ಕೊಡವ ಸಮುದಾಯ ಹಿಂದೂ ಧರ್ಮಕ್ಕೆ ಸೇರಿದಲ್ಲ: ಎಂ.ಉಳ್ಳಿಯಡ ಪೂವಯ್ಯ

ಕೊಡವ ಸಮುದಾಯ ಹಿಂದೂ ಧರ್ಮಕ್ಕೆ ಸೇರಿದಲ್ಲ: ಎಂ.ಉಳ್ಳಿಯಡ ಪೂವಯ್ಯ

ಮಡಿಕೇರಿ: ಜಾತಿಗಣತಿ ವಿಚಾರದಲ್ಲಿ ಕೊಡವ ಸಮುದಾಯಕ್ಕೆ ಸಂಬಂಧಿಸಿದಂತೆ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ, ಕೊಡವ ಸಮುದಾಯ ಹಿಂದೂ ಧರ್ಮಕ್ಕೆ ಸೇರಿದಲ್ಲ ಎಂದು ಹಿರಿಯ ಕೊಡವ ಅಭಿಮಾನಿಗಳ ಸಂಘದ ಅಭಿಮಾನಿ.ಎಂ.ಉಳ್ಳಿಯಡ ಪೂವಯ್ಯ ಹೇಳಿದರು.

 ಕೊಡವರದ್ದು ಮೂಲತಃ ಕೊಡವ ಧರ್ಮ. ಸುಮಾರು ೧೫ನೇ ಶತಮಾನದವರೆಗೆ ಕೊಡಗಿನಲ್ಲಿ ಕೊಡವ ಧರ್ಮವೇ ಏಕೈಕ ಧರ್ಮವಾಗಿತ್ತು. ಆ ಕಾಲಘಟ್ಟದ ಮುಗ್ಧ ಕೊಡವರಿಗೆ ಮಾತೃ ಭಾಷೆ ಕೊಡವ ಭಾಷೆ ಮಾತ್ರ ಗೊತ್ತಿದ್ದ ಭಾಷೆ ಆಗಿತ್ತು. ಬಾಳೋ ಪಾಟ್ ಸೇರಿದ ಜಾನಪದ ಸಂಸ್ಕೃತಿಯ ಸಿರಿ ಸೋಗಿನಲ್ಲಿ ಅಂದಿನವರದು ತೃಪ್ತ, ಮುಗ್ಧ ಜೀವನ ಕ್ರಮ ಆಗಿತ್ತು. ಅಲ್ಲದೇ ಆ ಕಾಲದ ಕೊಡವರಿಗೆ ಲೋಕ ಜ್ಞಾನದ ಕೊರತೆ ಬಹಳಷ್ಟು ಇತ್ತು. ಹೀಗೆ ಸಾಗಿ ಬಂದ ಅನಾಗರೀಕ ಕೊಡವರ ಬದುಕು ೧೬ನೇ ಶತನಮಾನದ ಆದಿ ಭಾಗದವರೆಗೂ ಕ್ಷತ್ರಿಯ ಪರಂಪರೆಯ ನೆರಳಿನಲ್ಲಿಯೇ ಮುಂದುವರೆದಿತ್ತು.

ಕೊಡವ ಧರ್ಮ, ಕೊಡವ ಜಾತಿ, ಕೊಡವ ಮಾತೃ ಭಾಷೆಗೆ ಸೀಮಿತವಾಗಿದ್ದ ಅಂದಿನ ಜನಾಂಗ ಕಾಡು ಬೇಟೆ, ಶತ್ರು ಬೇಟೆಗಳತ್ತ ವಿಶೇಷ ಆಸಕ್ತಿ ಹೊಂದಿದ್ದರು ಎಂದು ವಿವರಿಸಿದರು. ೧೬ನೇ ಶತಮಾನದ ಸುಮಾರು ಮಧ್ಯಭಾಗದಲ್ಲಿ ಕೊಡಗಿಗೆ ಆಗಮಿಸಿದ ಇಕ್ಕೇರಿ ವಂಶಸ್ಥರಾದ ಲಿಂಗಾಯತ ಅರಸರು ಸುಮಾರು ೧೫೪೦ ರಿಂದ ೧೮೩೪ ರವರೆಗೆ ಅಂದಾಜು ೨೯೦ ವರ್ಷಗಳ ಕಾಲ ಕೊಡಗಿನಲ್ಲಿ ದೇಶಾಡಳಿತ ನಡೆಸಿದರು.

ಈ ದೀರ್ಘಾವಧಿಯು ಕೊಡಗಿನಲ್ಲಿ ಸಾಕಷ್ಟು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬಹಳಷ್ಟು ಅಭಿವೃದ್ಧಿ ಕ್ರಾಂತಿಗೆ ಎಡೆಮಾಡಿತ್ತು. ಅಲ್ಲಿಯ ತನಕ ಒಳಗೇ ವಿಜೃಂಭಿಸುತ್ತಿದ್ದ ಕೊಡವ ಧರ್ಮವು ಕ್ರಮೇಣ ಸಾಕಷ್ಟು ಬದಲಾವಣೆಗೆ ಒಳಪಟ್ಟಿತ್ತು. ಆದರೆ, ಇಂದು ನಮ್ಮ ಧರ್ಮವನ್ನು ಕೊಡವ ಎಂದು ನಮೂದಿಸಲು ಅವಕಾಶ ಸಿಕ್ಕಿದೆ. ಆದ್ದರಿಂದ ಕೊಡವ ಜನಾಂಗದವರು ಧರ್ಮದ ಕಾಲಂನಲ್ಲಿ ಕೊಡವ ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕೊಡವ ಅಭಿಮಾನಿಗಳ ಸಂಘದ ಅಭಿಮಾನಿಗಳಾದ ಕೊಕ್ಕಲೇರ.ಎ.ಕಾರ್ಯಪ್ಪ, ಮಣವಟ್ಟಿರ ಪಾಪು ಚಂಗಪ್ಪ, ಉಳ್ಳಿಯಡ ಡಾಟಿ ಪೂವಯ್ಯ ಇದ್ದರು.