾನಿಗಳ ಸಹಕಾರದಿಂದ ಬಡವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ ಬಡ ಹೆಣ್ಣು ಮಗಳು ನಾದ್ಯಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದೇವೆ.ಈ ಪುಣ್ಯ ಕಾರ್ಯಕ್ಕೆ ದಾನಿಗಳು ಆರ್ಥಿಕ ಸಹಾಯ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಟ್ರಸ್ಟಿನ ಉಪಾಧ್ಯಕ್ಷ ಮಾಪ್ಲೆ ತೋಡಿನ ಮೂಸಾ ಹಾಜಿ,ಪದಾಧಿಕಾರಿಗಳಾದ ಕಡಂಗ ಫಥಾ ಬಾಯಿ,ಕಂಬಿಬಾಣೆ ಮೋಯ್ದಿನ್ ಹಾಜಿ,ಕೆ.ಸಿ.,ಮೊಹಿದ್ದೀನ್ ,ಆಶ್ರಫ್, ಎಂ.ಎಚ್,ಶರೀಫ್,ಕೆ.ಪಿ.ಬದ್ರುದ್ದೀನ್, ಸಲಾಮ್, ಅಬ್ದುಲ್ ಸಲಂ, ಮಹಮ್ಮದ್ ಸಾಲಿ, ಟಿ.ಪಿ.ನಾಸೀರ್ ಮತ್ತಿತರರು ಪಾಲ್ಗೊಂಡಿದ್ದರು.